ಕಾರವಾರ:
ವಿಧ್ಯಾರ್ಥಿಗಳ ಉತ್ತಮ ಭವಿಷ್ಯ ರೂಪಿಸುವಲ್ಲಿ ಶಿಕ್ಷಕರಷ್ಟೇ, ಪಾಲಕರ ಪಾತ್ರವೂ ಮಹತ್ವದ್ದಾಗಿದೆ ಎಂದು ಬಾಲಮಂದಿರ ಪ್ರೌಢಶಾಲೆಯ ಮುಖ್ಯಾಧ್ಯಾಪಕಿ ಅಂಜಲಿ ಮಾನೆ ಹೇಳಿದರು.
ಬಾಲಮಂದಿರ ಪ್ರೌಢಶಾಲೆಯಲ್ಲಿ 1 ರಿಂದ 9 ನೇ ತರಗತಿ ವಿಧ್ಯಾರ್ಥಿಗಳ ವಿಧ್ಯಾಭ್ಯಾಸದ ಪ್ರಗತಿ ಕುರಿತುಪಾಲಕರೊಂದಿಗೆ ನಡೆದ ವಿಶೇಷ ಸಭೆ ಉದ್ಘಾಟಿಸಿ ಮಾತನಾಡಿದರು.
ಶಾಲೆಯಲ್ಲಿ ಶೈಕ್ಷಣಿಕವಾಗಿ ಅತ್ಯುತ್ತಮ ಗುಣಮಟ್ಟದ ಶಿಕ್ಷಣದ ಜೊತೆಗೆ ವಿಧ್ಯಾರ್ಥಿಗಳಲ್ಲಿ ಶಿಸ್ತು, ಸಂಯಮ ಮತ್ತು ವಿಧ್ಯಾಭ್ಯಾಸದ ಬಗ್ಗೆ ಹೆಚ್ಚಿನ ಆಸಕ್ತಿ ಮೂಡಿಸಲು ಪ್ರಯತ್ನಿಸಲಾಗುತ್ತದೆ. ಕೇವಲ ಶಾಲೆಯಲ್ಲಿ ಶಿಕ್ಷಕರ ಸುಪರ್ದಿಯಲ್ಲಿದ್ದಾಗ ಮಾತ್ರ ವಿಧ್ಯಾರ್ಥಿಗಳು ಅಭ್ಯಾಸ ಮಾಡುವಂತಾಗಬಾರದು. ಮನೆಗೆ ಮರಳಿದಾಗ ಪಾಲಕರು ಮನೆಯಲ್ಲಿ ಕೆಲ ಹೊತ್ತು ಸರಿಯಾಗಿ ಓದುವಂತೆ ಮಕ್ಕಳ ಮೇಲೆ ನಿಗಾ ಇಡಬೇಕು. ಅಭ್ಯಾಸದ ಸಮಯದಲ್ಲಿ ಅಭ್ಯಾಸ, ಆಟದ ವೇಳೆಯಲ್ಲಿ ಆಟ, ಪಠ್ಯೇತರ ಚಟುವಟಿಕೆಯಲ್ಲಿ ಭಾಗವಹಿಸುವಾಗ ಸೂಕ್ಷ್ಮವಾಗಿ ಗಮನಿಸಬೇಕು ಎಂದು ಕಿವಿಮಾತು ಹೇಳಿದರು.
ಬಳಿಕ ಪಾಲಕರಿಂದ ಶಾಲೆಯ ಅಭಿವೃದ್ಧಿ ಮತ್ತು ಶಿಕ್ಷಣದ ಗುಣಮಟ್ಟ ಇನ್ನಷ್ಟು ಹೆಚ್ಚಿಸುವ ಹಾಗೂ ಶಾಲಾ ನಿಯಮಾವಳಿಗಳಲ್ಲಿ ಬದಲಾವಣೆ ತರುವುದರ ಕುರಿತು ಸೂಕ್ತ ಸಲಹೆ,ಸೂಚನೆಗಳನ್ನು ಪಡೆಯಲಾಯಿತು. ಈ ಸಂದರ್ಭದಲ್ಲಿ ಶಾಲೆಯ ಎಲ್ಲ ತರಗತಿಗಳ ಮುಖ್ಯ ಶಿಕ್ಷಕರು,ವಿಷಯವಾರು ಶಿಕ್ಷಕರು ಹಾಗೂ ಶಿಕ್ಷಕೇತರ ಸಿಬ್ಬಂದಿಗಳು ಹಾಜರಿದ್ದರು.
Leave a Comment