ಕಾರವಾರ: ವಿದ್ಯುತ್ ಪೂರೈಕೆ ಸರಿಯಾಗಿಲ್ಲ. ಹೆಸ್ಕಾಂ ಅಧಿಕಾರಿಗಳು ಕೈಗೆ ಸಿಗುತ್ತಿಲ್ಲ. ಸಹಾಯವಾಣಿಗೆ ಕರೆ ಮಾಡಿದರೆ ಸ್ವೀಕರಿಸುವವರಿಲ್ಲ. ಹಳೆಯ ವಿದ್ಯುತ್ ತಂತಿಗಳನ್ನು ಬದಲಿಸಿಲ್ಲ. ಬೆಳಗ್ಗೆ ಹೋದ ಕರೆಂಟ್ ರಾತ್ರಿ ಕಳೆದರೂ ಬರಲ್ಲ…
ಇವೇ ಮೊದಲಾದ ದೂರುಗಳಿಂದ ಜಿಲ್ಲಾ ರಂಗ ಮಂದಿರದಲ್ಲಿ ಸೋಮವಾರ ನಡೆದ ಹೆಸ್ಕಾಂ ಗ್ರಾಹಕ ಸಭೆ ಮುಕ್ತಾಯವಾಯಿತು. ಸಭೆಯಲ್ಲಿ ಹೆಚ್ಚಿನ ಗ್ರಾಹಕರು ಭಾಗವಹಿಸದಿದ್ದರೂ ದೂರುಗಳಿಗೆ ಬರವಿರಲಿಲ್ಲ. ಸಮಸ್ಯೆಗಳನ್ನು ಆಲಿಸಿದ ಹೆಸ್ಕಾಂ ಅಧಿಕಾರಿಗಳು ದೂರಿಗಳಿಗೆ ಸೂಕ್ತ ಪರಿಹಾರ ಸೂಚಿಸುವಲ್ಲಿಯೂ ವಿಫಲರಾದರು. ಕೆಲ ಸಮಸ್ಯೆಗಳಿಗೆ ಮಾತ್ರ ಸ್ಪಂದನೆ ನೀಡಿದ್ದು, ಎಂದಿನಂತೆ ಬಗೆ ಹರಿಸುವ ಆಶ್ವಾಸನೆ ನೀಡಿದರು. ಬೆರಳಣಿಕೆ ಸಂಖ್ಯೆಯಲ್ಲಿ ಭಾಗವಹಿಸಿದ್ದ ಹೆಸ್ಕಾಂ ಗ್ರಾಹಕರು ಸಮಸ್ಯೆಗಳ ಸರಮಾಲೆಯನ್ನೇ ಹೊತ್ತು ತಂದಿದ್ದರು. ಕೆಲವರು ಈ ಹಿಂದೆ ಲಿಖಿತ ಅರ್ಜಿ ಸಲ್ಲಿಸಿದ್ದು, ಗ್ರಾಹಕರ ಸಭೆಯಲ್ಲಿ ಅದನ್ನು ಪ್ರಸ್ತಾಪಿಸಿ ಇನ್ನೊಮ್ಮೆ ಅರ್ಜಿ ಕೊಟ್ಟರು.
