ಹೊನ್ನಾವರ :
ಕರಾವಳಿ ತಾಲೂಕುಗಳಲ್ಲಿ ದೊಡ್ಡ ತಾಲೂಕೆಂದು-ಜನಸಂಖ್ಯೆಯಲ್ಲೂ ದೊಡ್ಡ-ವಿಸ್ತಾರ ಪ್ರದೇಶ ಹೊಂದಿರುವ ತಾಲೂಕೆಂದು ಹೆಸರಾಗಿರುವ ಹೊನ್ನಾವರವು ಕೆ.ಎಸ್.ಆರ್.ಟಿ.ಸಿ ಯು ಅವಾಂತರ ಹಾಗೂ ಇಬ್ಬರ ಶಾಸಕರ ತೀವ್ರ ನಿರ್ಲಕ್ಷ ಹಾಗೂ ಭೇದಭಾವಕ್ಕೆ ಬಲಿಯಾಗಿದೆ.
1978 ರಲ್ಲಿ ಅಂದಿನ ಜನಪರ ಮುಖ್ಯಮಂತ್ರಿ ಎಂದು ಹೆಸರು ಪಡೆದಿದ್ದ ದಿ| ಡಿ.ದೇವರಾಜ್ ಅರಸರು, ಜಿಲ್ಲೆಯ ಸಚಿವರಾದ ಎಸ್.ಎಂ.ಯಯ್ಯಾರೊಂದಿಗೆ ಸೇರಿ ಊರಿನ ಜನರಿಗೆ, ತಾಲೂಕಿನ ಜನರಿಗೆ ಅನುಕೂಲವಾಗಲೆಂದು ಬಸ್‍ನಿಲ್ದಾಣ ನಿರ್ಮಿಸಿದ್ದರು. ಅದುವರೆಗೆ ಬಂದರು, ಶರಾವತಿ ಸರ್ಕಲ್ ಬಳಿ ಹಾಗೂ ಸೋಮೇಶ್ವರ ದೇವಾಲಯದ ಬಳಿಯಲ್ಲಿ ನಡೆಯುತ್ತಿದ್ದ ಬಸ್ ತಂಗುವಿಕೆಗೆ ಒಂದು ಶಾಶ್ವತ ಸ್ಥಳ ದೊರೆಯಿತು. ಪ್ರಯಾಣ ಕರಿಗೆ ತಿರುಗಾಡಲು ಅನುಕೂಲವಾಯಿತು. ಆದರೆ ಈಗ ಪರಿಸ್ಥಿತಿ ಬದಲಾಗಿದೆ. ತಾಲೂಕಿನ ಜನಸಂಖ್ಯೆ ಬೆಳೆದಿದೆ. ಗ್ರಾಮೀಣ ಪ್ರದೇಶ ಸಾರ್ವಜನಿಕ ಸಾರಿಗೆಯನ್ನು ತುಂಬಾ ಅವಲಂಬಿಸಿದ್ದಾರೆ. ಗ್ರಾಮೀಣ ಪ್ರದೇಶದ ರೈತರು, ಕಾರ್ಮಿಕರು ಹಾಗೂ ವಿದ್ಯಾರ್ಥಿಗಳು ಸರಕಾರದ ಈ ಸೌಲಭ್ಯವನ್ನು ನಂಬಿದ್ದಾರೆ.
ಪ್ರಸ್ತುತ ಬಸ್ ನಿಲ್ದಾಣದ ಪರಿಸ್ಥಿತಿ:
ಈಗ ಇರುವ ಬಸ್‍ನಿಲ್ದಾಣವು ನಗರಪ್ರದೇಶಕ್ಕೆ ಹತ್ತಿರವಿದ್ದು, ಅಂತೆಯೇ ಬಂದರು ಪ್ರದೇಶಕ್ಕೂ ಹತ್ತಿರವಿದೆ. ಆದ್ದರಿಂದ ಈ ಪ್ರದೇಶದ ಬಗ್ಗೆ ಎಲ್ಲರಿಗೂ ಒಲವಿದೆ. ಕಳೆದ ಆರು ತಿಂಗಳ ಹಿಂದೆ ತಾಲೂಕಾ ಆಡಳಿತ ಕಛೇರಿ-ಮಿನಿವಿಧಾನಸೌಧ ನಿರ್ಮಾಣಕ್ಕಾಗಿ ಈ ಸ್ಥಳವನ್ನು ಆಯ್ಕೆ ಮಾಡಿಕೊಳ್ಳಲು ಕೆಲವರು ಸೂಚಿಸಿದರೂ ಸ್ಥಳಭಾವ ಹಾಗೂ ಸಂಪರ್ಕಭಾವದಿಂದ ಹಿಂದಿನ ತಹಸಿಲ್ದಾರ್ ಕಛೇರಿಯನ್ನೇ “ಮಿನಿವಿಧಾನಸೌಧ”ಕ್ಕೆ ಬಳಸಲಾಗಿದೆ.
