ಯಲ್ಲಾಪುರ : ಬರುವ ಅಗಷ್ಟ 13 ರಂದು ರಾಷ್ಟ್ರೀಯ ಲೋಕ ಅದಾಲತ್ ಜರುಗಲಿದ್ದು, ಈ ಮೂಲಕ ಸಾಧ್ಯವಾದಷ್ಟು ಪ್ರಕರಣಗಳನ್ನು ಬಗೆಹರಿಸುವ ಉದ್ದೇಶ ಹೊಂದಿದ್ದೇವೆ ಎಂದು ಸಿವಿಲ್ ನ್ಯಾಯಾಧೀಶರಾದ ಲಕ್ಷ್ಮೀಬಾಯಿ ಬಸನಗೌಡ ಪಾಟೀಲ್ ತಿಳಿಸಿದರು.
ಪಟ್ಟಣದ ನ್ಯಾಯಲಯದಲ್ಲಿ ನಡೆದ ಪತ್ರಿಕಾ ಘೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ ಬಾರಿಯ ಲೋಕ ಅದಾಲತ್ ಸಂಪೂರ್ಣ ಯಶಸ್ವಿಯಾಗಿದ್ದು 669 ಪೂರ್ವದಾವಾ ಪ್ರಕರಣಗಳು ಸೇರಿದಂತೆ ಒಟ್ಟಾರೆ 1256 ಪ್ರಕರಣಗಳನ್ನು ಇತ್ಯರ್ಥಪಡಿಸಲಾಗಿದೆ. ಈ ಬಾರಿ ಇನ್ನೂ ಹೆಚ್ಚಿನ ಪ್ರಕರಣಗಳನ್ನು ರಾಜಿ ಮುಖಾಂತರವಾಗಿ ಬಗೆಹರಿಸಿ ಜನಸಾಮಾನ್ಯರ ಹಣ ಹಾಗೂ ಸಮಯ ಎರಡನ್ನೂ ಉಳಿಸಬಹುದಾಗಿದೆ. ಆಸ್ತಿ ಪ್ರಕರಣ, ಕೌಟುಂಬಿಕ ಕಲಹ, ವೈವಾಹಿಕ ಕಲಹ, ಕಾರ್ಮಿಕ ವಿವಾದ, ಹಣಕಾಸಿನ ವಿವಾದ ಸೇರಿದಂತೆ ಇತರೆ ಪೂರ್ವದಾವಾ ಪ್ರಕರಣಗಳನ್ನು ಬಗೆಹರಿಸಿಕೊಳ್ಳಬಹುದು ಹಾಗೂ ಲೋಕ ಅದಾಲತ್‌ನಲ್ಲಿ ನೀಡಿದ ತೀರ್ಪಿಗೆ ಪ್ರಶ್ನೆಮಾಡಿ ಮೇಲ್ದರ್ಜೆಯ ಕೋರ್ಟ್‌ಗೆ ಮನವಿಯನ್ನು ಸಲ್ಲಿಸಲೂ ಸಹ ಅಧಿಕಾರವಿಲ್ಲದಿರುವುದರಿಂದ ಪ್ರಕರಣಗಳು ಸುಲಭವಾಗಿ ಇತ್ಯರ್ಥಗೊಳ್ಳುತ್ತವೆ. ಲೋಕ ಅದಾಲತ್ ಸಮಯದಲ್ಲಿ ಜನನ ಪ್ರಮಾಣ ಪತ್ರವನ್ನು ಸಹ ಸುಲಭವಾಗಿ ಪಡೆಯಬಹುದಾಗಿದೆ ಎಂದರು.
Leave a Comment