ಕಾರವಾರ:
ಎಚ್.ಐ.ವಿ ಪೀಡಿತರಿಗೂ ಜನ ಸಾಮಾನ್ಯರಂತೆ ಎಲ್ಲಾ ಹಕ್ಕುಗಳಿದ್ದು ಅದನ್ನು ಪಡೆದುಕೊಳ್ಳಲು ಕಾನೂನಿನ ಅಗತ್ಯವಿದೆ ಎಂದು ಹಿರಿಯ ಸಿವಿಲ್ ನ್ಯಾಯಾಧೀಶ ಟಿ. ಗೋವಿಂದಯ್ಯ ಹೇಳಿದರು. ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರವು ಜಿಲ್ಲಾ ಆಸ್ಪತ್ರೆಯ ಎ.ಆರ್.ಟಿ. ಕೇಂದ್ರದಲ್ಲಿ ಉಚಿತ ಕಾನೂನು ಸಲಹಾ ಕೇಂದ್ರವನ್ನು ಆರಂಭಿಸಿದೆ. ಪ್ರತಿ ಶನಿವಾರ ಬೆಳಿಗ್ಗೆ 10 ಗಂಟೆಯಿಂದ ಮಧ್ಯಾಹ್ನ 2.00 ಗಂಟೆಯವರೆಗೆ ಉಚಿತ ಕಾನೂನಿನ ಸಲಹೆಯನ್ನು ಪಡೆಯಬಹುದಾಗಿದೆ ಎಂದು ಹೇಳಿದರು.ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಕಾರವಾರ, ಜಿಲ್ಲಾ ವಕೀಲರ ಸಂಘ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಸಂರಕ್ಷಾ ಸಮುದಾಯ ಆರೈಕೆ ಕೇಂದ್ರದ ಆಶ್ರಯದಲ್ಲಿ ಎ.ಆರ್. ಟಿ. ಕೇಂದ್ರದಲ್ಲಿ ಉಚಿತ ಕಾನೂನು ಸಲಹಾ ಕೇಂದ್ರದ ಉದ್ಘಾಟನೆ ಹಾಗೂ ಕಾನೂನು ಅರಿವು ನೆರವು ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಶಸ್ರ್ತ ಚಿಕಿತ್ಸಕ ಡಾ. ಶಿವಾನಂದ ಕುಡ್ತರಕರ್ ಮಾತನಾಡಿ, ಜಿಲ್ಲಾ ಆಸ್ಪತ್ರೆಯಲ್ಲಿ ಯಾವುದೇ ರೀತಿಯಿಂದ ರೋಗಿಗಳಿಗೆ ತೊಂದರೆಯಾದಲ್ಲಿ ತಕ್ಷಣ ಮೇಲಾಧಿಕಾರಿಗಳ ಗಮನಕ್ಕೆ ತರಬೇಕು ಎಂದರು.
ವಕೀಲರ ಸಂಘದ ಅಧ್ಯಕ್ಷ ಉದಯ ಎನ್. ನಾಯ್ಕ, ಜಿಲ್ಲಾ ಏಡ್ಸ ನಿಯಂತ್ರಣಾಧಿಕಾರಿ ಡಾ. ಮಹಾಬಲೇಶ್ವರ ಹೆಗಡೆ, ವೈದ್ಯಾಧಿಕಾರಿ ಡಾ. ಆನಂದ ಪಾವಸ್ಕರ್, ಡಾ|| ವಿಶ್ವನಾಥ ರೆಡ್ಡಿ, ಎ.ಆರ್.ಟಿ. ಕೇಂದ್ರದ ಕಾನೂನು ಸಲಹೆಗಾರ ರಾಜಶೇಖರ ಬಿ. ನಾಯ್ಕ ವೇದಿಕೆಯಲ್ಲಿದ್ದರು. ಜಿಲ್ಲಾ ಆಸ್ಪತ್ರೆಯ ಪ್ರವೀಣ ಸ್ವಾಗತಿಸಿದರು, ಡ್ಯಾಪ್ಕೋ ಘಟಕ ಮೇಲ್ವಿಚಾರಕ ಮನೊಜ ನಾಯಕ ನಿರ್ವಹಿಸಿದರು. ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಪದ್ಮರಾಜ ನಾಯ್ಕ ವಂದಿಸಿದರು.
Leave a Comment