ಯಲ್ಲಾಪುರ :ಹಿರಿಯ ಪತ್ರಕರ್ತ ವಿಠ್ಠಲದಾಸ ಕಾಮತರಿಗೆ ಡಾ. ಪಾಟೀಲ್ ಪುಟ್ಟಪ್ಪ ಸಾಧನಾ ರಾಷ್ಟ್ರೀಯ ಶ್ರೇಷ್ಠ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಧಾರವಾಡದ ಕನ್ನಡ ಸಾಹಿತ್ಯ ಪರಿಷತ್ ಭವನದಲ್ಲಿ ಶುಕ್ರವಾರ ನಡೆದ ಸಮಾರಂಭದಲ್ಲಿ ಡಾ ಪಾಟೀಲ ಪುಟ್ಟಪ್ಪ ರಾಷ್ಟ್ರೀಯ ಶ್ರೇಷ್ಠ ಪ್ರಶಸ್ತಿ ಹಾಗೂ ಛಾಯಾಗ್ರಾಹಕ ರಾಜ್ಯ ಶ್ರೇಷ್ಠ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಿತು.
ರೂ.10 ಸಾವಿರ ನಗದು, ಸ್ಮರಣಿಕೆ, ಫಲಕ ಒಳಗೊಂಡ ನಾಡೋಜ ಡಾ. ಪಾಟೀಲ ಪುಟ್ಟಪ್ಪ ಹೆಸರಿನ ರಾಷ್ಟ್ರೀಯ ಶ್ರೇಷ್ಠ ಪತ್ರಕರ್ತ ಪ್ರಶಸ್ತಿಯನ್ನು ಹೊಸದಿಗಂತ ಪತ್ರಿಕೆ ಹುಬ್ಬಳ್ಳಿ ಸ್ಥಾನಿಕ ವ್ಯವಸ್ಥಾಪಕ ವಿಠ್ಠಲದಾಸ ಕಾಮತ್ ಅವರಿಗೆ ಹಾಗೂ ರೂ.5 ಸಾವಿರ ನಗದು ಒಳಗೊಂಡ ಶ್ರೇಷ್ಠ ಛಾಯಾಗ್ರಾಹಕ ರಾಜ್ಯ ಪ್ರಶಸ್ತಿ ಹಿರಿಯ ಛಾಯಾಗ್ರಾಹಕ ಮಹಾದೇವಯ್ಯ ಪಾಟೀಲ ಅವರಿಗೆ ಪ್ರದಾನಮಾಡಲಾಯಿತು.
ಪತ್ರಕರ್ತ ಮಲ್ಲಿಕಾರ್ಜುನ ಸಿದ್ದಣ್ಣನವರ ಪತ್ರಿಕೋದ್ಯಮದ ಪ್ರಸ್ತುತ ಸವಾಲುಗಳ ಕುರಿತು ಉಪನ್ಯಾಸ ನೀಡಿದರು. ಸಮಾರಂಭದಲ್ಲಿ ಸಾಧನಾ ಸಂಸ್ಥೆ ಅಧ್ಯಕ್ಷೆ ವಿಶ್ವೇಶ್ವರಿ ಹಿರೇಮಠ, ಪ್ರೊ. ನಾಗರಾಜ ಹಳ್ಳಿ, ಡಾ. ಇಸೆಬೇಲ್ಲಾ ಝೇವಿಯರ್, ಮಾರ್ತಾಂಡಪ್ಪ ಕತ್ತಿ, ಪ್ರಕಾಶ ಉಡಕೇರಿ ಅನೇಕರು ಇದ್ದರು.
ಕಳೆದ ಮೂರು ದಶಕಗಳಿಂದ ಪತ್ರಿಕಾ ಕ್ಷೇತ್ರದಲ್ಲಿರುವ ವಿಠ್ಠಲದಾಸ ಕಾಮತ್ ಪ್ರಸ್ತುತ ಹೊಸದಿಗಂತ ಪತ್ರಿಕೆಯ ಹುಬ್ಬಳ್ಳಿ ಆವೃತ್ತಿ ಮುಖ್ಯಸ್ಥರಾಗಿದ್ದಾರೆ. ಅಂಕೋಲಾ ಪತ್ರಕರ್ತರ ಸಂಘಕ್ಕೆ ಎರಡು ಬಾರಿ ಅಧ್ಯಕ್ಷರಾಗಿದ್ದ ಇವರು ಪ್ರಸ್ತುತ ಉ.ಕ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘಕ್ಕೆ ಎರಡನೇ ಬಾರಿ ಉಪಾಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ಉ.ಕ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ನೀಡುವ ಶ್ಯಾಮರಾವ ದತ್ತಿನಿಧಿ ಪ್ರಶಸ್ತಿ, ಭಟ್ಕಳ ಪತ್ರಕರ್ತರು ನೀಡುವ ಭಟ್ಟಾಕಳಂಕ ಪ್ರಶಸ್ತಿಗೆ ಭಾಜನರಾಗಿದ್ದಾರೆ.
Leave a Comment