ದಾಂಡೇಲಿ:
ದಾಂಡೇಲಿ ಪಟ್ಟಣದ ಬಸ್ ನಿಲ್ದಾಣದ ಹಿಂದೆ ಸುಮಾರು 25 ಎಕರೆ ಅರಣ್ಯ ಪ್ರದೇಶದಲ್ಲಿ ಹರಡಿರುವ ಈ ಕಾರ್ಟೂನ್ ಪಾರ್ಕ್ , ನೋಡುಗರಿಗೆ – ಅದರಲ್ಲೂ ಕಾರ್ಟೂನ್ ಅಭಿಮಾನಿಗಳಾದ ಮಕ್ಕಳಿಗೆ – ಕಚಗುಳಿ ಇಡುತ್ತದೆ. ಟಿ. ವಿಯಲ್ಲಿ ನೋಡಿದ್ದ ತಮ್ಮ ನೆಚ್ಚಿನ ಪಾತ್ರಗಳ ಜತೆಯಲ್ಲಿ ಮುಕ್ತವಾಗಿ ಆಟವಾಡುವ ಅವಕಾಶದಿಂದ ಪುಟಾಣಿಗಳೆಲ್ಲ ಸಂಭ್ರಮದಲ್ಲಿ ತೇಲುತ್ತವೆ.
ಮರದ ಮರೆಯಿಂದ ಹೊರಬಂದ ಚಾರ್ಲಿ ಚಾಪ್ಲಿನ್ ತಮಾಷೆ ಪ್ರಸಂಗವೊಂದನ್ನು ತೋರಿಸಲು ಮಕ್ಕಳನ್ನು ಆಹ್ವಾನಿಸುವಂತೆ ನಿಂತಿದ್ದಾರೆ. ಚಾಪ್ಲಿನ್ ಟ್ರೇಡ್ ಮಾರ್ಕ್ ಎನಿಸಿರುವ ಟೋಪಿ ತಲೆಯ ಮೇಲಿದ್ದರೂ ಕೋಲನ್ನು ಅವರು ಎಲ್ಲಿಯೋ ಬಿಟ್ಟು ಬಂದಿರುವಂತಿದೆ. ಕಾಡಿನ ಪ್ರಾಣಿಗಳ ಸಹವಾಸದಲ್ಲೇ ಬೆಳೆದ ಮೋಗ್ಲಿ , ಆಮೆಯೊಂದರ ಮೇಲೆ ಸವಾರಿ ಮಾಡುತ್ತಿರುವ ದೃಶ್ಯ ನಗೆ ಉಕ್ಕಿಸುತ್ತದೆ .
ಅಂದಹಾಗೆ, ಸೂಪರ್ಮ್ಯಾನ್ ಸಹ ಈ ಪಾರ್ಕ್ನಲ್ಲಿ ತನ್ನ ತೋಳ್ಬಲ ಪ್ರದರ್ಶನಕ್ಕೆ ನಿಂತಿದ್ದಾನೆ. ಸಾಮಾನ್ಯವಾಗಿ ಅಪ್ಪ –ಅಮ್ಮಂದಿರು ತಮ್ಮ ಮಕ್ಕಳಿಗೆ ಕಥೆ ಹೇಳುವುದು ರೂಢಿಯಲ್ಲವೆ? ಇಲ್ಲಿ ಉಲ್ಟಾ – ಪಲ್ಟಾ . ಅಂದರೆ ಈ ಪಾರ್ಕ್ನಲ್ಲಿ ಮಕ್ಕಳೇ ಅಪ್ಪ – ಅಮ್ಮಂದಿರಿಗೆ ಕಥೆ ಹೇಳುತ್ತಾರೆ . ಮೋಟು, ಪತ್ಲು ಒಟ್ಟಾಗಿ ಪೊಲೀಸಪ್ಪನಿಗೆ ಚಳ್ಳೆಹಣ್ಣು ತಿನ್ನಿಸುವ ದೃಶ್ಯವನ್ನು ಮತ್ತೊಂದು ಪುಟಾಣಿ ಸೊಗಸಾಗಿ ವಿವರಿಸುತ್ತಿತ್ತು .
