ಹೊನ್ನಾವರ:
ಜಿಲ್ಲೆಯಲ್ಲಿ ಪಕ್ಷದ ಹಾಗೂ ಮಾಜಿ ಮುಖ್ಯಮಂತ್ರಿ ಕುಮಾರಸ್ವಮಿ ಅವರ ಮೇಲೆ ಜನರ ವಿಶ್ವಾಸವಿದೆ. ಪಕ್ಷದ ಅಭ್ಯರ್ಥಿಗಳು ಗೆಲ್ಲುವ ವಿಶ್ವಾಸವನ್ನು ಜೆಡಿಎಸ್ ರಾಜ್ಯ ಮುಖಂಡ, ಸೊರಬ ಶಾಸಕ ಮಧು ಬಂಗಾರಪ್ಪ ವ್ಯಕ್ತಪಡಿಸಿದರು.
ಪಟ್ಟಣದ ಖಾಸಗಿ ಹೊಟೆಲಿನಲ್ಲಿ ತಾಲೂಕು ಜೆಡಿಎಸ್ ಘಟಕದ ವತಿಯಿಂದ ಸೋಮವಾರ ನಡೆದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು. ಕೇಂದ್ರದಲ್ಲಿ ಬಿಜೆಪಿ ಸರ್ಕಾರವಿದ್ದು, ರಾಜ್ಯದಲ್ಲಿ ಕಾಂಗ್ರೆಸ್ ಆಡಳಿತ ನಡೆಸುತ್ತಿದೆ. ರಾಜ್ಯಮಟ್ಟದಲ್ಲಿ ಭೀಕರ ಬರಗಾಲದ ಪರಿಸ್ಥಿತಿಯಿದ್ದು, ಕಾಂಗ್ರೆಸ್ ಮತ್ತು ಬಿಜೆಪಿ ರೈತರನ್ನು ನಿರ್ಲಕ್ಷಿಸಿದೆ. ಮುಂದಿನ ದಿನಗಳಲ್ಲಿ ಜನರೇ ಅವರಿಗೆ ತಕ್ಕ ಶಿಕ್ಷೆ ನೀಡಲಿದ್ದಾರೆ. ಎರಡೂ ಪಕ್ಷಗಳು ಜನರ ವಿಶ್ವಾಸ ಕಳೆದುಕೊಳ್ಳುವುದು ನಿಶ್ಚಿತ. ಕಳೆದ ವಿಧಾನಸಭಾ ಚುನಾವಣಾ ಸಮಯದಲ್ಲಿ ಅಭ್ಯರ್ಥಿಗಳ ಆಯ್ಕೆಯ ಗೊಂದಲದಿಂದ ಕೆಲವು ಕ್ಷೇತ್ರಗಳಲ್ಲಿ ಅಲ್ಪ ಮತಗಳಿಂದ ನಮ್ಮ ಪಕ್ಷದ ಅಭ್ಯರ್ಥಿಗಳು ಸೋಲುವಂತಾಯಿತು. ಪಕ್ಷದ ವರಿಷ್ಠರ ನಿರ್ಣಯದಂತೆ ಸರ್ವಸಮ್ಮತ ಅಭ್ಯರ್ಥಿಯನ್ನು ಆಯ್ಕೆ ಮಾಡಿ ಶೀಘ್ರದಲ್ಲಿಯೇ ಪಟ್ಟಿ ಬಿಡುಗಡೆ ಮಾಡುತ್ತೇವೆ. ಕುಮಟಾ, ಹೊನ್ನಾವರ ವಿಧಾನಸಭಾ ಕ್ಷೇತ್ರದಲ್ಲಿ ಜೆಡಿಎಸ್ ಪಕ್ಷ ಸುಭದ್ರವಾಗಿದ್ದು, ಸಂಘಟನೆಯ ಮೂಲಕ ಪಕ್ಷವನ್ನು ಬಲಪಡಿಸುತ್ತೇವೆ. ಕಳೆದ ಬಾರಿ ಪಕ್ಷದ ಅಭ್ಯರ್ಥಿಯಾಗಿದ್ದ ದಿನಕರ ಶೆಟ್ಟಿ ಈಗ ಎಲ್ಲಿದ್ದಾರೋ ಗೊತ್ತಿಲ್ಲ. ಅವರು ಪಡೆದ ಮತಗಳು ವ್ಯಕ್ತಿಗತ ಮತಗಳಲ್ಲಿ ಪಕ್ಷದ ಮತಗಳು. ಜೆಡಿಎಸ್ಗೆ ಪಾರಂಪರಿಕ ಶಕ್ತಿಯಿದೆ.
