ಯಲ್ಲಾಪುರ : ಮಳೆಯಿಂದ ಹಾನಿಗೊಳಗಾದವರಿಗೆ ಮಾನದಂಡಗಳ ಹೊರತಾಗಿ, ಮಾನವೀಯತೆ ಹಾಗೂ ಪರಿಸ್ಥಿತಿಯನ್ನು ಅವಲೋಕಿಸಿ, ತುರ್ತಾಗಿ ಪರಿಹಾರ ಧನವನ್ನು ನೀಡಬೇಕೆಂದು ಜಿಲ್ಲಾ ಉಸ್ತುವಾರಿ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಹಾಗೂ ಕಾರ್ಮಿಕ ಖಾತೆ ಸಚಿವ ಶಿವರಾಮ ಹೆಬ್ಬಾರ್ ಅಧಿಕಾರಿಗಳಿಗೆ ಆದೇಶಿಸಿದ್ದಾರೆ.
ಪಟ್ಟಣದ ಅಡಿಕೆ ಭವನದಲ್ಲಿ ನಡೆದ ಯಲ್ಲಾಪುರ ವಿಧಾನ ಸಭಾ ಕ್ಷೇತ್ರದ ಪಕೃತಿ ವಿಕೋಪ ಪ್ರಗತಿ ಪರಿಶಿಲನಾ ಸಭೆಯಲ್ಲಿ, ಮಳೆಯಿಂದಾದ ಹಾನಿಗಳ ಕುರಿತು ಅಧಿಕಾರಿಗಳಿಂದ ಮಾಹಿತಿ ಪಡೆದು ಮಾತನಾಡಿದ ಸಚಿವ ಶ್ರೀನಿವಾಸ ಪೂಜಾರಿ, ಮಳೆಯಿಂದ ಮನೆಗಳಿಗೆ ಬಾಗಶಃ ಹಾನಿಯಾಗಿದ್ದರೆ, ತಕ್ಷಣವೇ ಅವರಿಗೆ 50 ಸಾವಿರ ಪರಿಹಾರವನ್ನು ನೀಡಿ. ಮಾರ್ಗ ಸೂಚಿಗಳ ಪ್ರಕಾರ ಎಣಿಕೆ ಮಾಡಿ ಪರಿಹಾರ ನೀಡುವುದು ಬೇಡ. ಇನ್ನೆರಡು ದಿನಗಳಲ್ಲಿ ಎಲ್ಲರಿಗೂ ಪರಿಹಾರ ಧನ ನೀಡುವಂತಾಗಬೇಕು ಎಂದು ಮುಂಡಗೋಡ ಹಾಗೂ ಯಲ್ಲಾಪುರ ತಹಶೀಲ್ದಾರರಿಗೆ ತಿಳಿಸಿದ್ದಾರೆ.
ಸಚಿವ ಶಿವರಾಮ ಹೆಬ್ಬಾರ್ ಮಾತನಾಡಿ, ಮಳೆಯಿಂದ ತೀವೃ ಹಾನಿಗೊಳಗಾಗಿರುವ ಶಾಲೆ ಹಾಗೂ ಅಂಗನವಾಡಿ ಕೇಂದ್ರಗಳನ್ನು ಜಿಲ್ಲಾಧಿಕಾರಿಗಳಿಂದ ದೊರೆಯುವ ನೆರೆ ಪರಿಹಾರದ 2 ಲಕ್ಷ ಮೊತ್ತದಲ್ಲಿ ತತಕ್ಷಣದಲ್ಲಿ ಸರಿಪಡಿಸಿ ಮಕ್ಕಳಿಗೆ ಯಾವುದೇ ರೀತಿಯ ತೊಂದರೆ ಆಗದಂತೆ ನೋಡಿಕೊಳ್ಳಬೇಕು. ಒಂದು ವೇಳೆ ತೊಂದರೆಯಾದಲ್ಲಿ ಅದಕ್ಕೆ ಬಿಇಓ ಹಾಗೂ ಪಿಡಿಓ ಗಳು ನೇರವಾಗಿ ಜವಾಬ್ದಾರರಾಗುತ್ತೀರಿ. ಅಂತೆಯೇ ಎಲ್ಲಾ ಇಲಾಖೆಗಳ ಎಲ್ಲ ಅಧಿಕಾರಿಗಳು ಅಧಿಕ ಪರಿಶ್ರಮದೊಂದಿಗೆ, ಜನರಿಗೆ ಯಾವುದೇ ತೊಂದರೆ ಆಗದಂತೆ ಕಾರ್ಯ ನಿರ್ವಹಿಸಬೇಕು. ಕೆಲಸ ಮಾಡಲು ಮನಸ್ಸಿಲ್ಲದವರು ತಿಳಿಸಿದ್ದಲ್ಲಿ, ತಕ್ಷಣ ಅವರನ್ನು ವರ್ಗಾವಣೆ ಮಾಡಲು ಹಿಂಜರಿಕೆ ಮಾಡುವುದಿಲ್ಲ ಎಂದು ಎಚ್ಚರಿಸಿದರು.
ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ರಾಜು ಮೊಗವೀರ್, ಸಹಾಯಕ ಆಯುಕ್ತ ದೇವರಾಜ್ ಆರ್., ಉಪ ಅರಣ್ಯ ಸಂರಕ್ಷಣಾಧಿಕಾರಿ ಎಸ್.ಜಿ.ಹೆಗಡೆ, ಪ.ಪಂ. ಅಧ್ಯಕ್ಷೆ ಸುನಂದಾ ದಾಸ್, ಉಪಾಧ್ಯಕ್ಷೆ ಶ್ಯಾಮಿಲಿ ಪಾಟಣಕರ್, ತಹಶೀಲ್ದಾರ್ ಶ್ರೀಕೃಷ್ಣ ಕಾಮ್ಕರ್, ತಾ.ಪಂ. ಕಾರ್ಯನಿರ್ವಹಣಾಧಿಕಾರಿ ಜಗದೀಶ ಕಮ್ಮಾರ್ ಎಲ್ಲ ಇಲಾಖೆಯ ಅಧಿಕಾರಿಗಳು, ಪಿಡಿಓಗಳು ಉಪಸ್ಥಿತರಿದ್ದರು.
ಎಷ್ಟು ಹಾನಿ ?
ತಾಲೂಕಿನಲ್ಲಿ ಒಟ್ಟೂ 29 ಮನೆಗೆ ಹಾನಿಯಾಗಿದ್ದು 24 ಭಾಗಶಃ, 4 ತೀವೃ ಹಾಗೂ 1 ಸಂಪೂರ್ಣ ಹಾನಿಯಾಗಿದೆ. ಅಂದಾಜು 52 ಹೆಕ್ಟೆರ್ ಪ್ರದೇಶದಲ್ಲಿ ಅಡಿಕೆಗೆ ಕೊಳೆ ರೋಗ ಆರಂಭವಾಗಿದೆ. ಒಟ್ಟೂ 48 ಶಾಲೆಗಳಲ್ಲಿ ಕೊಠಡಿಗಳಿಗೆ ಹಾನಿಯಗಿದ್ದು ಮೇಲ್ಚಾವಣೆ, ಕಂಪೌಂಡ್ ಗೋಡೆ ಕುಸಿತದ ಬಗ್ಗೆ ವರದಿಯಾಗಿದೆ. 19 ಅಂಗನವಾಡಿ ಕೇಂದ್ರಗಳಿಗೆ ತೊಂದರೆಯಾಗಿದ್ದು, 1 ಕಟ್ಟಡ ಬಳಕೆಗೆ ಯೋಗ್ಯವಾಗದೆ ಬೇರೆ ಕಟ್ಟಡಕ್ಕೆ ಸ್ಥಳಾಂತರಿಸಲಾಗಿದೆ. ಝೆಡ್‌ಪಿ ವ್ಯಾಪ್ತಿಯ 52 ರಸ್ತೆಗಳು ಹಾಳಾಗಿದ್ದು, 4 ಕೆರೆ ಹಾನಿ ಸೇರಿದಂತೆ ಒಟ್ಟಾರೆ 12 ಕೋಟಿಯಷ್ಟು ಹಾನಿ ಅಂದಾಜಿಸಲಾಗಿದೆ. ಪಿಡಬ್ಲ್ಯೂಡಿ ವ್ಯಾಪ್ತಿಯಲ್ಲಿ 46 ಕಿಮಿ ಅಷ್ಟು ರಾಜ್ಯ ಹೆದ್ದಾರಿ, 12 ಸರ್ಕಾರಿ ಕಟ್ಟಡಗಳಿಗೆ ಒಟ್ಟಾರೆ 53 ಕೋಟಿಯಷ್ಟು ಹಾನಿಯಾಗಿದೆ. ಹೆಸ್ಕಾಂ ಗೆ ಸೇರಿದ 836 ಕಂಬಗಳು ಮುರಿದಿದ್ದು, ಈಗಾಗಲೇ 749 ಕಂಬಗಳನ್ನು ಬದಲಾಯಿಸಲಾಗಿದೆ. 60 ಟ್ರಾನ್ಸ್‌ಫಾರ್ಮರ್ ಸೇರಿದಂತೆ ಒಟ್ಟಾರೆ 177 ಲಕ್ಷ ಹಾನಿ ಉಂಟಾಗಿದೆ. ಪಟ್ಟಣ ವ್ಯಾಪ್ತಿಯ ಕಾಳಮ್ಮನಗರ ಬಳಿ ರಾಜಕಾಲುವೆಗೆ ಹಾನಿಯುಂಟಾಗಿದ್ದು, 1.5 ಕೋಟಿ ವೆಚ್ಚದಲ್ಲಿ ದುರಸ್ಥಿ ಅವಶ್ಯಕತೆಯಿದೆ.
Leave a Comment