
ಹೊನ್ನಾವರ , ಪ್ಲಾಸ್ಟಿಕ್ ವ್ಯವಸ್ಥೆಗೆ ನಾವು ಒಪ್ಪಿಕೊಂಡು ಹೋಗಿದ್ದು ಅದರ ಬಳಕೆಯಲ್ಲಿ ನಿಯಂತ್ರಣ ಸಾಧಿಸದಿದ್ದರೆ ಮನುಕುಲ ಅತ್ಯಂತ ಭಯಾನಕ ಬದುಕನ್ನು ಎದುರಿಸಬೇಕಾಗುತ್ತದೆ ಎಂದು ಹೊನ್ನಾವರದ ತಹಸೀಲ್ದಾರ ವಿ.ಆರ್.ಗೌಡ ಅಭಿಪ್ರಾಯ ಪಟ್ಟರು.
ಅವರು ಜನಶಿಕ್ಷಣ ಸಂಸ್ಥಾನ ಕಾರವಾರ, ಕುಮುದಾ ಅಭಿವೃದ್ಧಿ ಸಂಸ್ಥೆ ಹೊನ್ನಾವರ, ಶಿಶು ಅಭಿವೃದ್ಧಿ ಯೋಜನೆ, ಪಟ್ಟಣ ಪಂಚಾಯತ ಹೊನ್ನಾವರ, ಸ್ವಚ್ಛ ಹೊನ್ನಾವರ ಹಾಗೂ ವಿವಿಧ ಸಂಘ-ಸಂಸ್ಥೆಗಳ ಆಶ್ರಯದಲ್ಲಿ
ಹೊನ್ನಾವರದ ಪಟ್ಟಣ ಪಂಚಾಯತ ಸಭಾಭವನದಲ್ಲಿ ನಡೆದ ಸ್ವಚ್ಛತಾ ಜಾಗೃತಿ ಕಾರ್ಯಕ್ರಮ ಹಾಗೂ ಪ್ಲಾಸ್ಟಿಕ್ ಬಳಕೆ ಬೇಡ ಎಂಬ ಕಾರ್ಯಕ್ರಮವನ್ನು ಸಾಂಕೇತಿಕವಾಗಿ ಉದ್ಘಾಟಿಸಿ ಮಾತನಾಡಿದರು.
ಹೊನ್ನಾವರದಲ್ಲಿ ಪ್ಲಾಸ್ಟಿಕ್ ಸಂಪೂರ್ಣ ನಿಷೇಧ ಮಾಡಲೇಬೇಕು ಎನ್ನುವ ಹಟ ತೊಟ್ಟಿದ್ದು ಆ ನಿಟ್ಟಿನಲ್ಲಿ ಪಟ್ಟಣ ಪಂಚಾಯತ ಹಾಗೂ ತಾಲೂಕಾ ಆಡಳಿತ ತೊಡಗಿಸಿಕೊಂಡಿದೆ ಅಂದರು.
ಹೊನ್ನಾವರ ಪಟ್ಟಣ ಪಂಚಾಯತ ಮುಖ್ಯಾಧಿಕಾರಿ ಎನ್.ಎಮ್.ಮೇಸ್ತ ಮಾತನಾಡಿ ಹೊನ್ನಾವರದಲ್ಲಿ ಪ್ಲಾಸ್ಟಿಕ್ ರಹಿತ ಪಟ್ಟಣ ಮಾಡುವ ತಯಾರಿ ಭರದಿಂದಲೇ ನಡೆಯುತ್ತಿದೆ. ಆ ಜನಪರ ಕೆಲಸಕ್ಕೆ ಸಾರ್ವಜನಿಕರ ಬೆಂಬಲ ಬೇಕಿದ್ದು ಅದಕ್ಕೆ ಸಹಕರಿಸಲು ಕೋರಿದರು.
ಶಿಶು ಅಭಿವೃದ್ಧಿ ಯೋಜನಾಧಿಕಾರಿ ವಿ.ಎಚ್.ಪಾಟೀಲ ಮಾತನಾಡಿ ಸ್ವಚ್ಛ ಭಾರತ ನಮ್ಮ ಕಲ್ಪನೆ ಆಗಬೇಕು. ಕಸದ ನಿರ್ವಹಣೆ ಸರಿಯಾಗಿ ಮಾಡಬೇಕು. ಅದರ ಕುರಿತಾದ ದೂರು ಇದ್ದಲ್ಲಿ ಅದನ್ನು ಸಂಬಂಧ ಪಟ್ಟವರ ಗಮನಕ್ಕೆ ತರಬೇಕು ಎಂದರು.
ಹೊನ್ನಾವರ ಪಟ್ಟಣ ಪಂಚಾಯತ ಅಧಿಕಾರಿ ಸುನೀಲ ಗಾವಡೆ ಮಾತನಾಡಿ ಪ್ಲಾಸ್ಟಿಕ್ ದುಷ್ಪರಿಣಾಮಗಳ ಬಗ್ಗೆ, ಕಸದ ವಿಂಗಡನೆಯ ಅಗತ್ಯ, ಸಾರ್ವಜನಿಕರ ಸಹಭಾಗಿತ್ವ ಇರಬೇಕಲ್ಲದೇ ತಾವು ಹೊನ್ನಾವರ ಪಟ್ಟಣ ಪಂಚಾಯತ ವ್ಯಾಪ್ತಿಯಲ್ಲಿ ಕೈಗೊಂಡ ಕ್ರಮಗಳ ಬಗ್ಗೆ ವಿವರಿಸಿದರು.