ಕಾಂಗ್ರೆಸ್ ತೊರೆದ ಯಶೋಧರ ನಾಯ್ಕ ಅವರನ್ನು ಕುಮಟಾ ವಿಧಾನಸಭಾ ಕ್ಷೇತ್ರದಲ್ಲಿ ಜೆಡಿಎಸ್ ಸೇರುತ್ತಾರೆ, ಅವರಿಗೇ ಟಿಕೇಟ್ ನಿಡುತ್ತಾರೆ ಎಂಬ ಮಾತು ಕೇಳಿಬರುತ್ತಿದೆ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು ಯಶೋಧರ ನಾಯ್ಕ ಅವರು ನನ್ನ ಆತ್ಮೀಯರು,್ಷವರು ಮೊದಲು ಜೆಡಿಎಸ್ನಲ್ಲಿದ್ದರು. ನಂತರ ಬಂಗಾರಪ್ಪನವರ ಸಮಾಜವಾದಿ ಪಕ್ಷದ ಅಭ್ಯರ್ಥಿಯಾಗಿದ್ದರು. ಅವರು ಪಕ್ಷಕ್ಕೆ ಬರಲು, ಸ್ವಾಗತವಿದೆ. ಆದರೆ ಅವರಿಗೆ ಟಿಕೇಟ್ ನೀಡುವ ಭರವಸೆ ನೀಡಿಲ್ಲ. ಈಗ ಕುಮಟಾ ವಿಧಾನಸಭಾ ಕ್ಷೇತ್ರದಲ್ಲಿ ಪ್ರದೀಪ ನಾಯಕ ಅವರಿಗೆ ಸಂಘಟನಾ ಉಸ್ತುವಾರಿ ನೀಡಲಾಗಿದೆ. ಮುಂದಿನ ದಿನಗಳಲ್ಲಿ ವಿವಿಧ ಪಕ್ಷಗಳ ಮುಖಂಡರು ಪಕ್ಷಕ್ಕೆ ಬರಲಿದ್ದಾರೆ ಎಂದು ಹೇಳಿದರು. ಟಿಕೇಟ್ ನೀಡುವುದನ್ನು ವರಷ್ಟರು ಮತ್ತು ಸ್ಥಳಿಯ ಕಾರ್ಯಕರ್ತರು ತೀರ್ಮಾನಿಸುತ್ತಾರೆ. ಇದಕ್ಕೆ ಪ್ರದೀಪ ನಾಯಕರು ಸಹಮತ ವ್ಯಕ್ತಪಡಿಸದ್ದಾರೆ ಎಂದರು.
ಉಪಚುನಾವಣೆ ಪ್ರಚಾರದ ವೇಳೆ ಮಾಜಿಮುಖ್ಯಮಂತ್ರಿ ಯಡಿಯೂರಪ್ಪ ಮುಂದಿನ ಮುಖ್ಯಂತ್ರಿ ತಾನೇ ಎಂದು ಹೇಳಿಕೊಳ್ಳುತ್ತಿದ್ದಾರೆ. ಅವರಿಗೆ ಬುದ್ದಿ ಕಡಿಮೆಯೋ, ಭ್ರಮಣೆಯೋ ಎಂದು ವ್ಯಂಗ್ಯವಾಡಿದ ಅವರು ಮುಂದಿನ ಮುಖ್ಯಮಂತ್ರಿಯಾಗಿ ರೈತರ ಸಾಲ ಮನ್ನಾ ಮಾಡುತ್ತೇನೆ ಎಂದು ಘೋಷಿಸುತ್ತಿದ್ದಾರೆ. ರೈತರ ಅನೇಕ ಸಮಸ್ಯೆಗಳಿದ್ದು ಅದನ್ನು ಪರಿಹರಿಸುವುದನ್ನು ಬಿಟ್ಟು ಬೇಜವಾಬ್ದಾರಿತನದಿಂದ ಮಾತನಾಡುತ್ತಿದ್ಧಾರೆ. ಅವರು