
ವಿದ್ಯಾರ್ಥಿಗಳಲ್ಲಿ ಕನ್ನಡ ಸಂಸ್ಕೃತಿ ಮತ್ತು ಪರಂಪರೆಯ ಹಿರಿಮೆಯ ಅರಿವು ಮೂಡಿಸಿ ನಮ್ಮ ನಾಡು, ನುಡಿಯ ರಕ್ಷಣೆಗೆ ಯುವಕರು ಮುಂದಾಗಬೇಕಿದೆ ಎಂದು ಹೊನ್ನಾವರ ಪೋಲಿಸ್ ವೃತ್ತನಿರಿಕ್ಷರಾದ ವಸಂತ ಆಚಾರಿ ಹೇಳಿದರು.
ಪಟ್ಟಣದ ಪ್ರಭಾತನಗರದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ತಾಲೂಕು ಘಟಕದ ಸಹಯೋಗದಲ್ಲಿ ಶುಕ್ರವಾರ ಆಯೋಜಿಸಿದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ಕನ್ನಡದಲ್ಲಿ ಸಾಧನೆ ಮಾಡಿದವರನ್ನು ಗುರುತಿಸಿ, ಗೌರವಿಸುವುದನ್ನು ಆದರ್ಶವಾಗಿಟ್ಟುಕೊಂಡಲ್ಲಿ ಮುಂದಿನ ತಲೆಮಾರು ಸಾಧನೆಗೈಯಲು ಪ್ರೇರಣೆಯಾಗುತ್ತದೆ. ಕನ್ನಡದ ಕುರಿತಾದ ಸಂಸ್ಕಾರವನ್ನು ತಿಳಿಸುವಂತಹ ಕಾರ್ಯಕ್ರಮವನ್ನು ಆಯೋಜಿಸಿರುವುದು ಅರ್ಥಪೂರ್ಣವಾಗಿದೆ ಎಂದರು.
ತಾಲೂಕ ಕಾರ್ಯನಿರತ ಪತ್ರಕರ್ತ ಸಂಘದ ಉಪಾಧ್ಯಕ್ಷ ಎಚ್.ಎಂ.ಮಾರುತಿ ಮಾತನಾಡಿ, ನಮ್ಮ ಕನ್ನಡ ಭಾಷೆಗೆ ಸುದೀರ್ಘವಾದ ಇತಿಹಾಸವಿದೆ. ಪಂಪ, ರನ್ನ, ಕುಮಾರವ್ಯಾಸ, ಕುವೆಂಪು, ಬೇಂದ್ರೆ, ಕಾರಂತ ಸೇರಿದಂತೆ ಬಹಳಷ್ಟು ಸಾಹಿತಿಗಳು ನಮ್ಮ ಭಾಷೆಯನ್ನು ಸಮೃದ್ದಗೊಳಿಸಿದ್ದಾರೆ. ಕನ್ನಡ ಸಾಹಿತ್ಯ ಮತ್ತು ಸಂಸ್ಕೃತಿಯ ಉತ್ತಮ ಅಂಶಗಳನ್ನು ಅಳವಡಿಸಿಕೊಂಡು ಉತ್ತಮ ಸಮಾಜ ನಿರ್ಮಾಣ ಮಾಡಬೇಕು. ಕನ್ನಡ ಮಾಧ್ಯಮದ ವಿದ್ಯಾರ್ಥಿಗಳಿಗೆ ಪಠ್ಯಪುಸ್ತಕವನ್ನು ಉಚಿತವಾಗಿ ನೀಡುವ ಮೂಲಕ ಕನ್ನಡ ರಾಜ್ಯೋತ್ಸವವನ್ನು ಅರ್ಥಪೂರ್ಣವಾಗಿಸಲಾಗಿದೆ ಎಂದರು.
ಕರವೇ ಘಟಕದ ವತಿಯಿಂದ ವಿದ್ಯಾರ್ಥಿಗಳಿಗೆ ನೋಟ್ಬುಕ್ ವಿತರಿಸಲಾಯಿತು. ಎಸ್ಎಸ್ಎಲ್ಸಿಯಲ್ಲಿ ಕನ್ನಡ ಮಾಧ್ಯಮದಲ್ಲಿ ಹೆಚ್ಚು ಅಂಕ ಗಳಸಿ ಸಾಧನೆ ಮಾಡಿದ ವಿದ್ಯಾರ್ಥಿ ಚರಣ ನಾಯ್ಕ ಅವರನ್ನು ಸನ್ಮಾನಿಸಲಾಯಿತು.
ಮಾಜಿ ಸೈನಿಕ ತಿಮ್ಮಪ್ಪ ಗೌಡ ಮಾತನಾಡಿ, ನಮ್ಮ ರಾಜ್ಯದ ಹೊರಗೆ ವಾಸಿಸುತ್ತಿದ್ದಾಗ ನಮ್ಮ ಭಾಷೆಯ ಪ್ರೀತಿ, ಅಭಿಮಾನ, ಮಹತ್ವ ಹೆಚ್ಚಾಗಿ ಅರಿವಾಗುವುದು, ನನ್ನ ಸೈನಿಕ ವೃತ್ತಿಯಲ್ಲಿರುವಾಗ ಈ ಅನುಭವವಾಗಿದೆ. ಕನ್ನಡಪರ ಕಾರ್ಯಕ್ರಮಗಳು ಕಡಿಮೆಯಾಗುತ್ತಿರುವ ಇಂದಿನ ದಿನದಲ್ಲಿ ಕರವೇ ಸಂಘಟನೆ ಕನ್ನಡ ಶಾಲೆಗಳಲ್ಲಿ ಇಂತಹ ಕಾರ್ಯಕ್ರಮ ಆಯೋಜಿಸಿರುವುದು ಶ್ಲಾಘನೀಯ ಎಂದರು.
ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷ ಮಂಜುನಾಥ ಗೌಡ ಮಾತನಾಡಿ, ದೇಶ ಮತ್ತು ಭಾಷೆ ಇವುಗಳು ಕೇವಲ ಶುಭಾಶಯ ವಿನಿಮಯ ಮಾಡಿಕೊಳ್ಳುವುದಕ್ಕೆ ಮತ್ತು ರಾಜಕೀಯಕ್ಕೆ ಸೀಮಿತವಾಗಬಾರದು. ಕನ್ನಡಪರ ಸಂಘಟನೆಗಳು ಕನ್ನಡ ಕಾರ್ಯಕ್ರಮಗಳನ್ನು ನಡೆಸುವುದರ ಜೊತೆಗೆ ಸ್ಥಳಿಯ ಮೂಲಭೂತ ಸಮಸ್ಯೆಗಳಿಗೆ ಸ್ಪಂದಿಸಬೇಕು.
ಕರವೇ ಪದಾಧಿಕಾರಿ ಸದಸ್ಯ ಸುಬ್ರಾಯ ಗೌಡ, ಎಸ್ಡಿಎಂಸಿ ಅಧ್ಯಕ್ಷ ಪರಶುರಾಮ ಸಿಂಧೆ, ಕರವೇ ಸದಸ್ಯರು ಉಪಸ್ಥಿತರಿದ್ದರು.


Leave a Comment