ಕಾರವಾರ:
ಶಿವಶರಣೆ ಹೇಮರಡ್ಡಿ ಮಲ್ಲಮ್ಮ ಜಯಂತಿ ಕಾರ್ಯಕ್ರಮವನ್ನು ಬುಧವಾರ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಆಯೋಜಿಸಲಾಯಿತು. ಜಿಲ್ಲಾಧಿಕಾರಿ ಎಸ್.ಎಸ್.ನಕುಲ್ ಹೇಮರಡ್ಡಿ ಮಲ್ಲಮ್ಮರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಗೌರವ ಸಲ್ಲಿಸಿದರು.
ಹೇಮರಡ್ಡಿ ಮಲ್ಲಮ್ಮ ಕುರಿತು ವಿಶೇಷ ಉಪನ್ಯಾಸ ನೀಡಿದ ಕಾರವಾರ ಆಕಾಶವಾಣಿ ಕೇಂದ್ರದ ಅನ್ನಪೂರ್ಣ ಹೂಗಾರ್, ಹೇಮರಡ್ಡಿ ಮಲ್ಲಮ್ಮ ಆಂಧ್ರಪ್ರದೇಶದಲ್ಲಿ ಹುಟ್ಟಿದರೂ, ಕರ್ನಾಟಕದಲ್ಲಿ ಪೂಜನೀಯಳಾಗಿ ಉಳಿದಿದ್ದಾಳೆ. ಮಹಿಳಾ ಶೋಷಣೆಗೆ ಸಾವಿರಾರು ವರ್ಷಗಳ ಇತಿಹಾಸವಿದೆ. ಶಿವಶರಣೆ ಹೇಮರಡ್ಡಿ ಮಲ್ಲಮ್ಮ ತನ್ನ ಗಂಡನ ಮನೆಯವರ ಕಿರುಕುಳ ತಾಳಿಕೊಂಡು, ಶಿವನನ್ನು ಪ್ರತ್ಯಕ್ಷವಾಗಿ ಒಲಿಸಿಕೊಂಡು ಮಾಡಿದ ಸಾಧನೆ ಮಹಿಳೆಯರಿಗೆ ಸ್ಪೂರ್ತಿದಾಯಕವಾಗಿದೆ ಎಂದರು. ಸಮಾಜದ ವಿವಿಧ ಕ್ಷೇತ್ರಗಳಲ್ಲಿ ಮಹಿಳೆ ತನ್ನದೇ ಆದ ಛಾಪು ಮೂಡಿಸಿದ್ದಾಳೆ. ಪುರುಷರಿಗೆ ಸಮಾನವಾಗಿ ಬೆಳೆಯುತ್ತಿದ್ದಾಳೆ. ಆಧುನಿಕ ಯುಗದಲ್ಲಿ ಗೃಹಿಣಿ, ಉದ್ಯೋಗಿ, ಡಾಕ್ಟರ್, ವಿಜ್ಞಾನಿಯಾಗಿ ಪುರುಷರಿಗೆ ತಾನೇನೂ ಕಡಿಮೆ ಇಲ್ಲ ಎನ್ನುತ್ತಾ ಮುನ್ನುಗ್ಗುತ್ತಿದ್ದಾಳೆ. ತನ್ನ ಅಸ್ತಿತ್ವ ಉಳಿಸಿಕೊಳ್ಳಲು ಯಾವುದೇ ರೀತಿಯ ಹೋರಾಟಕ್ಕೆ ಸಿದ್ಧಳಾಗಿಯೇ ನಿಂತಿದ್ದಾಳೆ. ಇದಕ್ಕೆಲ್ಲಾ ಮುಖ್ಯವಾಗಿ ತಲೆತಲಾಂತರಗಳಿಂದ ಪರಂಪರೆಯ ದ್ಯೋತಕವಾಗಿರುವ ಶಿವಶರಣೆ ಹೇಮರಡ್ಡಿ ಮಲ್ಲಮ್ಮನಂತಹ ಮಹಾಸಾಧ್ವಿಗಳ ಜೀವನ ಚರಿತ್ರೆ ಪ್ರೇರಣೆಯಾಗಿದೆ ಎಂದರು.
ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಹಾಯಕ ನಿರ್ದೇಶಕ ಶಫಿ ಸಾದುದ್ದೀನ್ ಸ್ವಾಗತಿಸಿದರು. ಅಪರ ಜಿಲ್ಲಾಧಿಕಾರಿ ಎಚ್.ಪ್ರಸನ್ನ ವೇದಿಕೆಯಲ್ಲಿ ಉಪಸ್ಥಿತರಿದ್ದರು.
Leave a Comment