ಕಾರವಾರ: ಸ್ವಾತಂತ್ರ್ಯ ದಿನಾಚರಣೆ ಪಥ ಸಂಚಲನದಲ್ಲಿ ಭಾಗವಹಿಸುವಂತೆ ಶಿಕ್ಷಣ ಇಲಾಖೆ ಆದೇಶದ ಮೇರೆಗೆ ಹಾಜರಾಗಿದ್ದ ಶಿರಸಿಯ ಸೆಂಟ್ ಅಂಥೋನಿ ಪ್ರೌಢಶಾಲೆಯವರಿಗೆ ಪಥ ಸಂಚಲನದಲ್ಲಿ ಭಾಗವಹಿಸಿ ಸಚಿವ ಆರ್.ವಿ ದೇಶಪಾಂಡೆ ಮುಂದೆ ಶಿಸ್ತು ಪ್ರದರ್ಶಿಸಲು ಅಧಿಕಾರಿಗಳು ಅವಕಾಶ ನೀಡಲಿಲ್ಲ.
ಪಥ ಸಂಚಲನದಲ್ಲಿ ಭಾವಹಿಸುವ ಉತ್ಸಾಹದಿಂದ ಬೆಳಗ್ಗೆ 4ಗಂಟೆಗೆ ಎದ್ದು ಶಿರಸಿಯಿಂದ ಜಿಲ್ಲಾಕೇಂದ್ರಕ್ಕೆ ಆಗಮಿಸಿದ್ದ 30 ವಿದ್ಯಾರ್ಥಿಗಳು ಅವಕಾಶ ಸಿಗದ ಕಾರಣ ಆಕ್ರೋಶ ವ್ಯಕ್ತಪಡಿಸಿದರು. ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಸೂಚಿಸಿದಂತೆ ಶಿರಸಿ ಶಿಕ್ಷಣಾಧಿಕಾರಿಗಳು ಸೆಂಟ್ ಅಂಥೋನಿ ಪ್ರೌಢಶಾಲೆಯ ಮಕ್ಕಳಿಗೆ ಅಗಷ್ಟ್ 15ರಂದು ಪಥ ಸಂಚಲನದಲ್ಲಿ ಭಾಗವಹಿಸುವಂತೆ ಪತ್ರದ ಮೂಲಕ ಆದೇಶಿಸಿದ್ದರು. ಅದರಂತೆ ಪಥಸಂಚಲನದಲ್ಲಿ ಭಾಗವಹಿಸುವ ಸಕಲ ಸಿದ್ದತೆಯೊಂದಿಗೆ 30 ವಿದ್ಯಾರ್ಥಿಗಳು ನಾಲ್ವರು ಶಿಕ್ಷಕರೊಡನೆ ಸಮಯಕ್ಕೆ ಸರಿಯಾಗಿ ಹಾಜರಾಗಿದ್ದರು. ಆದರೆ, ಇಲ್ಲಿನ ಅಧಿಕಾರಿಗಳು ಶಿರಸಿ ಶೈಕ್ಷಣಿಕ ಜಿಲ್ಲೆಯ ವಿದ್ಯಾರ್ಥಿಗಳಿಗೆ ಭಾಗವಹಿಸಲು ಅವಕಾಶ ಕೊಡಲಿಲ್ಲ. ಪಥ ಸಂಚಲನದಲ್ಲಿ ಭಾಗವಹಿಸಲು ತರಭೇತಿ ಪಡೆದಿರಬೇಕು. ಶಿರಸಿ ವಿದ್ಯಾರ್ಥಿಗಳು ನಾಲ್ಕು ದಿನಗಳ ತರಭೇತಿಗೆ ಹಾಜರಾಗಿಲ್ಲ ಎಂಬ ಕಾರಣ ನೀಡಿ ಸಚಿವ ಆರ್.ವಿ. ದೇಶಪಾಂಡೆ ಅವರ ಮುಂದೆ ಶಿಸ್ತಿನ ಪೇರೆಡ್ ನಡೆಸುವ ಅವಕಾಶವನ್ನು ಕಸಿದುಕೊಂಡರು.
ಕಾರವಾರದಲ್ಲಿ ತರಭೇತಿ ನೀಡುವ ಕುರಿತು ಶಿಕ್ಷಣ ಇಲಾಖೆ ತಮಗೆ ಯಾವದೇ ಮಾಹಿತಿ ನೀಡಿಲ್ಲ. ಅಗಷ್ಟ್ 15ರಂದು ಹಾಜರಾಗುವಂತೆ ಮಾತ್ರ ಆದೇಶದಲ್ಲಿ ಸೂಚಿಸಲಾಗಿದೆ. ಹೀಗಿದ್ದರೂ ಕಳೆದ ಮೂರು ದಿನಗಳಿಂದ ವಿದ್ಯಾರ್ಥಿಗಳಿಗೆ ಶಿರಸಿಯಲ್ಲಿ ಸೂಕ್ತ ತರಭೇತಿ ನೀಡಿ ಇಲ್ಲಿಗೆ ಕರೆತಂದಿರುವದಾಗಿ ಶಿಕ್ಷಕರು ತಿಳಿಸಿದರು. ಇದನ್ನು ಒಪ್ಪದ ಅಧಿಕಾರಿಗಳು ಕೊನೆಗೂ 30 ವಿದ್ಯಾರ್ಥಿಗಳಿಗೆ ಪಥ ಸಂಚಲನ ಕಾರ್ಯಕ್ರಮದಲ್ಲಿ ಭಾಗವಹಿಸುವದಕ್ಕೆ ಒಪ್ಪಿಗೆ ನೀಡಲಿಲ್ಲ.
Leave a Comment