ಇಂದಿರುವ ಬಸ್‍ನಿಲ್ದಾಣವು ಶಿಥಿಲ ಕಟ್ಟಡ ದುರ್ಬಲ ವ್ಯವಸ್ಥೆಗಳಿಂದ ಹಾಳಾಗಿದೆ. ಮಳೆಗಾಲದಲ್ಲಿ ಮಳೆಯ ನೀರು ನಿಲ್ದಾಣದಲ್ಲಿ ಸೇರಿ ಸ್ಥಳೀಯ ಅಂಗಡಿಗಳೆಲ್ಲಾ ವ್ಯಾಪರ ಮಾಡಲಾಗದೇ ಪರದಾಡುತ್ತಿವೆ. ಕೈತುಂಬಾ ಬಾಡಿಗೆ ನೀಡಿರುವ ಈ ಅಂಗಡಿ ಮಾಲಿಕರು ಒದ್ದಾಡುವ ಸ್ಥಿತಿ ನಿರ್ಮಾಣಗೊಂಡಿದೆ. ಸಾಮಾನ್ಯವಾಗಿ ಕೋರ್ಟ ಪ್ರದೇಶ ಪಿ.ಡಬ್ಯೂ.ಡಿ ಕಛೇರಿ ಪ್ರದೇಶ ಶಿರ್ಶಿ ಅರ್ಬನ್ ಬ್ಯಾಂಕ್ ಪ್ರದೇಶದ ಮಳೆ ನೀರು ಸೀದಾ ಬಸ್‍ನಿಲ್ದಾಣವನ್ನು ಪ್ರವೇಶಿಸುತ್ತದೆ. ಇದರಿಂದ ಅಲ್ಲಿಯ ಮೂತ್ರಗಳಿಂದ ಹಾಗೂ ಸಾರ್ವಜನಿಕರ ಶೌಚಾಲಯಗಳಿಂದ ನೀರು ಊರಬಾವಿಯನ್ನು ತಲುಪಿ ಸಾಂಕ್ರಾಮಿಕ ರೋಗ ಹರಡುವ ಭೀತಿ ಉಂಟಾಗಿದೆ.
ಹೊಸ ಬಸ್‍ನಿಲ್ದಾಣ ಯಾವಾಗ?
ಕಳೆದ ಮೂರು ವರ್ಷಗಳಲ್ಲಿ ಈ ಬಸ್‍ನಿಲ್ದಾಣವನ್ನು ಈ ಬಸ್‍ನಿಲ್ದಾಣವನ್ನು ಮತ್ತೆ ಮತ್ತೆ ತೇಪೆ ಹಚ್ಚಿ ದುರಸ್ತಿ ಮಾಡಲಾಗುತ್ತಿದೆ. ಪ್ರಯಾಣ ಕರಿಗೆ ಕುಳಿತುಕೊಳ್ಳಲು ಸ್ಥಳವೂ ಇಲ್ಲ, ಸ್ತ್ರೀಯರಿಗೆ ಪ್ರತ್ಯೇಕ ವ್ಯವಸ್ಥೆಯೂ ಇಲ್ಲ.
