ಹೊನ್ನಾವರ ;
ಚೆನ್ನಕೇಶವ ಪ್ರೌಢಶಾಲೆ, ಕರ್ಕಿಯಲ್ಲಿ ಪ್ರಜಾಪ್ರಭುತ್ವದ ಮಾದರಿಯಲ್ಲಿ ಮತದಾನದ ಮೂಲಕ ರಚಿಸಲ್ಪಟ್ಟ ಶಾಲಾ ಸಂಸತನ್ನು ಶಾಲೆಯ ಸಭಾಂಗಣದಲ್ಲಿ ಆಯ್ಕೆಯಾದ ಪದಾಧಿಕಾರಿಗಳಿಗೆ ಪ್ರಮಾಣ ವಚನ ಬೋಧಿಸಿ,ದೀಪ ಪ್ರಜ್ವಲಿಸುವುದರ ಮೂಲಕ ಎಸ್. ಡಿ. ಎಮ್. ಕಾಲೇಜಿನ ಸಂಗೀತ ವಿಭಾಗದ ಉಪನ್ಯಾಸಕ ಗೋಪಾಲಕೃಷ್ಣ ಹೆಗಡೆ ಕಲ್ಭಾಗ ಸಂಸತ್ ಗೆ ಚಾಲನೆ ನೀಡಿದರು.
ಕಾರ್ಯಕ್ರಮ ಉದ್ಘಾಟಿಸಿ ನಂತರ ಮಾತನಾಡಿ ಎಸ್. ಎಸ್. ಎಲ್. ಸಿ. ನಂತರ ಮಾಡಿಕೊಳ್ಳುವ ಆಯ್ಕೆ ಮುಂದಿನ ಜೀವನವನ್ನು ರೂಪಿಸುತ್ತದೆ ವಿದ್ಯಾರ್ಥಿಗಳು ಪ್ರೌಢಶಾಲಾ ಹಂತದಲ್ಲಿ ವ್ಯಕ್ತಿತ್ವ ವಿಕಸನಕ್ಕೆ ಬೇಕಾದ ಎಲ್ಲ ಅವಕಾಶಗಳನ್ನು ಬಳಸಿಕೊಂಡು ಉತ್ತಮ ವ್ಯಕ್ತಿತ್ವವನ್ನು ರೂಪಿಸಿಕೊಳ್ಳಬೇಕು ಹಾಗೂ ಸಾಮಾಜಿಕ ಜೀವನದಲ್ಲಿರುವ ಋಣಾತ್ಮಕ ಅಂಶಗಳನ್ನು ಧನಾತ್ಮಕ ಅಂಶಗಳನ್ನಾಗಿ ಮಾರ್ಪಡಿಸುವುದು ಮಕ್ಕಳ ಜವಾಬ್ದಾರಿಯಾಗಿದೆ ಎಂದು ಹೇಳಿದರು.
ಸಭಾಧ್ಯಕ್ಷತೆಯನ್ನು ವಹಿಸಿದ ಶಾಲಾ ಮುಖ್ಯೋಪಾಧ್ಯಾಯರಾದ ಎಲ್. ಎಮ್. ಹೆಗಡೆಯವರು ಮಾತನಾಡಿ ಶಾಲೆಯಲ್ಲಿ ನಡೆಯುವ ಕಾರ್ಯಕ್ರಮಗಳು ಸುಗಮವಾಗಿ ನಡೆಯಬೇಕೆಂಬ ಉದ್ದೇಶದಿಂದ ಶಾಲಾ ಸಂಸತ್ತನ್ನು ರಚಿಸಲಾಗಿದೆ, ಆಯ್ಕೆಯಾದ ಪ್ರತಿನಿಧಿಗಳು ಪ್ರಾಮಾಣಿಕ ಹಾಗೂ ಜವಾಬ್ದಾರಿಯುತವಾಗಿ ಕೆಲಸ ನಿರ್ವಹಿಸುವ ಮುಖೇನ ನಾಯಕತ್ವದ ಗುಣಗಳನ್ನು ಬೆಳೆಸಿಕೊಳ್ಳಬೇಕು ಎಂದು ತಿಳಿಸಿದರು.
ಕಾರ್ಯಕ್ರಮದ ಆರಂಭದಲ್ಲಿ ಎಸ್. ಎನ್. ಹೆಗಡೆಯವರು ಅತಿಥಿಗಳನ್ನು ಸ್ವಾಗತಿಸಿ, ಪರಿಚಯಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಿಕ್ಷಕರಾದ ಸುಬ್ರಹ್ಮಣ್ಯ ಭಟ್ಟ ವರಾಹ ವಂದಿಸಿದರು. ಶಿಕ್ಷಕಿ ಸೀಮಾ ಭಟ್ಟ ಇವರು ಕಾರ್ಯಕ್ರಮ ನಿರೂಪಿಸಿದರು.
Leave a Comment