ಕಾರವಾರ:
ಸೆಪ್ಟೆಂಬರ್ ಅಂತ್ಯಕ್ಕೆ ಉತ್ತರ ಕನ್ನಡ ಜಿಲ್ಲೆ ಬಯಲು ಮಲ ವಿಸರ್ಜನಾ ಮುಕ್ತ ಜಿಲ್ಲೆಯಾಗಲಿದೆ ಎಂದು ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎಲ್.ಚಂದ್ರಶೇಖರ ನಾಯಕ ಹೇಳಿದ್ದಾರೆ.
ಉತ್ತರ ಕನ್ನಡ ಜಿಲ್ಲೆಯಲ್ಲಿ 1,23,061 ಕುಟುಂಬಗಳಿಗೆ ಶೌಚಾಲಯಗಳನ್ನು ನಿರ್ಮಿಸಿಕೊಡುವ ಗುರಿ ಹೊಂದಿದ್ದು, ಈಗಾಗಲೇ 1,01,981 ಶೌಚಾಲಯಗಳನ್ನು ನಿರ್ಮಿಸಿಕೊಡಲಾಗಿದೆ. ಪ್ರಸಕ್ತ 2017-18ನೇ ಸಾಲಿನ ಮೊದಲ ತ್ರೈಮಾಸಿಕ ಅವಧಿಯಲ್ಲಿ 7227 ಶೌಚಾಲಯಗಳನ್ನು ನಿರ್ಮಿಸಿ ಈವರೆಗೆ ರಾಜ್ಯದಲ್ಲಿಯೇ ಉತ್ತಮ ಸಾಧನೆ ಮಾಡಿರುವ ಜಿಲ್ಲೆಯಾಗಿದೆ. 2017 ಜೂನ್ ಅಂತ್ಯಕ್ಕೆ ಜೋಯಿಡಾ ತಾಲೂಕು ಬಯಲು ಮಲ ವಿಸರ್ಜನಾ ಮುಕ್ತ ತಾಲೂಕು ಎಂದು ಘೋಷಿಸಿಲಾಗಿದೆ. ಈವರೆಗೆ ಯಲ್ಲಾಪುರ, ಹಳಿಯಾಳ, ಜೋಯಿಡಾ ತಾಲೂಕುಗಳು ಹಾಗೂ 78 ಗ್ರಾಮ ಪಂಚಾಯ್ತಿಗಳನ್ನು ಬಯಲು ಮಲ ವಿಸರ್ಜನಾ ಮುಕ್ತ ಎಂದು ಘೋಷಿಸಲಾಗಿದೆ ಎಂದು ತಿಳಿಸಿದ್ದಾರೆ.2017 ಅಕ್ಟೋಬರ್ 2ರೊಳಗೆ ಜಿಲ್ಲೆಯಲ್ಲಿ ಬಯಲು ಮಲ ವಿಸರ್ಜನಾ ಮುಕ್ತ ಜಿಲ್ಲೆಯಾಗಿ ಘೋಷಿಸುವಂತೆ ಸರ್ಕಾರದಿಂದ ನಿರ್ದೇಶನವಿದ್ದು ಸೆಪ್ಟೆಂಬರ್ ವೇಳೆಗೆ ಬಾಕಿ ಇರುವ 21,080 ಶೌಚಾಲಯಗಳನ್ನು ನಿರ್ಮಿಸುವ ಮೂಲಕ ಗುರಿ ಸಾಧಿಸುವ ಗುರಿ ಹೊಂದಲಾಗಿದೆ. ಸಂಬಂಧಿಸಿದಂತೆ ಫಲಾನುಭವಿಗಳಿಗೆ ಸೌಲಭ್ಯವನ್ನು ತಲುಪಿಸಲು ಗ್ರಾಮ ಪಂಚಾಯ್ತಿ, ತಾಲೂಕು ಪಂಚಾಯ್ತಿ, ಜಿಲ್ಲಾ ಪಂಚಾಯ್ತಿ ಸದಸ್ಯರು, ಎಲ್ಲ ಚುನಾಯಿತ ಪ್ರತಿನಿಧಿಗಳು, ಆಶಾ ಕಾರ್ಯಕರ್ತರು, ಅಂಗನವಾಡಿ ಕಾರ್ಯಕರ್ತರು, ಶಾಲಾ ಶಿಕ್ಷಕರು ಹೆಚ್ಚಿನ ಸಂಖ್ಯೆಯಲ್ಲಿ ಆಸಕ್ತಿ ತೋರುವಂತೆ ಹಾಗೂ ಜಿಲ್ಲಾ ಪಂಚಾಯ್ತಿಯ ಅಭಿಯಾನಕ್ಕೆ ಕೈಜೋಡಿಸುವಂತೆ ಅವರು ಆಶಿಸಿದ್ದಾರೆ. ಸ್ವಚ್ಛ ಭಾರತ ಮಿಷನ್ ಯೋಜನೆಯಡಿ ಉತ್ತರ ಕನ್ನಡ ಜಿಲ್ಲೆ ಶೌಚಾಲಯ ನಿರ್ಮಾಣದಲ್ಲಿ ರಾಜ್ಯದಲ್ಲಿಯೇ ಅತ್ಯುತ್ತಮ ಜಿಲ್ಲೆಯಾಗಿ ಸಾಧನೆ ಮಾಡಿದ್ದು 2017 ಸೆಪ್ಟೆಂಬರ್ ಅಂತ್ಯಕ್ಕೆ ಜಿಲ್ಲೆಯಲ್ಲಿ ಬಾಕಿಯಿರುವ 21,080 ಶೌಚಾಲಯಗಳನ್ನು ನಿರ್ಮಿಸಿ ಬಯಲು ಮಲ ವಿಸರ್ಜನಾ ಮುಕ್ತ ಜಿಲ್ಲೆಯಾಗಿ ಘೋಷಣೆಯಾಗಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Leave a Comment