
ಹೊನ್ನಾವರ:
ಚಂದಾವರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಡ್ನೀರು ಭಾಗದಲ್ಲಿ ಶನಿವಾರ ತಡರಾತ್ರಿ ರೈತರ ಭತ್ತದ ಗದ್ದೆಗಳಿಗೆ ಕಾಡುಕೋಣ ಪ್ರತ್ಯಕ್ಷವಾಗಿದ್ದು, ರೈತರ ಭತ್ತದ ಗದ್ದೆಗಳನ್ನು ವಿಪರೀತ ಹಾನಿಮಾಡಿರುವುದು ರೈತರಲ್ಲಿ ಭಯ ಮತ್ತು ಆತಂಕ ಎದುರಾಗಿದೆ.
ಕಡ್ನೀರಿನ ಗುಡ್ನಗದ್ದೆ ಭಾಗದಲ್ಲಿ ಶನಿವಾರ ತಡರಾತ್ರಿ ಇದ್ದಕ್ಕಿದ್ದಂತೆ ಕಾಡುಕೋಣ ಕಾಣಿಸಿಕೊಂಡಿದೆ. ಗುಡ್ನಗದ್ದೆಯ ರಾಮ ನಾರಾಯಣ ಗೌಡ ಎಂಬುವರ ಗದ್ದೆಯನ್ನು ಯಾವುದೋ ಕಾಡುಪ್ರಾಣಿ ಹಾನಿಮಾಡಿರುವುದನ್ನು ಮನಗಂಡು ಶನಿವಾರ ರಾತ್ರಿ ತಮ್ಮ ಗದ್ದೆಯನ್ನು ವೀಕ್ಷಿಸಲು ತಡರಾತ್ರಿ ಆಗಮಿಸಿದ್ದರು. ಈ ವೇಳೆ ಗದ್ದೆಯಲ್ಲಿ ದೊಡ್ಡದಾದ ಕೋಣ ಇರುವುದು ಕಂಡುಬಂದಿದ್ದು, ಬೆಳಕಿನ ಸಹಾಯದಿಂದ ಸೂಕ್ಷ್ಮವಾಗಿ ಗಮನಿಸಿದಾಗ ಕಾಡುಕೋಣ ಬಂದಿರುವುದು ಖಚಿತವಾಗಿದೆ. ಭಾನುವಾರ ಬೆಳಗಿನಜಾವ ಕಾಡುಕೋಣ ಹಾದು ಹೋಗಿರುವ ಜಾಗವನ್ನು ಪರೀಕ್ಷಿಸಿದಾಗ ಕಾಡುಕೋಣದ ಹೆಜ್ಜೆ ಗುರುತು ಕಾಣಿಸಿಕೊಂಡಿದೆ. ಇದಲ್ಲದೆ ಸುಮಾರು 20 ಗುಂಟೆ ಜಾಗದಷ್ಟು ಗದ್ದೆಯನ್ನು ಮೆಂದು ಹಾನಿಪಡಿಸಿರುವುದು ತಿಳಿದುಬಂದಿದೆ.
