ಯಲ್ಲಾಪುರ : ಅಮೃತ ಮಹೋತ್ಸವ ಆಚರಿಸುತ್ತಿರುವ ಈ ಸಂದರ್ಭದಲ್ಲಿ ಪ್ರತಿಯೊಬ್ಬರೂ ರಾಷ್ಟ್ರ ಪ್ರೇಮ ಹಾಗೂ ರಾಷ್ಟ್ರ ಗೌರವ ಹೆಚ್ಚಿಸಿಕೊಳ್ಳಬೇಕು. ದೇಶದ ಪ್ರಗತಿಯಲ್ಲಿ ಪ್ರತಿಯೊಬ್ಬರೂ ಶ್ರಮಿಸಬೇಕು. ಭವ್ಯ ಭಾರತಕ್ಕೆ ನಾವೆಲ್ಲ ನಮ್ಮ ಕೈಲಾದ ಸೇವೆ ಮಾಡೋಣ ಎಂದು ವಿಧಾನ ಪರಿಷತ್ತಿನ ಸದಸ್ಯ ಶಾಂತಾರಾಮ ಸಿದ್ದಿ ಹೇಳಿದರು.
ಪಟ್ಟಣದ ವಿಶ್ವದರ್ಶನ ಶಿಕ್ಷಣ ಸಂಸ್ಥೆಯಲ್ಲಿ ಸ್ವಾತಂತ್ರ್ಯ ಅಮೃತ ಮಹೋತ್ಸವ ದಿನಾಚರಣೆ ಸಂದರ್ಭದಲ್ಲಿ ವಿದ್ಯಾರ್ಥಿಗಳಿಗೆ ಸಂದೇಶ ನೀಡುತ್ತಾ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದ ಅವರು, ದೇಶದ ಪ್ರತಿಯೊಬ್ಬ ಪ್ರಜೆಗೂ ಅವರದೇ ಆದ ಗೌರವ ಇದೆ. ದೇಶದ ಘನತೆ ಗೌರವ ಕಾಪಾಡುವ ಕೆಲಸ ನಮ್ಮಿಂದಾಗಬೇಕು. ದೇಶ ನಮಗೆ ಏನು ಕೊಟ್ಟಿದೆ ಎಂದು ಕೇಳುವ ಬದಲು ದೇಶಕ್ಕೆ ನಾವೇನು ಕೊಡುಗೆ ಕೊಡುತ್ತೇವೆ ಎನ್ನುವುದು ಮುಖ್ಯ ಹಾಗಾಗಿ ನಾವೆಲ್ಲರೂ ಈ ದೇಶದ ಸತ್ಪ್ರಜೆಗಳಾಗಿ ಬಾಳೋಣ ಎಂದು ಅವರು ಕರೆನೀಡಿದರು.
ಸಂಸ್ಥೆಯ ಉಪಾಧ್ಯಕ್ಷ ಶ್ರೀನಿವಾಸ ಹೆಬ್ಬಾರ್ ಧ್ವಜಾಜರೋಹಣ ನೆರವೇರಿಸಿದರು. ಗಣೇಶ ಭಟ್ ಸ್ವಾಗತಿಸಿ, ಕಾರ್ಯಕ್ರಮ ನಿರ್ವಹಿಸಿದರು. ಹರ್ಷಿತಾ ಭಟ್ಟ ಹಾಗೂ ಸಂಗಡಿಗರು ವಂದೇಮಾತರಂ ಗೀತೆ ಹಾಗೂ ದೇಶಭಕ್ತಿ ಗೀತಗಳನ್ನು ಹಾಡಿದರು. ಎಲ್ಲ ವಿದ್ಯಾರ್ಥಿಗಳು ಘೋಷಣೆ ಕೂಗಿದರು. ಕನ್ನಡ ಮಾಧ್ಯಮ ಪ್ರೌಢಶಾಲೆ ಮುಖ್ಯಾಧ್ಯಾಪಕರಾದ ಮುಕ್ತಾ ಶಂಕರ್ ಸರ್ವರನ್ನು ವಂದಿಸಿದರು.
ಧ್ವಜಾರೋಹಣ ಕಾರ್ಯಕ್ರಮದಲ್ಲಿ ನಿವೃತ್ತ ನೌಕಾ ಸೇನಾಧಿಕಾರಿ ಅರವಿಂದ ಶಿಗ್ಗಾಂವ, ಉದ್ಯಮಿ ಕೆ. ಪಿ.ಶೆಟ್ಟಿ ಮಣಿಪಾಲ, ಸಂಸ್ಥೆಯ ವ್ಯವಸ್ಥಾಪಕ ಗುರುರಾಜ ಕುಂದಾಪುರ, ವಿವಿಧ ವಿಭಾಗಗಳ ಮುಖ್ಯಸ್ಥರು, ಎಲ್ಲ ಉಪನ್ಯಾಸಕರು, ಶಿಕ್ಷಕ ಶಿಕ್ಷಕೇತರ ಸಿಬ್ಬಂದಿಗಳು ಹಾಗೂ ಎಲ್ಲಾ ವಿಭಾಗಗಳ ವಿದ್ಯಾರ್ಥಿಗಳು ಹಾಜರಿದ್ದರು.
Leave a Comment