ಬಸ್‍ಗಳನ್ನು ಸಮಯಕ್ಕೆ ಸರಿಯಾಗಿ ಬಿಡದಿದ್ದರಿಂದ ಪ್ರಯಾಣ ಕರು ಗಂಟೆಗಟ್ಟಲೆ ಇಲ್ಲಿ ಕಾಯುತ್ತಿರಬೇಕಾಗುತ್ತದೆ. ಕುಮಟಾ-ಭಟ್ಕಳ ಡಿಪೋಗಳಿಂದ ಬರುವ ಬಸ್‍ಗಳು ಸಕಾಲದಲ್ಲಿ ಇಲ್ಲಗೆ ಬರುವುದಿಲ್ಲ. ಗ್ರಾಮೀಣ ಪ್ರದೇಶದಿಂದ ಹೊರಟ ರಾತ್ರಿ ಹೊಲ್ಟ್ ಮಾಡಿದ ಬಸ್‍ಗಳು ನಿರ್ದಿಷ್ಟ ಸಮಯಕ್ಕೆ ಹಿಂದಿರುಗಲಾಗದೇ ಸಾಕಷ್ಟು ಪರದಾಡುವಂತಾಗಿದೆ. ಉದಾಹರಣೆಗೆ 10 ಗಂಟೆ ಮುಂಜಾನೆ ಹೊರಡಬೇಕಾದ ಬಸ್‍ಗಳು 10 ಗಂಟೆಗೇ ಹೊರಡದೇ 11:30 ಆದರೂ ಹೊರಡದಿದ್ದಾಗ ಆ ಸಮಯಕ್ಕೆ ಹೊರಡಬೇಕಾದ ಮತ್ತು ಈ ನಡುವೆ ಬಿಡಬೇಕಾದ ಬಸ್‍ಗಳ ಪ್ರಯಾಣ ಕರು ಒಂದೆಡೆ ಸೇರಿ ಬಸ್‍ನಿಲ್ದಾಣ ಅನಾವಶ್ಯಕ ಪ್ರಯಾಣ ಕರ ಕೇಂದ್ರವಾಗಿ ಬಿಡುತ್ತದೆ. ಕಾಲೇಜು ವಿದ್ಯಾರ್ಥಿಗಳಿಗೆ ಎಕ್ಸ್‍ಪ್ರೆಸ್ ಬಸ್‍ಗಳಲ್ಲಿ ತೆಗೆದುಕೊಳ್ಳದಿದ್ದರಿಂದ ಮತ್ತು ಗ್ರಾಮೀಣ ಪ್ರದೇಶಗಳಿಗೆ ಮುಖ್ಯವಾಗಿ ಕುಮಟಾ ಬದಿಗೆ ಹೋಗುವ ಬಸ್‍ಗಳಲ್ಲಿ ಎಕ್ಸ್‍ಪ್ರೆಸ್‍ನಲ್ಲಿ ಬಸ್‍ಪಾಸ್(ವಿದ್ಯಾರ್ಥಿಗಳ ಪಾಸ್) ತೆಗೆದುಕೊಳ್ಳದಿರುವುದರಿಂದ ಹಲವುಬಾರಿ ಬಸ್‍ನಿಲ್ದಾಣ ಗದ್ದಲದ ಗೂಡಾಗುತ್ತದೆ.
6 ಕೋಟಿ ಹೊಸನಿಲ್ದಾಣ ಯಾವಾಗ?
ಹೊಸ ಬಸ್‍ನಿಲ್ದಾಣಕ್ಕಾಗಿ 6 ಕೋಟಿ ರೂ. ಮಂಜೂರಾಗಿರುವ ಕುರಿತು ಶಾಸಕಿ ಶಾರದಾ ಶೆಟ್ಟಿಯವರು ಆಗಾಗ ಹೇಳುತ್ತಿದ್ದರು. ಆದರೆ ಇದುವರೆಗೂ ಆ ಹಣ ಎಲ್ಲಿದೆ ಏನಾಗಿದೆ ಎಂದೇ ತಿಳಿದಿಲ್ಲ. ಸ್ಥಳದ ಸಮಸ್ಯೆ ಇದ್ದರೆ ಸರಕಾರಿ ಸ್ಥಳ ಸಾಲಷ್ಟು ಇದ್ದು ಅದನ್ನು ಬಳಸಿಕೊಳ್ಳಬಹುದಾಗಿದೆ.
ಬಸ್‍ಡಿಪೋ ಯಾಕಿಲ್ಲ?
