ಯಲ್ಲಾಪುರ : ಕಪ್ಪು ಅರಿಶಿಣ ಮಾರಾಟ ಮಾಡಲೆಂದು ಕರೆಯಿಸಿಕೊಂಡು ವ್ಯಕ್ತಿಯೋರ್ವರ ಮೇಲೆ ಹಲ್ಲೆ ನಡೆಸಿ ದರೋಡೆ ಮಾಡಿದ್ದ 4 ಕುಖ್ಯಾತ ದರೋಡೆಕೋರರನ್ನು ಯಲ್ಲಾಪುರ ಪೊಲೀಸರು ಬಂಧಿಸಿರುವ ಘಟನೆ ನಡೆದಿದೆ.
ತಾಲೂಕಿನ ಬಿಳಕಿ ಗ್ರಾಮದ ನಿವಾಸಿಗಳಾದ ಮೊತೇಶ ಸಂತಾನ್ ಸಿದ್ದಿ, ಹುಲಿಯಾ ಲಕ್ಷ್ಮಣ ಸಿದ್ದಿ ಹಾಗೂ ಜಡಗಿನಕೊಪ್ಪ ನಿವಾಸಿಗಳಾದ ಪ್ರಕಾಶ ಕೃಷ್ಣ ಸಿದ್ದಿ ಮತ್ತು ಪಿಲೀಪ್ ಕೃಷ್ಣ ಸಿದ್ದಿ ಬಂಧಿತ ಆರೋಪಿಗಳಾಗಿದ್ದು, ಜೂನ್ 14 ರಂದು ಮಹಾರಾಷ್ಟ್ರದ ನಿವಾಸಿಯಾಗಿರುವ ಅಂತೋನಿ ದಿವ್ಯಕುಮಾರ ಪ್ರಾನ್ಸಿಸ್ ಪರೇರಾ ಅವರು ತಾಲೂಕಿನ ಬೊಮ್ಮನಹಳ್ಳಿ ಗ್ರಾಮದ ಶಿಡ್ಲಗುಂಡಿ ರಸ್ತೆಯಲ್ಲಿ ತನ್ನ ಸ್ನೇಹಿತರೊಂದಿಗೆ ಕಾರಿನಲ್ಲಿ ಹೋಗುತ್ತಿರುವಾಗ ಕಪ್ಪು ಅರಿಶಿಣ ವ್ಯಾಪಾರಕ್ಕಾಗಿ ಕರೆಯಿಸಿಕೊಂಡು, ಹಲ್ಲೆ ಮಾಡಿ ನಗದು ಹಣ ಮತ್ತು ಬಂಗಾರದ ಉಂಗುರ, ಮೊಬೈಲ್ ಫೋನ್ ಸೇರಿದಂತೆ ಒಟ್ಟೂ 14.30,000/-ರೂ ಬೆಲೆಯ ಸ್ವತ್ತನ್ನು ದರೋಡೆ ಮಾಡಿಕೊಂಡು ಹೋಗಿದ್ದರು.
ಈ ಕುರಿತು ಪ್ರಕರಣ ದಾಖಲಿಸಕೊಂಡು ತನಿಖೆ ನಡೆಸಿದ ಪೊಲೀಸರು, ಖಚಿತ ಮಾಹಿತಿಯ ಮೇರೆಗೆ ದಾಳಿ ನಡೆಸಿ ಹಲ್ಸಕಂಡ ಕ್ರಾಸ್ ಬಳಿ ಆರೋಪಿಗಳನ್ನು ವಶಕ್ಕೆ ಪಡೆದು ವಿಚಾರಣೆ ಮಾಡಿದ್ದು, ಆರೋಪಿತರಿಂದ ಕೃತ್ಯಕ್ಕೆ ಉಪಯೋಗಿಸಿದ ಪ್ಲಾಟಿನಾ ಮೋಟಾರ ಸೈಕಲ್ ಹಾಗೂ ದರೋಡೆ ಮಾಡಿದ ಮೋಬೈಲ್‌ನ್ನು ಜಪ್ತುಪಡಿಸಿಕೊಂಡಿರುತ್ತಾರೆ.
ಸಿಪಿಐ ಸುರೇಶ ಯಳ್ಳೂರ ಅವರ ನೇತ್ರತ್ವದಲ್ಲಿ ಪಿ.ಎಸ್.ಐ ಅಮೀನಸಾಬ್ ಎಮ್. ಅತ್ತಾರ, ಎ.ಎಸ್.ಐ ವಿಠಲ ಮಾಲವಾಡಕರ ಹಾಗೂ ಸಿಬ್ಬಂದಿಗಳಾದ ಬಸವರಾಜ ಹಗರಿ, ಮಹ್ಮದ ಶಪೀ, ಗಜಾನನ, ಬಸವರಾಜ ಮಳಗನಕೊಪ್ಪ, ಚನ್ನಕೇಶವ, ಪರಶುರಾಮ ಕಾಳೆ, ಅಮರ, ಪರಶುರಾಮ ದೊಡ್ಡನಿ, ನಂದೀಶ, ಸುರೇಶ ಕಂಟ್ರಾಕ್ಟರ್, ಶೋಭಾ ನಾಯ್ಕ, ಸೀಮಾ ಗೌಡ ಆರೋಪಿತರನ್ನು ಬಂಧಿಸುವಲ್ಲಿ ಪ್ರಮುಖ ಪಾತ್ರ ವಹಿಸಿರುತ್ತಾರೆ.
Leave a Comment