ಹೊನ್ನಾವರ:
ಪಟ್ಟಣದ ವ್ಯಾಪ್ತಿಯಲ್ಲಿ 29 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ಒಳಚರಂಡಿ ಯೋಜನೆ ಕಾಮಗಾರಿ ಗುಣಮಟ್ಟದ್ದಾಗದೇ ಕಳಪೆ ಕಾಮಗಾರಿ ನಡೆಯುತ್ತಿದ್ದು, ಜನರ ಆಕ್ರೋಶಕ್ಕೆ ಕಾರಣವಾಗಿದೆ. ಈ ಯೋಜನೆಯ ಕಾಮಗಾರಿ ಆರಂಭದಲ್ಲಿ ಕಾಮಗಾರಿ ಗುಣಮಟ್ಟದ್ದಿಲ್ಲ ಎಂದು ಪಟ್ಟನ ಪಂಚಾಯತಿ ಅಧ್ಯಕ್ಷ, ಸದಸ್ಯರು ಸಾಮಾನ್ಯ ಸಭೆ ಬಹಿಷ್ಕರಿಸಿ ಪ್ರತಿಭಟನೆ ಮಾಡಿದ್ದರು. ಅಲ್ಲದೇ ಕಳಪೆ ಕಾಮಗಾರಿಯನ್ನು ಸ್ಥಗಿತಗೊಳಿಸಲು ವಿವಿಧ ಸಂಘಸಂಸ್ಥೆಗಳು ಬೆಂಬಲ ಸೂಚಿಸಿದ್ದರು. ಕೆಲವು ದಿನಗಳ ಕಾಲ ಕಂಪನಿಯವರು ಕಾಮಗಾರಿ ಸ್ಥಗಿತಗೊಳಿಸಿದ್ದರು. ದಿನಕಳೆದಂತೆ ಅದೇ ಗುಣಮಟ್ಟದ ಕಾಮಗಾರಿಗಳು ನಡೆಯುತ್ತಿದ್ದರೂ ಪ.ಪಂ.ಸದಸ್ಯರು ಮೌನಕ್ಕೆ ಶರಣಾಗಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ.
ಕಾಮಗಾರಿ ಕಳಪೆ ಮಟ್ಟದ್ದಾಗಿದ್ದು, ಇಟ್ಟಿಗೆಗಳಿಂದ ಕಟ್ಟಿದ ಚೇಂಬರ್ಗಳಿಗೆ ಸರಿಯಾಗಿ ನೀರುಣಿಸದೇ ಒಂದೇ ದಿನದಲ್ಲಿ ಮಣ್ಣು ಹಾಕಿ ಮುಚ್ಚಲಾಗಿದೆ. ಅಗೆದ ರಸ್ತೆಯಲ್ಲಿ ಜನರು ಓಡಾಡಲಾಗದಂತೆ ದೂಳು ತುಂಬಿದ್ದು ಕಾಮಗಾರಿ ನಡೆಯವುವ ಸ್ಥಳದಲ್ಲಿ ನೀರು ಸಿಂಪಡಿಸದೇ ಜನತೆ ಧೂಳಿನಲ್ಲೇ ಸಂಚರಿಸುವಂತಾಗಿದೆ. ಸುತ್ತಲಿನ ಅಂಗಡಿ ಮನೆಗಳು ಧೂಳುಮಯವಾಗಿದೆ. ರಸ್ತೆ ಅಗೆದು ಕಾಮಗಾರಿ ಮಾಡುವ ಸ್ಥಳದಲ್ಲಿ ಸೂಚನಾ ಫಲಕಗಳನ್ನು ಅಳವಡಿಸದೇ ವಾಹನ ಸಂಚಾರರು ಮರಳಿ ಬರುವಂತಾಗಿದೆ. ಅನೇಕ ಬಾರಿ ಸ್ಥಳಿಯ ಪ.ಪಂ.ಸದಸ್ಯರಿಗೆ ಮತ್ತು ಪಟ್ಟಣ ಪಂಚಾಯತಿ ಅಧಿಕಾರಿಗಳಿಗೆ ಜನರು ದೂರು ನೀಡಿದ್ದರೂ ನಿರ್ಲಕ್ಷ್ಯ ವಹಿಸುತ್ತಿದ್ದಾರೆ. ಬೇಸಿಗೆ ಕಳೆದು ಮಳೆಗಾಲ ಆರಂಭವಾಗುತ್ತಿದ್ದಂತೆ ಇನ್ನಷ್ಟು ಅವಾಂತರಗಳು ಸಂಭವಿಸುವ ಸಾಧ್ಯತೆಯಿದೆ.