ಹೊನ್ನಾವರವು ಭಟ್ಕಳ ಹಾಗೂ ಕುಮಟಾ ಎಂಬೆರಡು ವಿಧಾನಸಭಾ ಕ್ಷೇತ್ರಕ್ಕೆ ಹಂಚಿಹೋಗಿದೆ. ಕುಮಟಾ ಮತ್ತು ಭಟ್ಕಳದಲ್ಲಿ ಬಸ್‍ಡಿಪೋಗಳಿವೆ. ಹೊನ್ನಾವರದಲಿಲ್ಲ, ರಾತ್ರಿ ಹೊಲ್ಟ್ ಮಾಡುವ ಬಸ್ಗಳನ್ನು ಬಿಟ್ಟರೆ ಹೊನ್ನಾವರಕ್ಕೆ ಭಟ್ಕಳ ಹಾಗೂ ಕುಮಟಾಗಳಿಂದ ಬಸ್‍ಗಳು ಬರಬೇಕು. ಭಟ್ಕಳ ಡಿಪೋದ ಬಸ್‍ಗಳು ಒಂದೊಂದು ರೌಂಡ್ ಸ್ಥಳೀಯ ಹಳ್ಳಿಗಳಿಗೆ ಹೋಗಿ ಬರುತ್ತವೆ ಎಂದು ಪ್ರಯಾಣ ಕರ ದೂರು. ಸರಿಯಾದ ಸಮಯಕ್ಕೆ ಈ ಬಸ್‍ಗಳು ಬಿಡುತ್ತಿಲ್ಲ. ಇದೆಲ್ಲ ಕಾರಣಕ್ಕಾಗಿ ಹೊನ್ನಾವರದಲ್ಲಿಯೇ ಒಂದು ಬಸ್‍ಡಿಪೋ ಬೇಕಾಗಿದೆ. ತಕ್ಷಣ ಸಂಬಂಧಪಟ್ಟವರು ಈ ಕುರಿತು ಚಿಂತನೆ ನಡೆಸುವ ಅಗತ್ಯವಿದೆ.
ಈ ವರ್ಷ ಕಾರ್ಯರೂಪಕ್ಕೆ ಬರಬೇಕಾದ ಅಗತ್ಯಗಳು:
1. ತಕ್ಷಣ ಸಮಯಕ್ಕೆ ಸರಿಯಾಗಿ ಬಸ್‍ಗಳನ್ನು ಬಿಡುವುದು.
2. ಬಸ್‍ನಿಲ್ದಾಣದ ಆವರಣದೊಳಗೆ ಹಾಕಿರುವ ತ್ಯಾಜ್ಯಗಳ ಗುಡ್ಡ ತೆಗೆಸುವುದು.
3. ನಿಲ್ದಾಣದ ಒಳಗೆ ನೀರು ನಿಲ್ಲದಂತೆ ಒಳಚರಂಡಿ ರಿಪೇರಿ ಮಾಡುವುದು.
4. ಪ್ರಯಾಣ ಕರಿಗೆ ಅನುಕೂಲವಾಗುವಂತೆ ಆಸನದ ವ್ಯವಸ್ಥೆ ಮಾಡುವುದು.
ಹೊನ್ನಾವರ-ಕುಮಟಾ ನಡುವೆ ಬೆಳಿಗ್ಗೆ ಬಸ್:
ಬೆಳಿಗ್ಗೆ 6:30ರಿಂದ ಕುಮಟಾ-ಹೊನ್ನಾವರ ಜೋಡಿಸುವ ಬಸ್‍ಯಾನ ಶೀಘ್ರ ಆರಂಭವಾಗಬೇಕಿದೆ. ಸುಮಾರು 6:45ಕ್ಕೆ ಕುಮಟಾ ನಿಲ್ದಾಣ ಬಿಡುವ ಮೂರು ಬಸ್‍ಗಳಿದ್ದು, ಅವು ಯಾವುದೂ ಮಧ್ಯದಲ್ಲಿ ಕೈ ಮಾಡುವ ಪ್ರಯಾಣ ಕರನ್ನು ಕರೆತರುವುದಿಲ್ಲ ಎಂದು ಹೇಳಲಾಗುತ್ತದೆ. ಅದರ ನಡುವೆ ವಿದ್ಯಾರ್ಥಿಗಳನ್ನು ಕಂಡರೆ ವಿಷದ ಹಾವನ್ನು ಕಂಡಂತಾಗುವ ಕಂಡಕ್ಟರ್/ಡ್ರೈವರ್‍ರಿಂದ ಇನ್ನಷ್ಟು ಫಜೀತಿ ನಿರ್ಮಾಣವಾಗಿದೆ.
ಸಮವಸ್ತ್ರದಲ್ಲಿರುವ ವಿದ್ಯಾರ್ಥಿಗಳನ್ನು ಕಂಡರೆ ಕುಮಟಾ ಡಿಪೋದ ಡ್ರೈವರ್/ಕಂಡಕ್ಟರ್‍ರಿಗೆ ಒಂದು ರೀತಿಯ ಅಲರ್ಜಿ ಇದರಿಂದ ಪರೀಕ್ಷೆ ಸಮಯದಲ್ಲೂ ವಿದ್ಯಾರ್ಥಿಗಳು ಈ ಸಿಬ್ಬಂದಿಗಳಿಗೆ
ಶಾಪಹಾಕುತ್ತಾ ಕಾಲೇಜು/ಶಾಲೆಗಳಿಗೆ ಹೋಗಬೇಕಾಗಿದೆ.
