ಭಟ್ಕಳ: ಉತ್ತರ ಕನ್ನಡ ಜಿಲ್ಲೆಯಲ್ಲಿ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯನ್ನು ಮಂಜೂರು ಮಾಡುವ ವಿಷಯವಾಗಿ ಕಾರವಾರ ಶಾಸಕಿ ರೂಪಾಲಿ ನಾಯ್ಕಅವರು ಗುರುವಾರ ವಿಧಾನಸಭಾ ಅಧಿವೇಶನದಲ್ಲಿ ಗಮನ ಸೆಳೆಯಲು ಪ್ರಶ್ನೆ ಕೇಳಿ ದ್ವನಿ ಎತ್ತಿದಾಗ , ನಮ್ಮ ಜಿಲ್ಲೆಯ ಅವರೇ ಆದ ಸಬಾಧ್ಯಕ್ಷರು , ಶಿರಸಿ-ಸಿದ್ದಾಪುರ ಕ್ಷೇತ್ರದ ಶಾಸಕ ವಿಶವೇಶ್ವರ್ ಹೆಗಡೆ ಕಾಗೇರಿ ಅವರು ರೂಪಾಲಿ ನಾಯ್ಕ ಅವರಿಗೆ ಮಾತನಾಡಲು ಅವಕಾಶ ನೀಡದೆ , ಉತ್ತರ ಕನ್ನಡ ಜಿಲ್ಲೆಯ ಜನರ ಧ್ವನಿಯನ್ನು ಮೊಟಕುಗೊಳಿಸಿದ ಕಾಗೇರಿ ಅವರ ಈ ನಡೆಯನ್ನು ಸಾಮಾಜಿಕ ಹೋರಾಟಗಾರ , ವಕೀಲ ರವೀಂದ್ರ ನಾಯ್ಕ ಶಿರಸಿ ಅವರು ಖಂಡಿಸಿದ್ದಾರೆ.
ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಅಂದರೆ ಸಾಕು ಮೊದಲು ನೆನಪಾಗೋದೇ ಉತ್ತರ ಕನ್ನಡ ಜಿಲ್ಲೆಯ ಜನತೆ. ಜಿಲ್ಲೆಯಲ್ಲೊಂದು ಅಪಘಾತ ನಡೆದರೆ ಸಾಕು ಹುಬ್ಬಳ್ಳಿಗೋ ಇಲ್ಲವೇ ಮಣಿಪಾಲಕ್ಕೋ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯನ್ನು ಹುಡುಕಿಕೊಂಡು ಅಲೆಯಬೇಕಾದ ಸ್ಥಿತಿ ಈ ಜಿಲ್ಲೆಯ ಜನರದ್ದಾಗಿದೆ. ಹೀಗಾಗಿ ನಮ್ಮ ಜಿಲ್ಲೆಗೆ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯನ್ನು ರಾಜ್ಯ ಸರ್ಕಾರ ಕಟ್ಟಿಕೊಡಬೇಕು ಅಂತಾ ಉತ್ತರ ಕನ್ನಡ ಜಿಲ್ಲೆಯ ಜನತೆ ಅನೇಕ ವರ್ಷಗಳಿಂದ ಸೋಶಿಯಲ್ ಮೀಡಿಯಾದಲ್ಲಿ ಅಭಿಯಾನವನ್ನು ನಡೆಸಲುತ್ತಲೇ ಇದ್ದಾರೆ. ಈ ಬಾರಿಯಂತೂ ಫ್ರಿಡಂ ಪಾರ್ಕ್ನಲ್ಲಿ ಪ್ರತಿಭಟನೆ ಕೂಡ ನಡೆಸಿದ್ದರು. ಆದರೂ ಸಹ ಉತ್ತರ ಕನ್ನಡ ಜನತೆಯ ಒಕ್ಕೊರಲ ಕೂಗಿಗೆ ರಾಜ್ಯ ಸರ್ಕಾರ ಕಿವಿಗೊಟ್ಟಂತೆ ಕಾಣುತ್ತಿಲ್ಲ.
ಎರಡು ತಿಂಗಳ ಹಿಂದೆ ಶಿರೂರು ಟೋಲ್ಗೇಟ್ನಲ್ಲಿ ವೇಗವಾಗಿ ಬಂದ ಆಂಬುಲೆನ್ಸ್ ಟೋಲ್ಗೆ ಗುದ್ದಿದ ಪರಿಣಾಮ ಆಂಬುಲೆನ್ಸ್ನ ಒಳಗಿದ್ದ ರೋಗಿ ಸೇರಿದಂತೆ ನಾಲ್ವರು ಸಾವನ್ನಪ್ಪಿದ್ದರು. ಹೊನ್ನಾವರದ ಶ್ರೀದೇವಿ ಆಸ್ಪತ್ರೆಯಿಂದ ಉಡುಪಿಯ ಆದರ್ಶ ಆಸ್ಪತ್ರೆಗೆ ರೋಗಿಯನ್ನು ಸಾಗಿಸುವ ಮಧ್ಯದಲ್ಲಿ ಈ ಅಪಘಾತ ಸಂಭವಿಸಿತ್ತು. ನಮ್ಮ ಜಿಲ್ಲೆಯಲ್ಲಿಯೇ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಇರುತ್ತಿದ್ದರೆ ಹೀಗಾಗುತ್ತಿರಲಿಲ್ಲವೆಂದು ಉತ್ತರ ಕನ್ನಡ ಜಿಲ್ಲೆಯ ಜನತೆ ಆಕ್ರೋಶ ಹೊರಹಾಕಿದ್ದರು.
ಉತ್ತರ ಕನ್ನಡ ಜಿಲ್ಲಾ ಜನತೆಯ ಆಕ್ರೋಶದ ಬಳಿಕ ಸಚಿವ ಡಾ.ಕೆ ಸುಧಾಕರ್ ಹಾಗೂ ಸಿಎಂ ಬೊಮ್ಮಾಯಿ ಸೇರಿದಂತೆ ಅನೇಕ ನಾಯಕರು ಉತ್ತರ ಕನ್ನಡ ಜಿಲ್ಲೆಯಲ್ಲಿ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣವಾಗುತ್ತೆಂಬ ಭರವಸೆ ನೀಡಿದ್ದರು. ಹೀಗಾಗಿ ಸರ್ಕಾರದಿಂದ ಶುಭಸುದ್ದಿಯ ನಿರೀಕ್ಷೆಯಲ್ಲಿದ್ದ ಉತ್ತರ ಕನ್ನಡ ಜನತೆಗೆ ಮತ್ತೊಮ್ಮೆ ನಿರಾಶೆಯಾಗಿದೆ. ಉತ್ತರ ಕನ್ನಡಕ್ಕೆ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯನ್ನು ಒದಗಿಸು ಪ್ರಸ್ತಾವನೆಯನ್ನು ಆರ್ಥಿಕ ಇಲಾಖೆ ತಿರಸ್ಕರಿಸಿದೆ.
Leave a Comment