ಎಲ್ಲೆಂದರಲ್ಲಿ ರಸ್ತೆಗಳನ್ನು ಅಗೆದು ಹೊಂಡಮಯ ಮಾಡಿದ್ದು ಜನರು ಓಡಾಡಲು ಪರದಾಡುವಂತಾಗಿದೆ. ಅಷ್ಟೇ ಅಲ್ಲ ಹಲವೆಡೆ ಆಳವಾದ ಹೊಂಡಗಳನ್ನು ತೋಡಿ ಸರಿಯಾದ ರಕ್ಷಣಾ ವ್ಯವಸ್ಥೆ ಮಾಡದೇ ಜನಜಾನುವಾರು ಗಳಿಗೆ ಮರಣಕೂಪಗಳಾಗಿ ಪರಿಣಮಿಸಿದೆ. ಇವರು ಕಾಮಗಾರಿಗೆ ತೋಡಿದ ಹೊಂಡದಲ್ಲಿ ಅನೇಕ ಜಾನುವಾರುಗಳು ಬಿದ್ದು ಸಾವಿನ ದವಡೆಗೆ ಸಿಲುಕಿವೆ. ವಾಹನಚಾಲಕರನೇಕರು ತಮ್ಮ ವಾಹನ ಸಮೇತ ಹೊಂಡದಲ್ಲಿ ಬಿದ್ದು ಕೈಕಾಲುಗಳಿಗೆ ಗಂಭೀರ ಗಾಯಗಳಾಗಿದ್ದೂ ಇದೆ. ಸಂಬಂಧಪಟ್ಟ ಅಧಿಕಾರಿಗಳು ಕೂಡಲೇ ಈ ಬಗ್ಗೆ ಕ್ರಮ ಕೈಗೊಳ್ಳಬೇಕು ಎಂದು ತಾಲೂಕು ಆಟೊ ರಿಕ್ಷಾ ಚಾಲಕ ಮಾಲಕರ ಸಂಘದ ಅಧ್ಯಕ್ಷ ಶಿವರಾಜ ಮೇಸ್ತ ಆಗ್ರಹಿಸಿದ್ದಾರೆ.
—————
ಹೀಗೂ ಉಂಟೆ? : ಪಟ್ಟಣದಲ್ಲಿ ಕಳಪೆ ಕಾಮಗಾರಿ ನಡೆಯುತ್ತಿದೆ ಎಂದು ಬೊಬ್ಬೆ ಹೊಡೆಯುತ್ತಿದ್ದ ಪಟ್ಟಣ ಪಂಚಾಯತಿ ಅಧ್ಯಕ್ಷರು, ಸದಸ್ಯರು ಈಗ ಮೌನಕ್ಕೆ ಶರಣಾಗಿರುವುದರ ಮರ್ಮವನ್ನು ಹರಿದಾಸನೇ ಬಲ್ಲ….! ಈ ಎಲ್ಲಾ ಅವಾಂತರಗಳ ಹಿಂದೆ ಸಾರ್ವಜನಿಕರಿಗೆ ಕಟ್ಟಕಡೆಯದಾಗಿ ಹೀಗೂ ಉಂಟೆ ಎಂಬ ಪ್ರಶ್ನೆ ಕಾಡುತ್ತಿದೆ.
Leave a Comment