ಬಹುಮುಖ್ಯವಾಗಿ ಡ್ರೈವರ್/ಕಂಡಕ್ಟರ್‍ಗಳು ಒಂದು ಬಸ್ಸಿನ ವಿರುದ್ಧ ಇನೊಂದು ಬಸ್ ಸ್ಪರ್ಧೆ ಮಾಡಿ ತಲುಪುವುದರಿಂದ ವಾತಾವರಣ ದೂಷಮಯವಾಗುತ್ತದೆ. ಕುಮಟಾ ಡಿಪೋದ ಡ್ರೈವರ್‍ಗಳೆಂದರೆ ಪ್ರಯಾಣ ಕರು ಶಾಪಹಾಕುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ.
ರಾತ್ರಿ ಬಸ್ ನಿಲ್ದಾಣಕ್ಕೆ ಬರಬೇಕು:
ಹೊನ್ನಾವರ ಕೇಂದ್ರ ಪ್ರದೇಶದಲ್ಲಿದ್ದು, ಒಂದೆಡೆ ಗೋವಾ,ಮಹಾರಾಷ್ಟ್ರ ಮತ್ತು ಉತ್ತರ ಕರ್ನಾಟಕ
ಇನೊಂದೆಡೆ ಕೇರಳ ಮತ್ತು ದಕ್ಷಿಣ ಕರ್ನಾಟಕವನ್ನು ಸೇರಿಸುತ್ತದೆ. ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಪ್ರತಿದಿನ ರಾತ್ರಿ 9:30 ರಿಂದ ಬೆಳಿಗ್ಗೆ 5:30ರ ನಡುವೆ 65 ಬಸ್‍ಗಳು ಪ್ರಯಾಣ ಸುತ್ತದೆ. ಈ ಯಾವ ಬಸ್‍ಗಳು ಬಸ್‍ನಿಲ್ದಾಣಕ್ಕೆ ಬರುವುದಿಲ್ಲ. ಇದರಿಂದ ರಾತ್ರಿ ಸಮಯ ಹೆಂಗಸರು/ಮಕ್ಕಳು/ಅಸಹಾಯಕರು ಭಯಗೊಳ್ಳುವಂತಾಗಿದೆ. ಶರಾವತಿ ಸರ್ಕಲ್‍ನಲ್ಲಿ ರಾತ್ರಿ ಇಳಿದು ಮನೆತಲುಪುವುದು ಅಥವಾ ಸರ್ಕಲ್‍ನಲ್ಲಿ ಬಸ್ಸಿಗೆ ಕಾದು ಊರು ತಲುಪುವುದು ಭಯವನುಂಟು ಮಾಡುತ್ತದೆ. ತಕ್ಷಣ ಸರಕಾರ ರಾತ್ರಿ ಸಮಯ ಬಸ್‍ಗಳು ನಿಲ್ದಾಣಕ್ಕೆ ಬರುವಂತೆ ಮಾಡಬೇಕು.
ಹಸಿರು ಬಸ್ ಭಟ್ಕಳ-ಹೊನ್ನಾವರ:
ಭಟ್ಕಳ-ಹೊನ್ನಾವರ ನಡುವೆ “ಹಸಿರು ಬಸ್” ಬಂದ ಮೇಲೆ ಹೊಸ ವಾತಾವರಣ ನಿರ್ಮಾಣವಾಗಿದೆ. ವಿದ್ಯಾರ್ಥಿಗಳು ಹಾಗೂ ಇತರ ಪ್ರಯಾಣ ಕರು ಸುಲಭವಾಗಿ ಊರು ಸೇರುವಂತಾಗಿದೆ. ಬಹುಮುಖ್ಯವಾಗಿ ಅಂತರ್‍ರಾಜ್ಯ ಸಂಪರ್ಕದ ಬಸ್ ನಿರ್ವಾಹಕ/ಡ್ರೈವರ್‍ಗಳು ಮಾಡುತ್ತಿದ್ದ ದ್ವೇಷಮಯ ಕ್ರೌರ್ಯಕ್ಕೆ ಬ್ರೆಕ್ ಬಿದ್ದಿದೆ.
ಈ ವ್ಯವಸ್ಥೆ ಮುಂದುವರೆದು ಇನ್ನಷ್ಟು ಹೊಸ ಬಸ್‍ಗಳು ಬಂದರೆ ಉತ್ತಮ.
Leave a Comment