ಹಂದಿ ಆಯ್ತು ಈಗ ಕಾಡುಕೋಣ: ರೈತರಿಗೆ ಕಾಡುಪ್ರಾಣಿಗಳ ಕಾಟ ಹೆಚ್ಚುತ್ತುರುವ ಬೆನ್ನಲ್ಲೇ ಭಯಾನಕ ಕಾಡುಪ್ರಾಣಿಗಳ ಹಾವಳಿ ಇತ್ತೀಚೆಗೆ ಹೆಚ್ಚಾಗಿರುವುದು ರೈತರನ್ನು ಇನ್ನಷ್ಟು ಕಂಗಾಲಾಗುವಂತೆ ಮಾಡಿದೆ. ಮಂಗ, ಹಂದಿ, ಚಿಪ್ಪಕ್ಕಿ, ಮೊಲ ಹೀಗೆ ಅನೇಕ ಕಾಡುಪ್ರಾಣಿಗಳು ರೈತರ ಜಮೀನಿಗೆ ಬಂದು ರೈತರ ಬೆಳೆಗಳನ್ನು ಹಾಳುಮಾಡುವುದು ಸರ್ವೇಸಾಮಾನ್ಯವಾಗಿತ್ತು. ಆದರೆ ಇತ್ತೀಚೆಗೆ ಮನುಷ್ಯರನ್ನು ಕಂಡರೆ ಕೊಲ್ಲುವಂತಹ ಹುಲಿ, ಚಿರತೆ, ಕಾಡುಕೋಣಗಳಂತಹ ದೊಡ್ಡ ಕಾಡುಪ್ರಾಣಿಗಳು ನಾಡಿಗೆ ಆಗಮಿಸುತ್ತಿರುವುದು ಜನರಲ್ಲಿ ತೀವ್ರ ಭಯದ ವಾತಾವರಣ ನಿರ್ಮಾಣವಾಗಿದೆ. ಇದರಿಂದಾಗಿ ಶಾಲಾ-ಕಾಲೇಜು ವಿದ್ಯಾರ್ಥಿಗಳು, ಜನಸಾಮಾನ್ಯರು ಹಗಲು ಹೊತ್ತಿನಲ್ಲೂ ಓಡಾಡುವುದೂ ಕಷ್ಟಕರವಾಗಿದೆ.

ಬೇಲಿಗೂ ಅಂಜುತ್ತಿಲ್ಲ: ಕಡ್ನೀರು ಭಾಗದಲ್ಲಿ ಹಂದಿ ಮತ್ತಿತರ ಪ್ರಾಣಿಗಳು ಗದ್ದೆಗಳಿಗೆ ಬರುತ್ತವೆ ಎಂಬ ಕಾರಣಕ್ಕೆ ಹಳೆಯ ಸೀರೆ ಮತ್ತು ಮುಳ್ಳು ಗಿಡಗಳ ಬೇಲಿ ಮಾಡಿದರೂ ಪ್ರಾಣಿಗಳು ಅದನ್ನು ಹತ್ತಿಕ್ಕಿ ರೈತರ ಕೃಷಿ ಜಮೀನಿಗೆ ನುಗ್ಗುತ್ತಿರುವುದು ರೈತನ ಶ್ರಮಕ್ಕೆ ಬೆಲೆ ಇಲ್ಲದಂತಾಗಿದೆ.
“ಕಡ್ನೀರಿನ ಗುಡ್ನಗದ್ದೆಯ ರಾಮ ಗೌಡ ಅವರ ಗದ್ದೆಗೆ ರಾತ್ರಿ ಕಾಡುಕೋಣ ಬಂದು ಭತ್ತದ ಗದ್ದೆಯನ್ನು ಹಾನಿಮಾಡಿದೆ. ರೈತರಾದ ನಮಗೆ ನಾವು ಬೆಳೆದ ಯಾವ ಬೆಳೆಗಳನ್ನು ಕಾಪಾಡಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಮಂಗ, ಹಂದಿಗಳು ಉಪಟಳ ನೀಡಿ ಬೆಳೆಗಳನ್ನು ನಷ್ಟಮಾಡಿದೆ. ಇದರ ಜೊತೆಯಲ್ಲೇ ಕಾಡುಕೋಣವೂ ಜಮೀನಿಗೆ ಬಂದು ಹಾನಿಮಾಡುತ್ತದೆ ಎಂದಾದರೆ ಇದಕ್ಕೆ ಸಂಬಂಧಪಟ್ಟ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳೇ ಪರ್ಯಾಯ ವ್ಯವಸ್ಥೆ ಕಲ್ಪಿಸಬೇಕು
”-ಈರಪ್ಪ ನಾಯ್ಕ ಕಡ್ನೀರು, ಪ್ರಗತಿಪರ ಕೃಷಿಕ.

Leave a Comment