ಕಾರವಾರ:
ರವೀಂದ್ರನಾಥ ಕಡಲ ಕಿನಾರೆಯಲ್ಲಿ ಸೋಮವಾರ ಸಂಜೆ ಡಾಲ್ಪಿನ್ವೊಂದರ ಮೃತ ದೇಹ ಪತ್ತೆಯಾಗಿದೆ. ಈ ಪ್ರಬೇಧವನ್ನು ಹಂಪ್ ಬ್ಯಾಕ್ ಡಾಲ್ಪಿನ್ ಎಂದು ಗುರುತಿಸಲಾಗಿದೆ. ಸ್ಥಳಕ್ಕೆ ಆಗಮಿಸಿದ ವೈದ್ಯಾಧಿಕಾರಿಗಳು ಅದರ ಮರಣೋತ್ತರ ಪರೀಕ್ಷೆ ನಡೆಸಿದರು.
ಸಮುದ್ರದ ಅಬ್ಬರದ ಅಲೆಗಳೊಂದಿಗೆ ತೇಲಿಬಂದ ಡಾಲ್ಪಿನ್ನ ಮೃತದೇಹ ಇಲ್ಲಿನ ಹಳೆ ಉದ್ಯಾನವನ ಸಮೀಪ ಬಿದ್ದಿದ್ದು, ಅದನ್ನು ಗಮನಿಸಿದ ಸ್ಥಳೀಯ ಮೀನುಗಾರರು ಅಧಿಕಾರಿಗಳಿಗೆ ಮಾಹಿತಿ ನೀಡಿದರು. ತೀರಕ್ಕೆ ಡಾಲ್ಪಿನ್ ಬಿದ್ದಿರುವ ಸುದ್ದಿ ತಿಳಿದು ನೂರಾರು ಸಾರ್ವಜನಿಕರನ್ನು ಅದರ ವೀಕ್ಷಣೆಗೆ ಜಮಾಯಿಸಿದರು. ಡಾಲ್ಪಿನ್ ಸಮುದ್ರ ಜೀವಿಯಾಗಿದ್ದರೂ ಸೂಕ್ಷ್ಮ ಪ್ರಭೇದದಕ್ಕೆ ಸೇರಿರುವದರಿಂದ ಅದನ್ನು ಅರಣ್ಯ ಇಲಾಖೆ ಮರಣೋತ್ತರ ಪರೀಕ್ಷೆ ನಡೆಸಿ, ಅಂತ್ಯಕ್ರಿಯೆ ಮಾಡುತ್ತದೆ. ಹೀಗಾಗಿ ಸ್ಥಳಕ್ಕೆ ಅರಣ್ಯಾಧಿಕಾರಿ ಕೆ.ಡಿ ನಾಯ್ಕ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಮೃತ ಡಾಲ್ಪಿನ್ ದೇಹ ಘನ ಸ್ಥಿತಿಯಲ್ಲಿದ್ದು ಮೃತಪಟ್ಟು ಹಲವು ದಿನ ಕಳೆದಿರಬಹುದು ಎಂದು ಅಂದಾಜಿಸಲಾಗಿದೆ. ದೇಹದಾಡ್ಯವನ್ನು ಗಮನಿಸಿ ಇದರ ವಯಸ್ಸನ್ನು 20 ವರ್ಷ ಎಂದು ಅಂದಾಜಿಸಲಾಗಿದೆ.
ಹಂಪ್ ಬ್ಯಾಕ್ ಪ್ರಬೇಧದ ಡಾಲ್ಪಿನ್ಗಳು ಸಾಮಾನ್ಯವಾಗಿ 15-20 ವರ್ಷ ಆಯಸ್ಸು ಹೊಂದಿದ್ದು, ಇದು ವಯೋ ಸಹಜವಾಗಿ ಅಶಕ್ತಗೊಂಡು ಮೃತ ಪಟ್ಟಿದೆ ಎಂದು ಮರಣೋತ್ತರ ಪರೀಕ್ಷೆ ನಡೆಸಿದ ಮರಿಯನ್ ಬಯೋಲಾಜಿ ಅಧಿಕಾರಿಗಳು ತಿಳಿಸಿದ್ದಾರೆ. ಈ ಡಾಲ್ಪಿನ್ 8ಪೂಟ್ ಉದ್ದವಾಗಿತ್ತು. ಭವಿಷ್ಯದಲ್ಲಿ ಈ ಜೀವಿಯ ಬಗ್ಗೆ ಅದ್ಯಯನ ನಡೆಸಲು ವಿದ್ಯಾರ್ಥಿಗಳಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಇದನ್ನು ಹೂಳಲಾಗುವದು ಎಂದು ವಲಯ ಅರಣ್ಯಾಧಿಕಾರಿ ಕೆ.ಡಿ. ನಾಯ್ಕ ಮಾಹಿತಿ ನೀಡಿದರು.
Leave a Comment