ದಂಡಕಾರಣ್ಯದ ಒಳಗಿರುವ ಯಾವುದೇ ಒಂದು ಮರವನ್ನು ಕಡಿಯದೆ , ಆಲಂಕಾರಿಕ ಹೂವು ಮತ್ತು ಹಣ್ಣಿನ ಗಿಡಗಳನ್ನೂ ಅಲ್ಲಿ ನೆಟ್ಟು , ನೈಸರ್ಗಿಕ ಸನ್ನಿವೇಶದಲ್ಲೇ ಕಾರ್ಟೂನ್ ಶಿಲ್ಪಗಳನ್ನು ನಿರ್ಮಿಸಲಾಗಿದೆ . ಈ ರೀತಿಯ ಪಾರ್ಕ್ ರಾಜ್ಯದಲ್ಲಿ ಮಾತ್ರವಲ್ಲದೆ ಬೇರೆಲ್ಲೂ ಇಲ್ಲ . ಅರಣ್ಯ ಇಲಾಖೆಯ ಕೆನರಾ ವೃತ್ತದ ದಾಂಡೇಲಿ ವಲಯದಿಂದ ಈ ಪಾರ್ಕ್ ಅಭಿವೃದ್ಧಿ ಮಾಡಲಾಗಿದೆ .
ಒಂದೂವರೆ ವರ್ಷದಲ್ಲಿ ಸುಮಾರು 35 ರಿಂದ 45 ಕಲಾವಿದರು ಪರಿಶ್ರಮವಹಿಸಿ 106 ಕಾರ್ಟೂನ್ ಶಿಲ್ಪಗಳನ್ನು ನಿರ್ಮಿಸಿದ್ದಾರೆ . ಈ ಶಿಲ್ಪಗಳ ನಿರ್ಮಾಣಕ್ಕೆ ಸಿಮೆಂಟ್ , ಇಟ್ಟಿಗೆ, ಮರಳು , ಕಬ್ಬಿಣದ ಸರಳುಗಳನ್ನು ಬಳಸಲಾಗಿದೆ .
‘ತುಂಬಾ ವಿಭಿನ್ನ ಉದ್ಯಾನ ಇದಾಗಿದ್ದು , ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಿದ್ದಾರೆ . ದಾಂಡೇಲಿ ಭಾಗದಲ್ಲಿ ಪ್ರವಾಸೋದ್ಯಮವನ್ನು ಮತ್ತಷ್ಟು ಉತ್ತೇಜಿಸಲು ಈ ಸೌಲಭ್ಯ ಕಲ್ಪಿಸಲಾಗಿದೆ ’ ಎನ್ನುತ್ತಾರೆ ಅರಣ್ಯ ಸಂರಕ್ಷಣಾಧಿಕಾರಿ ಡಾ . ರಮೇಶ್. ‘ಕಲಾವಿದರಿಗೆ ಪ್ರತಿ ಶನಿವಾರ ಮತ್ತು ಭಾನುವಾರ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಏರ್ಪಡಿಸುವುದರ ಮೂಲಕ ಪ್ರತಿಭಾನ್ವೇಷಣೆ ಕಾರ್ಯವನ್ನೂ ನಡೆಸಲಾಗುತ್ತಿದೆ ’ ಎಂದು ಅವರು ಹೇಳುತ್ತಾರೆ .
‘ಸೃಜನಶೀಲತೆಯಿಂದ ಈ ಪಾರ್ಕ್ ನಿರ್ಮಾಣ ಮಾಡಲಾಗಿದೆ ನಿಜ. ಆದರೆ, ಕಾರ್ಟೂನ್ಗಳು ಮಕ್ಕಳ ಸೃಜನಶೀಲ ಚಟುವಟಿಕೆಗಳಿಗೇ ಕುತ್ತು ತರುತ್ತವಲ್ಲ? ಆಗಾಗ ಬಂದು ಈ ಪಾರ್ಕ್ ನೋಡಬಹುದು. ಮನೆಯಲ್ಲಿ ಮಾತ್ರ ಕಾರ್ಟೂನ್ ನೋಡುವ ಖಯಾಲಿಗೆ ತುಸು ಬ್ರೇಕ್ ಹಾಕಲೇಬೇಕು ’ ಎಂದು ಪಾಲಕರೊಬ್ಬರು ಗೊಣಗುತ್ತಿದ್ದರು. ಆದರೆ, ಬಹುತೇಕ ಪಾಲಕರು ಮಕ್ಕಳೊಂದಿಗೆ ಒಂದಾಗಿ ಕಾರ್ಟೂನ್ ಪಾತ್ರಗಳ ಜತೆ ಆಡುತ್ತಿದ್ದರು!


Leave a Comment