ಜನಶಿಕ್ಷಣ ಸಂಸ್ಥೆಯ ಅಧಿಕಾರಿ ರಮೇಶ ಭಂಡಾರಿ ಮಾತನಾಡಿ ಕಸದ ನಿರ್ವಹಣೆ, ಪ್ಲಾಸ್ಟಿಕ್ ಬಳಕೆಯ ನಿಯಂತ್ರಣ ಕುರಿತಾಗಿ ನಮ್ಮ ಮನೋಬಲದಲ್ಲಿಯೇ ಬದಲಾವಣೆ ಆಗಬೇಕಿದೆ, ಹಾಗಾದಾಗ ಸ್ವಚ್ಛ ಪರಿಸರದ ಕಲ್ಪನೆ ಸಹಜವಾಗಿಯೇ ಜಾಗೃತವಾಗುತ್ತದೆ ಎಂದರು.
ಸ್ವಚ್ಛ ಪರಿಸರ ಹಾಗೂ ಪ್ಲಾಸ್ಟಿಕ್ ಬಳಕೆ ಬೇಡ ಎನ್ನುವ ವಿಷಯದ ಕುರಿತು ಮಾತನಾಡಿದ ಎಸ್.ಡಿ.ಎಮ್.ಕಾಲೇಜಿನ ಪ್ರಾದ್ಯಾಪಕ ಪ್ರಶಾಂತ ಹೆಗಡೆ, ಪ್ಲಾಸ್ಟಿಕ್‍ನ್ನು ಸುಡುವ ಪ್ರಯತ್ನ ಮಾಡಲೇ ಬೇಡಿ, ತ್ಯಾಜ್ಯ ವಿಂಗಡನೆಯ ಸಂದರ್ಭದಲ್ಲಿ ಪ್ಲಾಸ್ಟಿಕ್ ಪ್ರತ್ಯೇಕ ಸಂಗ್ರಹಿಸಿ, ಪ್ಲಾಸ್ಟಿಕ್ ನಿಯಂತ್ರಣ ತುಂಬಾ ಕಷ್ಟ ಎನ್ನುವ ಸತ್ಯ ಗೊತ್ತಿದ್ದರೂ ಅದರ ನಿಯಂತ್ರಣದತ್ತ ನಾವು ಮುನ್ನುಗ್ಗಲೇಬೇಕು. ಈ ಕುರಿತಾದ ಜಾಗೃತಿ ಪ್ರಜ್ನೆ ನಮ್ಮಲ್ಲಿ ಉಂಟಾಗದಿದ್ದರೆ ಮುಂದೊಮ್ಮೆ ಘೋರ ಕೆಟ್ಟ ಪರಿಣಾಮ ಮುಂದಿನ ಜನಾಂಗ ಎದುರಿಸಬೇಕಾಗುತ್ತದೆ ಎಂದರು. ಜೆಎಸ್‍ಎಸ್ ಕಾರ್ಯಕ್ರಮಾಧಿಕಾರಿ ಉಷಾ ದುರ್ಗೇಕರ ಮಾತನಾಡಿದರು.
ನಂತರ ಶರಾವತಿ ಸರ್ಕಲ್‍ಗೆ ಬಂದು ಅಲ್ಲಿ ಸಾರ್ವಜನಿಕರಿಗೆ ಪ್ಲಾಸ್ಟಿಕ್ ಅಪಾಯದ ಕುರಿತು ತಿಳಿಸಿ, ಪ್ಲಾಸ್ಟಿಕ್ ರಹಿತ ಚೀಲವನ್ನು ನೀಡಿ ಸೇರಿದ ನೂರಾರು ಜನರಿಗೆ ಜಾಗೃತಿ ಮೂಡಿಸಲಾಯಿತು.
ಈ ಜಾಗೃತಿ ಕಾರ್ಯಕ್ರಮದಲ್ಲಿ ನೂರಾರು ಮಹಿಳೆಯರು, ಕಾರ್ಯಕರ್ತರು ಭಾಗವಹಿಸಿದ್ದರು.
ರೂಪಾ ಅಗೇರ ಸ್ವಾಗತಿಸಿದರು, ಅಕ್ಷಯ್ ಮೇಸ್ತ ವಂದಿಸಿದರು, ಮಹೇಶ ಭಂಡಾರಿ ಕಾರ್ಯಕ್ರಮ ನಿರ್ವಹಿಸಿದರು.
ತಹಸೀಲ್ದಾರ ವಿ.ಆರ್.ಗೌಡ ಸ್ವಚ್ಛತಾ ಜಾಗೃತಿ ಕಾರ್ಯಕ್ರಮ ಹಾಗೂ ಪ್ಲಾಸ್ಟಿಕ್ ಬಳಕೆ ಬೇಡ ಎಂಬ
ಕಾರ್ಯಕ್ರಮವನ್ನು ಸಾಂಕೇತಿಕವಾಗಿ ಉದ್ಘಾಟಿಸಿ ಮಾತನಾಡಿದರು
ಹೊನ್ನಾವರದ ಶರಾವತಿ ಸರ್ಕಲ್‍ನಲ್ಲಿÉ ಸಾರ್ವಜನಿಕರಿಗೆ ಪ್ಲಾಸ್ಟಿಕ್ ಅಪಾಯದ ಕುರಿತು ತಿಳಿಸಿ,
ಪ್ಲಾಸ್ಟಿಕ್ ರಹಿತ ಚೀಲವನ್ನು ಸೇರಿದ ನೂರಾರು ಜನರಿಗೆ ನೀಡಿ ಜಾಗೃತಿ ಮೂಡಿಸಲಾಯಿತು.
Leave a Comment