
ಯಲ್ಲಾಪುರ: ತಾಲೂಕಿನ ಕುಂದರಗಿ ಗ್ರಾಪಂ ವ್ಯಾಪ್ತಿಯ ಮಾವಿನಕಟ್ಟಾದ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಅಗತ್ಯವಿರುವ ಒಂದು ಅಂಬುಲೆನ್ಸನ್ನು ಒದಗಿಸಿಕೊಡುವಂತೆ ಆಗ್ರಹಿಸಿ ಇತ್ತೀಚೆಗೆ ಬಿಜೆಪಿ ಕಾರ್ಯಕರ್ತರು, ಗ್ರಾ.ಪಂ. ಸದಸ್ಯರು, ವಿಧಾನಪರಿಷತ್ ಸದಸ್ಯ ಶಾಂತಾರಾಮ ಸಿದ್ದಿಯವರಿಗೆ ಮನವಿ ಪತ್ರ ನೀಡಿದರು.
ಮಾವಿನ ಕಟ್ಟಾ ಗ್ರಾಪಂ ಕೇಂದ್ರವು ಯಲ್ಲಾಪುರ ತಾಲೂಕಿನಿಂದ 32.ಕಿ.ಮೀ, ಶಿರಸಿ ಹಾಗೂ ಮುಂಡಗೋಡುಗಳಿಂದ 35 ಕಿಮೀ ದೂರದಲ್ಲಿದೆ. ಇಲ್ಲಿ ಹಿಂದುಳಿದ ಸಮುದಾಯದ ಸಿದ್ದಿ, ಗೌಳಿ ಮತ್ತು ಮರಾಠಿ ಜನರು ವಾಸಿಸಿದ್ದಾರೆ. ತೀರಾ ಆರ್ಥಿಕವಾಗಿ, ಹಿಂದುಳಿದ ವಿವಿಧ ಜನಾಂಗದ ಜನರು ಅಧಿಕ ಸಂಖ್ಯೆಯಲ್ಲಿದ್ದು, ಸುಮಾರು 10 ಸಾವಿರ ಜನ ಸಂಖ್ಯೆಯಿರುವ ಈ ಪ್ರದೇಶದಲ್ಲಿ ಒಂದು ಸುಸಜ್ಜಿತ ಪ್ರಾಥಮಿಕ ಆರೋಗ್ಯ ಕೇಂದ್ರ ಕುಂದರಗಿಯಲ್ಲಿದೆ. ಇಲ್ಲಿರುವ ಉತ್ತಮ ವೈದ್ಯರು ಹಾಗೂ ಸಿಬ್ಬಂದಿಗಳು ಅಗತ್ಯವಿದ್ದವರಿಗೆ ಸಾಕಷ್ಟು ಉತ್ತಮ ಚಿಕಿತ್ಸೆ ನೀಡುತ್ತಿದ್ದಾರೆ.
ಇಲ್ಲಿನ ರೋಗಿಗಳಿಗೆ ಹೆಚ್ಚಿನ ಚಿಕಿತ್ಸೆ ಅಗತ್ಯವಿದ್ದರೆ, ಅವರನ್ನು ತಾಲೂಕಾ ಆಸ್ಪತ್ರೆಗೆ ಅಥವಾ ಜಿಲ್ಲಾ ಆಸ್ಪತ್ರೆಗೆ ಕರೆದೊಯ್ಯಲು ಆರೋಗ್ಯ ಕೇಂದ್ರದಲ್ಲಿ ಸೂಕ್ತ ವಾಹನ ವ್ಯವಸ್ಥೆ ಇಲ್ಲದ ಕಾರಣ, ಈ ಪ್ರದೇಶದ ಸಂಪೂರ್ಣ ಮಾಹಿತಿಯಿರುವ ವಿಧಾನ ಪರಿಷತ್ ಸದಸ್ಯರಾದ ಶಾಂತಾರಾಮ ಸಿದ್ದಿಯವರು ತಮ್ಮ ಪ್ರದೇಶಾಭಿವೃದ್ಧಿ ನಿಧಿಯ ನೆರವಿನಿಂದ 1 ಆಂಬುಲೆನ್ಸ್ನ್ನು ಆರೋಗ್ಯ ಕೇಂದ್ರಕ್ಕೆ ಒದಗಿಸಿಕೊಂಡುವಂತೆ ವಿನಂತಿ ಪತ್ರದಲ್ಲಿ ವಿವರಿಸಲಾಗಿದೆ.
ಗ್ರಾ.ಪಂ. ಸದಸ್ಯರಾದ ಗಣೇಶ ಹೆಗಡೆ, ವಿನಾಯಕ ಭಟ್ಟ, ಅರುಣಕುಮಾರ ಗೌಡ, ಕೃಷ್ಣಮೂರ್ತಿ ನಾಯ್ಕ ಹಾಗೂ ಸಾಮಾಜಿಕ ಕಾರ್ಯಕರ್ತ ರಾಘು ಕುಂದರಗಿ ಉಪಸ್ಥಿತರಿದ್ದರು.
Leave a Comment