ಮುಖ್ಯ ಮಂತ್ರಿಯಾಗಿದ್ದಾಗ ರೈತರ ಸಾಲವನ್ನು ಮನ್ನಾ ಮಾಡಿ ಎಂದರೆ ನಾನು ದುಡ್ಡು ಪ್ರಿಂಟ್ ಮಾಡುವ ಮಷಿನ್ ಇಟ್ಟಿದ್ದೇನೆಯೇ ಎಂದು ಕೇಳಿದ್ದರು. ಈಗ ರೈತರ ಸಾಲಮನ್ನಾ ಮಾಡಿ ಎಂದು ಕೂಗುತ್ತಿದ್ದಾರೆ. ಸುಳ್ಳು ಭರವಸೆ ನೀಡಿ ಮತಭಿಕ್ಷೆ ಬೇಡುವ ಯಡಿಯೂರಪ್ಪ ಅವರು ಕಾಂಗ್ರೆಸ್ನ ಮಜಿಮುಖ್ಯಮಂತ್ರಿ ವೀರಪ್ಪ ಮೊಯ್ಲಿಯನ್ನು ಮೀರಿಸುವ ಸುಳ್ಳಿನ ಸರದಾರ ಎಂದು ವ್ಯಂಗ್ಯವಾಡಿದರು.
ಕಾಂಗ್ರೆಸ್ ಪಕ್ಷವು ಮುಳುಗುತ್ತಿರುವ ದೋಣಿ ಈ ಬಗ್ಗೆ ನಾನು ಏನು ಹೇಳಲು ಇಚ್ಚಿಸುವುದಿಲ್ಲ. ಮಾಜಿ ಮುಖ್ಯಮಂತ್ರಿ ಬಂಗಾರಪ್ಪಾಜಿಯವರು ಸಮಾಜವಾದಿ ನೆಲೆಯಿಂದ ಬಂದವರು ಅವರ ಅಭಿಮಾನಿಗಳು ಜಿಲ್ಲೆಯದ್ಯಂತ ಇದ್ದಾರೆ. ಜೆಡಿಎಸ್ ಪಕ್ಷ ಜಿಲ್ಲೆಯಲ್ಲಿ ಹೆಚ್ಚಿನ ಸ್ಥಾನಗಳನ್ನು ಗಳಿಸಲಿದೆ ಎಂದರು. ನೀವು ಕಾಂಗ್ರೆಸ್ಗೆ ಸೇರುತ್ತಿದ್ದಿರಿ ಎಂಬ ಮಾತು ಕೇಳಿ ಬರುತ್ತಿದೆ ಎಂದು ಪತ್ರಕರ್ತರು ಕೇಳಿದ ಪ್ರಶ್ನೆಗೆ ಇದನ್ನು ಅಲ್ಲಗಳೆದ ಅವರು ಖಾಲಿ ಸ್ಥಾನವನ್ನು ತುಂಬುವ ನಾಯಕ ನಾನಲ್ಲ ಎಂದು ಹೇಳಿದರು.
ಜೆಡಿಎಸ್ ರಾಜ್ಯ ಸಮಿತಿ ಸದಸ್ಯ ಗಣಪಯ್ಯ ಗೌಡ, ಜಿಲ್ಲಾಧ್ಯಕ್ಷ ಬಿ.ಆರ್.ನಾಯ್ಕ, ತಾಲೂಕು ಅಧ್ಯಕ್ಷ ಸುಬ್ರಾಯ ಗೌಡ, ಜಿ.ಪಂ.ಸದಸ್ಯ ಹಾಗೂ ಕ್ಷೇತ್ರದ ಉಸ್ತುವಾರಿ ಪ್ರದೀಪ ನಾಯಕ, ಮುಖಂಡರಾದ ಗಜು ನಾಯ್ಕ, ಪಿ.ಟಿ.ನಾಯ್ಕ, ಈಶ್ವರ ನಾಯ್ಕ, ಶ್ರೀಪಾದ ನಾಯ್ಕ, ಕಮಲಾಕರ ಮುಕ್ರಿ, ರಾಘವೇಂದ್ರ ಮಡಿವಾಳ ಇತರರು ಇದ್ದರು.
Leave a Comment