ಕಾರವಾರ:
ಬೇಸಿಗೆ ರಜೆ ಮುಗಿದು ಸೋಮವಾರದಿಂದ ಶಾಲೆಗಳು ಆರಂಭವಾಗಿದ್ದು, ಮೊದಲ ದಿನ ಚಿಣ್ಣರಿಗೆ ಭವ್ಯ ಸಾಗತ ದೊರೆಯಿತು.
ಶಿಕ್ಷಣ ಇಲಾಖೆ ಹಾಗೂ ಶಾಲಾ ಆಡಳಿತ ಮಂಡಳಿಯವರು ಮಕ್ಕಳಿಗೆ ಹೂ ವಿತರಿಸಿ, ಸಿಹಿ ತಿನಿಸಿ ತರಗತಿಗೆ ಬರಮಾಡಿಕೊಂಡರು. ಮೂಲಭೂತ ಸೌಕರ್ಯಗಳ ಕೊರತೆಯ ನಡುವೆಯೇ ಈ ಬಾರಿ ಉತ್ತಮ ಶಿಕ್ಷಣ ನೀಡುವದಾಗಿ ಶಿಕ್ಷಕರು ಹೇಳಿಕೊಂಡಿದ್ದು, ಅಧಿಕಾರಿಗಳು ಕೂಡ ಅದೇ ಭರವಸೆ ನೀಡಿದರು. ಇನ್ನು ಎಲ್ಲಾ ಮಕ್ಕಳಿಗೂ ಪುಸ್ತಕ, ಸಮವಸ್ತ್ರ ಒದಗಿಸಲು ಶಿಕ್ಷಣ ಇಲಾಖೆ ಈ ಬಾರಿಯೂ ವಿಫಲವಾಗಿದೆ. ಕಾರವಾರ ಶೈಕ್ಷಣಿ ಜಿಲ್ಲೆಯಲ್ಲಿ ಶೇ. 32ರಷ್ಟು ಪುಸ್ತಕಗಳು ಮಾತ್ರ ಲಭ್ಯವಿದೆ. ಇನ್ನೂ ಶೇ. 68.35 ಪುಸ್ತಕಗಳಿಗೆ ಬೇಡಿಕೆ ಇಡಲಾಗಿದೆ. ಕಾರವಾರ ಶೈಕ್ಷಣಿಕ ಜಿಲ್ಲೆಯಲ್ಲಿ ಉಚಿತವಾಗಿ ವಿತರಿಸಲು 530863 ಪುಸ್ತಕಗಳು ಬೇಕಾಗಿದೆ. 168545 ಪುಸ್ತಕಗಳನ್ನು ಸದ್ಯ ನೀಡಲಾಗಿದೆ. ಮಾರಾಟಕ್ಕಾಗಿ 192888 ಪುಸ್ತಕಗಳ ಬೇಡಿಕೆಯಿದ್ದು, 60522 ಪುಸ್ತಕಗಳು ಮಾತ್ರ ಬಂದಿವೆ. 494684 (ಶೇ.68.35) ಪುಸ್ತಕಗಳು ಬರಬೇಕಾಗಿದೆ. ಒಟ್ಟು 723751 ಪುಸ್ತಕಗಳು ಬೇಕಾಗಿದ್ದು, 229067 ಪುಸ್ತಕಗಳು ಮಾತ್ರ ಬಂದಿವೆ. ಸರಕಾರಿ ಶಾಲೆಯ ಮಕ್ಕಳಿಗೆ ಉಚಿತವಾಗಿ ನೀಡುವ ಸಮವಸ್ತ್ರ ಹಾಗೂ ಶೂ ಇನ್ನು ಬಂದಿಲ್ಲ.
ಪ್ರಾಥಮಿಕ ಹಾಗೂ ಪ್ರೌಢ ಶಾಲೆಗಳಿಗೆ ಒಟ್ಟು 65 ಶಿಕ್ಷಕರ ಕೊರತೆಯಿದೆ. ಇಲಾಖೆ ಶಿಕ್ಷಕರ ಕೊರತೆ ನೀಗಿಸಲು ಅತಿಥಿ ಶಿಕ್ಷಕರನ್ನು ನೇಮಕ ಮಾಡಿಕೊಳ್ಳುತ್ತದೆ. ಪ್ರಸಕ್ತ ಸಾಲಿನಲ್ಲಿ ಅತಿಥಿ ಶಿಕ್ಷಕರ ನೇಮಕಾತಿಗೆ ಉಪ ನಿರ್ದೇಶಕರ ಕಚೇರಿಯಿಂದ ಪ್ರಸ್ತಾವನೆ ಕಳುಹಿಸಲಾಗಿದೆ. ಆದರೆ ನೇಮಕಾತಿಗೆ ಇಲಾಖೆಯಿಂದ ಯಾವುದೇ ಆದೇಶ ಬಂದಿಲ್ಲ. ನೇಮಕಾತಿ ವಿಳಂಬವಾದಷ್ಟೂ ಮಕ್ಕಳಿಗೆ ಶಿಕ್ಷಣಕ್ಕೆ ಹಿನ್ನಡೆಯಾಗುತ್ತದೆ ಎಂಬ ಆರೋಪವಿದ್ದರೂ ಅದನ್ನು ಇಲಾಖೆ ಕೇಳಿಸಿಕೊಂಡಿಲ್ಲ.
ಬೈತಖೋಲ್ ಪ್ರಾಥಮಿಕ ಶಾಲೆಯಲ್ಲಿ ಸೋಮವಾರ ಪ್ರಾರಂಭೋತ್ಸವ ನಡೆದಿದ್ದು, ಕಟ್ಟವನ್ನು ಶೃಂಗರಿಸಲಾಗಿತ್ತು. ವಿಧಾನಸಭಾ ಕ್ಷೇತ್ರವಾರು ಪ್ರಾರಂಬೋತ್ಸವ ನಡೆಸುವ ತಯಾರಿ ನಡೆದಿದ್ದು, ಕಾರವಾರ-ಅಂಕೋಲಾ ಕ್ಷೇತ್ರದಲ್ಲಿ ಕೇಣಿ ಶಾಲೆಯಲ್ಲಿ ಜೂನ್ 2ರಂದು ಪ್ರಾರಂಬೋತ್ಸವ ನಡೆಯಲಿದೆ. ಕುಮಟಾ – ಹೊನ್ನಾವರ ಕ್ಷೇತ್ರ ವ್ಯಾಪ್ತಿಯ ನೆಲ್ಲಿಕೇರಿ ಶಾಲೆಯಲ್ಲಿ ಹಾಗೂ ಭಟ್ಕಳ ಕ್ಷೇತ್ರದ ತೆರನಮಕ್ಕಿ ಶಾಲೆಯಲ್ಲಿ ಜೂನ್ 3ರಂದು ಪ್ರಾರಂಬೋತ್ಸವ ನಡೆಯಲಿದೆ ಎಂದು ಇಲಾಖೆ ತಿಳಿಸಿದೆ.
Leave a Comment