ಕಾರವಾರ:
ಕಳೆದ ನಾಲ್ಕು ವರ್ಷಗಳಲ್ಲಿ ಪ್ರವಾಸೋದ್ಯಮ ಬೆಳವಣಿಗೆಗಾಗಿ 135 ಕಾಮಗಾರಿಗಳನ್ನು 240 ಕೋಟಿ ರೂ. ವೆಚ್ಚ ಮಾಡಲಾಗಿದೆ. ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಹಾಗೂ ಮೂಲಭೂತ ಸೌಲಭ್ಯ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಆರ್.ವಿ.ದೇಶಪಾಂಡೆ ಹೇಳಿದರು.
ಅವರು ಮಂಗಳವಾರ ಜಿಲ್ಲಾ ಪೊಲೀಸ್ ಮೈದಾನದಲ್ಲಿ ರಾಷ್ಟ್ರ ಧ್ವಜಾರೋಹಣ ನೆರವೇರಿಸಿ 71ನೇ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮಗಳಿಗೆ ಚಾಲನೆ ನೀಡಿ ಮಾತನಾಡಿದರು.
ಜಿಲ್ಲೆಯ ಪ್ರವಾಸೋದ್ಯಮಕ್ಕಾಗಿ ಕುಮಟಾ ತಾಲೂಕಿನ ಮಂಕಿಯಲ್ಲಿ ಪ್ರವಾಸಿ ಕಾಮಗಾರಿಗಳು ನಡೆಯುತ್ತಿವೆ. ಸ್ಕೂಬಾ ಡೈವಿಂಗ್ ಜಿಲ್ಲೆಯಲ್ಲಿ ಆಗುತ್ತಿದೆ, ಮತ್ತು ಹಾರ್ನಬಿಲ್ ಫೆಸ್ಟಿವಲ್ ಆಯೋಜಿಸಲಾಗುತ್ತಿದೆ. ಉದ್ಯೋಗ ಸೃಷ್ಟಿ, ಕೌಶಲ್ಯ ಆಧಾರಿತ ಶಿಕ್ಷಣ, ಮೂಲಸೌಕರ್ಯ ಅಭಿವೃದ್ಧಿಗೆ ವಿಶೇಷ ಒತ್ತು ನೀಡಲಾಗುತ್ತಿದ್ದು, ಕಳೆದ ನಾಲ್ಕು ವರ್ಷಗಳಲ್ಲಿ ಹಲವಾರು ಯೋಜನೆಗಳನ್ನು ಜಾರಿಗೊಳಿಸಲಾಗಿದೆ. ದಾಂಡೇಲಿಯಲ್ಲಿ 50 ಕೋಟಿ ರೂ. ವೆಚ್ಚದಲ್ಲಿ ರಾಷ್ಟ್ರೀಯ ನೈಪುಣ್ಯ ತರಬೇತಿ ಸಂಸ್ಥೆಯನ್ನು ನಿರ್ಮಿಸಲಾಗಿದೆ ಎಂದರು.
ಜಿಲ್ಲೆಯ 11 ತಾಲೂಕು ಆಸ್ಪತ್ರೆಗಳಲ್ಲಿ ಆಯ್.ಸಿ.ಯು. ಯುನಿಟ್ಸ್ ಮಾಡಲಾಗುತ್ತಿದೆ. ಸಮಾಜ ಕಲ್ಯಾಣ ಇಲಾಖೆಯಿಂದ ವಸತಿ ಗೃಹಗಳನ್ನು ನಿರ್ಮಿಸಿ ಎಸ್.ಸಿ ಮತ್ತು ಎಸ್.ಟಿ ವಿದ್ಯಾರ್ಥಿಗಳ ಉನ್ನತ ಶಿಕ್ಷಣಕ್ಕೆ ಪ್ರೋತ್ಸಾಹಿಸಲಾಗುತ್ತಿದೆ. ಜಿಲ್ಲೆಯಲ್ಲಿ 250 ಕೋಟಿ ರೂ. ಸೇತುವೆಗಳ ನಿರ್ಮಾಣಕ್ಕಾಗಿ ಮಂಜೂರು ಮಾಡಲಾಗಿದೆ ಎಂದರು. ಕಳೆದ ನಾಲ್ಕು ವರ್ಷಗಳಲ್ಲಿ ರಾಷ್ಟ್ರೀಯ ಮತ್ತು ರಾಜ್ಯ ಹೆದ್ದಾರಿಗಳನ್ನು ಸಾಕಷ್ಟು ಅಭಿವೃದ್ಧಿ ಪಡಿಸಲಾಗಿದೆ. ಇದಕ್ಕಾಗಿ ಪಿ.ಡೆಬ್ಲ್ಯೂ.ಡಿ.ಯಿಂದ 2199.ಕಿ.ಮೀ ರಸ್ತೆಗಾಗಿ 426 ಕೋಟಿ ವೆಚ್ಚ ಮಾಡಲಾಗಿದೆ. ಪಿ.ಎಂ.ಜಿ.ಎಸ್.ವಾಯ್.ಯಿಂದ 1728 ಕಿ.ಮೀ ರಸ್ತೆಗೆ 161.29 ಲಕ್ಷ ವ್ಯಯಿಸಲಾಗಿದೆ. 3 ರಾಜ್ಯ ಹೆದ್ದಾರಿಗಳನ್ನು ರಾಷ್ಟ್ರೀಯ ಹೆದ್ದಾರಿಗಳನ್ನಾಗಿ ಪರಿವರ್ತಿಸಲು ಪ್ರಸ್ತಾವನೆ ಕಳಿಸಲಾಗಿದ್ದು ಕೇಂದ್ರದಿಂದ ತಾತ್ವಿಕ ಒಪ್ಪಿಗೆ ನೀಡಲಾಗಿದೆ ಎಂದರು.
ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಏಪ್ರೀಲ್ 2017 ವರ್ಷದಲ್ಲಿ ಹೆಚ್ಚು ಅಂಕ ಗಳಿಸಿದ ತಾಲೂಕಾ ಮಟ್ಟದಲ್ಲಿ ಕಾರವಾರ ತಾಲೂಕಿನ ವಿದ್ಯಾರ್ಥಿಗಳಾದ ವಿಜಯಕುಮಾರ ಯಮನಪ್ಪಾ ಪೂಜಾರ, ಅರ್ಚನಾ ಡಿ.ನಾಯ್ಕ, ಅರ್ಪಿತಾ ಸಂತೋಷ ಜೋಶಿ ಮತ್ತು ಜಿಲ್ಲಾ ಮಟ್ಟದಲ್ಲಿ ತಿರುಮಲ ಮರಿಯಾ ಗೊಂಡ, ಯೋಗೇಶ ಕ್ಷೇತ್ರ ಗೌಡ, ನದಿಫಾ ಸೆಮುಲ್ಲಾ ಸಿಕ್ಕಂದರ, ಸೀಮಾ ಆಗೇರ ಮತ್ತು ದೀಪಕ ಪಾಂಡು ನಾಯ್ಕ ಇವರಿಗೆ ಲ್ಯಾಪ್ ಟಾಪಗಳನ್ನು ಈ ಸಂದರ್ಭದಲ್ಲಿ ವಿತರಿಸಿದರು. ಮುಖ್ಯಮಂತ್ರಿ ಸಾಂತ್ವನ ಹರೀಶ ಯೋಜನೆಯ ಜೀವ ರಕ್ಷಕ ಪ್ರಶಸ್ತಿಯನ್ನು ಕಿಶೋರ ದಯಾನಂದ ವೇರ್ಣೇಕರಗೆ ನೀಡಲಾಯಿತು.
ಪರೇಡನಲ್ಲಿ ಪ್ರಥಮ ಸ್ಥಾನ ಗಳಿಸಿದ ಜಿಲ್ಲಾ ಯುವಜನ ಸೇವಾ ಮತ್ತು ಕ್ರೀಡಾ ವಸತಿ ಶಾಲೆ, ದ್ವೀತಿಯ ಸ್ಥಾನ ಗಳಿಸಿದ ಕಾರವಾರ ಸರಕಾರಿ ಪದವಿ ಪೂರ್ವ ಕಾಲೇಜು ಹಾಗೂ ತೃತಿಯ ಸ್ಥಾನ ಗಳಿಸಿದ ಕಾರವಾರ ಸರಕಾರಿ ಪಾಲಿಟೆಕ್ನೀಕ್ ಕಾಲೇಜ ಇವರಿಗೆ ಪ್ರಶಸ್ತಿ ವಿತರಿಸಲಾಯಿತು. ಕಾರ್ಯಕ್ರಮದಲ್ಲಿ 15 ತುಕಡಿಗಳಿಂದ ಆಕರ್ಷಕ ಪಥಸಂಚಲನ ನಡೆಸಲಾಯಿತು. ಶಾಲಾ ವಿದ್ಯಾರ್ಥಿಗಳ ವಿವಿಧ ಸಾಂಸ್ಕøತಿಕ ಕಾರ್ಯಕ್ರಮಗಳು ಗಮನ ಸೆಳೆದವು. ಶಾಸಕ ಸತೀಶ್ ಸೈಲ್, ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಜಯಶ್ರೀ ಮೋಗೇರ, ನಗರಸಭೆ ಅಧ್ಯಕ್ಷ ಗಣಪತಿ ನಾಯ್ಕ, ಉಪಾದ್ಯಕ್ಷೆ ಲೀಲಾಬಾಯಿ ಠಾಣೇಕರ್, ಜಿಲ್ಲಾಧಿಕಾರಿ ಎಸ್.ಎಸ್.ನಕುಲ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಲ್.ಚಂದ್ರಶೇಖರ ನಾಯ್ಕ, ಜಿಲ್ಲಾ ಪೊಲೀಸ್ವರಿಷ್ಠಾಧಿಕಾರಿ ವಿ.ವಿ ಪಾಟೀಲ ಇತರರಿದ್ದರು.
Leave a Comment