ದಾಂಡೇಲಿ:
ಉತ್ತರ ಕನ್ನಡ ಜಿಲ್ಲಾ ವಕ್ಫ ಬೋರ್ಡನ ಕಚೇರಿಯನ್ನು ಕಾರವಾರದಿಂದ ಶಿರಸಿಗೆ ಸ್ಥಳಾಂತರಸಲು ಮುಂದಾಗಿರುವುದು ಸರಿಯಾದ ಕ್ರಮವಲ್ಲ. ಕಾರವಾರದಲ್ಲಿಯೇ ಈ ಕಚೇರಿ ಮುಂದುವರೆಯಬೇಕು ಎಂದು ಸಮಾಜಿಕ ಕಾರ್ಯಕರ್ತ, ಮುಸ್ಲಿಂ ಸಮುದಾಯದ ಪ್ರಮುಖ ಅಕ್ರಂ ಖಾನ್ ಒತ್ತಾಯಿಸಿದ್ದಾರೆ.
ಈ ಬಗ್ಗೆ ಮಂಗಳವಾರ ಸಂತೋಷ್ ಹೊಟೆಲ್ ಸಭಾಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡುತ್ತಿದ್ದ ಅವರು, ಈ ಒತ್ತಾಯದ ಮನವಿಯನ್ನು ಸರಕಾರಕ್ಕೆ, ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಜಿಲ್ಲಾಧಿಕಾರಿಗಳಿಗೂ, ರಾಜ್ಯ ವಕ್ಫ ಮಂಡಳಿಗೂ ರವಾನಿಸಿದ್ದೇವೆ ಎಂದಿದ್ದಾರೆ.
ಜಿಲ್ಲಾ ವಕ್ಫ ಬೋರ್ಡ ಸಮಿತಿಯ ಕಚೇರಿ ಸ್ಥಳಾಂತರ ವಿಷಯಕ್ಕೂ ಮುನ್ನ ಜಿಲ್ಲಾ ವಕ್ಫ ಮಂಡಳಿಯಲ್ಲಿ ಚರ್ಚಿಸಿ ನಿರ್ಣಯ ಕೈಗೊಳ್ಳಬೇಕಿತ್ತು. ಆದರೆ ಅದ್ಯಾವುದನ್ನೂ ಮಾಡದೇ ಏಕಾಏಕೀ ಈ ತೀರ್ಮಾನ ಕೈಗೊಂಡಿರುವುದು ಸರಿಯಲ್ಲ. ಕಾರವಾರದಲ್ಲಿಯೇ ಜಿಲ್ಲಾಧಿಕಾರಿಗಳ ಕಾರ್ಯಾಲಯವಿದ್ದು, ಜಿಲ್ಲಾಧಿಕಾರಿಗಳ ಹಾಗೂ ಇತರೆ ಕೆಲಸಕ್ಕೆ ಹೋದವರು ವಕ್ಫ ಮಂಡಳಿಯ ಕೆಲಸವನ್ನೂ ಮುಗಿಸಿ ಬರಲು ಅನುಕೂಲ ವಾಗುತ್ತದೆ. ಶಿರಸಿಯಲ್ಲಿ ವಕ್ಫ ಮಂಡಳಿ ಕಾರ್ಯಾಲಯವಾದರೆ ಅದು ಕಷ್ಟವಾಗುತ್ತದೆ. ಇದು ವಕ್ಫ ಮಂಡಳಿಯ ಸಲಹಾ ಸಮಿತಿಯ ಬಿನ್ನಾಭಿಪ್ರಾಯಕ್ಕೂ ಅವಕಾಶವಾದಂತಾಗಿದ್ದು, ಇದಕ್ಕೆ ಅವಕಾಶ ನೀಡದೇ ಮೊದಲಿನಂತೆಯೇ ವಕ್ಫ ಕಚೇರಿಯನ್ನು ಕಾರವಾರದಲ್ಲಿಯೇ ಮುಂದುವರೆಸಬೇಕೆಂದು ಒತ್ತಾಯಿಸಿದ್ದಾರೆ.
ನಗರಸಭೆ ಮಾಜಿ ಸದಸ್ಯ ಫೀರೋಜ ಫಿರ್ಜಾದೆ ಮಾತನಾಡಿ ಈಗಿನ ಜಿಲ್ಲಾ ವಕ್ಫ ಬೋರ್ಡನ ಅಧ್ಯಕ್ಷರು ಯಾರಿಗೂ ಪರಿಚಯವಿಲ್ಲ. ಅವರಿಂದ ಯಾವ ಕೆಲಸವೂ ಸಾದ್ಯವಿಲ್ಲ. ಅವರು ಸರ್ವಾಧಿಕಾರಿಯಾಗಿದ್ದಾರೆ. ಕೆಲವರ ಕೈಗೊಂಬೆಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಅವರನ್ನು ತಕ್ಷಣ ಬದಲಾಯಿಸಬೇಕು ಒತ್ತಾಯಿಸಿದರು. ನಗರಸಭೆಯ ಉಪಾಧ್ಯಕ್ಷ ಅಷ್ಪಾಕ ಶೇಖ, ಬಿಜೆಪಿ ಜಿಲ್ಲಾ ಕಾರ್ಯಕಾರಿಣಿ ಸದಸ್ಯ ಹಾಗೂ ಸಾಮಾಜಿಕ ಕಾರ್ಯಕರ್ತ ಅಬ್ದುಲ್‍ವಹಾಬ್ ಬಾನ್ಸರಿ ಮಾತನಾಡಿದರು.
ಸುದ್ದಿಗೋಷ್ಠಿಯಲ್ಲಿ ಬಾ.ಜ.ಪ ಅಲ್ಪ ಸಂಖ್ಯಾತ ವಿಭಾಗದ ಜಿಲ್ಲಾಧ್ಯಕ್ಷ ರಫಿಕ್ ಹುದ್ದಾರ, ದಾಂಡೇಲಿ ಘಟದ ಅಧ್ಯಕ್ಷ ರಿಯಾಜ ಖಾನ್, ರಿಕ್ಷಾ ಯೂನಿಯನ್ ಅಧ್ಯಕ್ಷ ಬಾಬಾಸಾಬ್ ಜಮಾದಾರ್, ನಗರಸಭೆ ಮಾಜಿ ಸದಸ್ಯ ಮಜೀದ್ ಸನದಿ, ಪ್ರಮುಖರಾದ ಜಂಗ್ಲಿಸಾಬ್ ಸನದಿ, ಶಂಶುದ್ದೀನ ಖತೀಬ್, ಶಬ್ಬೀರ ಮುಲ್ಲಾ ಮುಂತಾದವರಿದ್ದರು
Leave a Comment