ಗ್ರಾಮೀಣ ಭಾಗಗಳಾದ ಅಮದಳ್ಳಿ, ಚೆಂಡಿಯಾ, ಅರ್ಗಾ, ಬಿಣಗಾ, ಸದಾಶಿವಗಡ, ಗೋಟೆಗಾಳಿ, ಕದ್ರಾ ಮೊದಲಾದ ಕಡೆಗಳಿಂದ ದೂರುಗಳು ಸಲ್ಲಿಕೆಯಾದವು. ಚೆಂಡಿಯಾದಲ್ಲಿ ಸಾಗುವಳಿ ಮಾಡುವ ಗದ್ದೆಯಲ್ಲಿ ವಿದ್ಯುತ್ ಕಂಬಗಳನ್ನು ಹಾಕಿ ತಂತಿ ಎಳೆಯಲಾಗಿದೆ. ಇದರಿಂದ ಕೃಷಿಗೆ ತೊಂದರೆಯಾಗಿದ್ದು, ಇದನ್ನು ಬದಲಿಸಿಕೊಡಬೇಕು ಎಂದು ರೈತರೊಬ್ಬರು ಒತ್ತಾಯಿಸಿದರು. ಗಣೇಶ ಹಬ್ಬಕ್ಕೆ ತಡೆ ರಹಿತ ವಿದ್ಯುತ್ ಪೂರೈಕೆ ಮಾಡಬೇಕು ಎಂದು ಜನ ಮನವಿ ಮಾಡಿದರು. ಸದಾಶಿವಗಡ ಭಾಗದಲ್ಲಿ ಸಿಂಗಲ್ ಫೇಸ್ ವಿದ್ಯುತ್ ನೀಡಲಾಗುತ್ತಿದ್ದು, ಖಾಯಂ ಗ್ರೀಡ್ ಸ್ಥಾಪಿಸುವಂತೆ ಆಗ್ರಹಿಸಿದರು. ಹಲವು ದೇವಸ್ಥಾನಗಳು ಅಕ್ರಮ ವಿದ್ಯುತ್ ಸಂಪರ್ಕ ಪಡೆದಿರುವ ಬಗ್ಗೆಯೂ ಸಭೆಯಲ್ಲಿ ವಿಷಯ ಪ್ರಸ್ತಾಪವಾಯಿತು. ಮೀಟರ್ ರದ್ದುಗೊಳಿಸಿ ವರ್ಷ ಕಳೆದರೂ ಠೇವಣಿ ಮರುಪಾವತಿಸಿಲ್ಲ ಎಂದು ಎಸ್.ವಿ ನಾಯ್ಕ ಎಂಬಾತರು ಆಕ್ರೋಶ ವ್ಯಕ್ತಪಡಿಸಿದರು.
ಸೀಬರ್ಡ್ನಿಂದ ಪ್ರತ್ಯೇಕಿಸಿ ಅಮದಳ್ಳಿ ಅಥವಾ ಚೆಂಡಿಯಾದಲ್ಲಿ ಹೊಸ ಗ್ರೀಡ್ ಸ್ಥಾಪನೆ ಮಾಡಬೇಕು ಎಂಬ ಬೇಡಿಕೆ ಬಂದಿತು. ಕದ್ರಾದಲ್ಲಿ ಕಚೇರಿ ವಾಹನ, ಸಿಬ್ಬಂದಿ ಕೊರತೆ ಇದೆ ಎಂದು ಅಲ್ಲಿನವರು ಸಭೆ ಗಮನಕ್ಕೆ ತಂದರು. ಕದ್ರಾದಲ್ಲಿ ಹೊಸ ಶಾಖೆ ತೆರೆಯಲು ಪ್ರಸ್ತಾವನೆ ಕಳುಹಿಸಿರುವದಾಗಿ ಕಾರ್ಯ ಪಾಲಕ ಎಂಜಿನೀಯರ್ ಜಿ.ಬಿ.ಈಡೂರ್ಕರ್ ಸಭೆಗೆ ತಿಳಿಸಿದರು. ಇನ್ನು ಎಲ್.ಡಿ.ಡಿ ಬಲ್ಪ್ ವಿತರಣೆಯಲ್ಲಿನ ಗೊಂದಲದ ಕುರಿತು ಚರ್ಚೆ ನಡೆಯಿತು. ಜಿ.ಪಂ.ಅಧ್ಯಕ್ಷೆ ಚೈತ್ರಾ ಕೊಠಾರಕರ, ತಾ.ಪಂ.ಸಾಮಾಜಿಕ ನ್ಯಾಯ ಸಮಿತಿ ಅಧ್ಯಕ್ಷ ಪುರುಷೋತ್ತಮ್ ಗೌಡ ಇತರರು ಇದ್ದರು.
Leave a Comment