
ಯೋಗ, ಆಯುರ್ವೇದ, ನಿಸರ್ಗೋಪಚಾರ, ಮೊದಲಾದ ಪರಂಪರೆಯ ಆರೋಗ್ಯ ಸೂತ್ರವನ್ನು ನಾವು ಮರೆತಿರುವುದರಿಂದ ರೋಗ ದೇಶವನ್ನು ಆವರಿಸುತ್ತಿದೆ. ನಮ್ಮ ದೇಹ ಅದಕ್ಕೆ ಬೇಕಾದ ವ್ಯಾಯಾಮ, ಆಹಾರಗಳನ್ನು ಈ ಪದ್ಧತಿಯಲ್ಲಿ ಹೇಳಲಾಗಿದೆ. ಹೀಗೆ ಬದುಕಿದವರು ಬಹುಕಾಲ ಆರೋಗ್ಯದಿಂದ ಇದ್ದ ಉದಾಹರಣೆಗಳಿವೆ. ದೇಶ ರೋಗದ ಗೂಡಾಗದಿರಲು ಪರಂಪರೆಯ ಮೌಲ್ಯಯುತ ಜೀವನವನ್ನು ನಡೆಸಬೇಕು ಎಂದು ತಾಲೂಕಾ ಪಂಚಾಯತ ಕಾರ್ಯನಿರ್ವಹಣಾಧಿಕಾರಿ ಸುರೇಶ ನಾಯ್ಕ ಹೇಳಿದರು.
ಅವರು ಅಗ್ರಹಾರ ಹಣಪತಿ ದೇವಾಲಯದ ಆವಾರದಲ್ಲಿ ಆಯುಷ್ ಇಲಾಖೆ ಮತ್ತು ಸರ್ಕಾರದ ವಿವಿಧ ಇಲಾಖೆಗಳು ಜೊತೆಗೂಡಿ ರೋಟರಿ ಕ್ಲಬ್ ಮತ್ತು ಲೀಲಾಗಣಪತಿ ಚಾರಿಟೇಬಲ್ ಟ್ರಸ್ಟ್ ಸಹಯೋಗದಲ್ಲಿ ನಡೆಸಿದ ಆಯುರ್ವೇದ ಉಚಿತ ಚಿಕಿತ್ಸಾ ಶಿಬಿರವನ್ನು ದೀಪ ಬೆಳಗಿ ಉದ್ಘಾಟಿಸಿ ಮಾತನಾಡಿದರು. ಪ್ರಾಸ್ತಾವಿಕ ಮಾತನಾಡಿದ ಜಿಲ್ಲೆಯ ಪ್ರಸಿದ್ಧ ಆಯುಷ್ ವೈದ್ಯ ಡಾ. ಜಗದೀಶ ಯಾಜಿ ಆಸ್ಪತ್ರೆಯಲ್ಲಿ ಜಾತ್ರೆ ನಡೆಯುತ್ತಿದೆ. ಪ್ರಕೃತಿಯೊಂದಿಗೆ ಬೆಸೆದಿದ್ದ ರೋಗರಹಿತ ಸಮಾಜವನ್ನು ಆಧುನಿಕ ಜಗತ್ತು ನಾಶಪಡಿಸಿದೆ. ಜೀವಕೋಶಗಳು ಬದುಕನ್ನು ವ್ಯವಸ್ಥೆಗೊಳಿಸುತ್ತದೆ. ಇವುಗಳಲ್ಲಿ ವ್ಯತಿರಿಕ್ತತೆ ಉಂಟಾದರೆ ರೋಗಗಳು ದಾಳಿಮಾಡುತ್ತವೆ. ಪ್ರಕೃತಿಯಲ್ಲಿ ಇದಕ್ಕೆ ಪರಿಹಾರವಿದೆ. ಪ್ರಕೃತಿದತ್ತ ಆಯುರ್ವೇದಿಕ ಸಸ್ಯಗಳ ಉತ್ಪನ್ನಗಳಿಂದ ಜೀವಕೋಶಗಳನ್ನು ವ್ಯವಸ್ಥಿತಗೊಳಿಸಲು ಸಾಧ್ಯವಿದೆ. ನಾವು ಇದನ್ನು ಮರೆತಿದ್ದೇವೆ. ರೋಗವಿಲ್ಲದ ಮನೆಯಿಲ್ಲ ಎಂಬಂತಾಗಿದೆ. ಮಕ್ಕಳು ಆಟಿಕೆ ಮುರಿದಂತೆ ವಿವಿಧ ವ್ಯಸನಗಳಿಂದ ಆರೋಗ್ಯವನ್ನು ಮುರಿದುಕೊಳ್ಳುತ್ತೇವೆ. ಇದರ ಪರಿಣಾಮ ಮುಂದಿನ ಪೀಳಿಗೆಯ ಮೇಲೆ ಆಗುತ್ತದೆ. ಶಿಬಿರದ ಉದ್ದೇಶ ಚಿಕಿತ್ಸೆ ಮಾತ್ರವಲ್ಲ ಆರೋಗ್ಯ ಪಾಠ ಹೇಳುವುದು ಆಗಿದೆ. ಆಯುರ್ವೇದಿಯ ಜೀವನದ ಮಹತ್ವವನ್ನು ಅರಿಯಬೇಕು. ಯೋಗ ಜಾಗತಿಕ ಆಂದೋಲನವಾಗಿದೆ. ಉಪವಾಸ ವೃತ ಕೂಡ ಆಂದೋಲನವಾಗಬೇಕು, ಮುಸ್ಲಿಮರು ವರ್ಷದಲ್ಲಿ ಒಂದು ತಿಂಗಳು ಎಲ್ಲ ಕೆಲಸಮಾಡುತ್ತಲೇ ಉಪವಾಸ ಮಾಡುತ್ತಾರೆ. ಹಿಂದು ಧರ್ಮದಲ್ಲಿಯೂ ಉಪವಾಸವನ್ನು ಹೇಳಿದೆ. ನಿಗದಿತ ದಿನಗಳಲ್ಲಿ ಉಪವಾಸ ಮಾಡುವುದರಿಂದ ದೇಹದಲ್ಲಿ ಸಂಗ್ರಹವಾಗುವ ಕಲ್ಮಶದ ಸಂಗ್ರಹ ತಪ್ಪಿ ಕ್ಯಾನ್ಸರ್‍ನಂತರ ರೋಗಗಳು ಬರುವುದಿಲ್ಲ. ಉಪವಾಸಕ್ಕೆ ತುಂಬ ಮಹತ್ವವಿದೆ ಎಂದರು.
ರೋಟರಿ ಅಧ್ಯಕ್ಷ ದಿನೇಶ ಕಾಮತ್, ಲೀಲಾಗಣಪತಿ ಚಾರಿಟೇಬಲ್ ಟ್ರಸ್ಟ್‍ನ ಡಾ. ಜಿ.ಜಿ. ಸಭಾಹಿತ ಮಾತನಾಡಿದರು. ಪ್ರಾಥಮಿಕ ಆರೋಗ್ಯ ಕೇಂದ್ರದ ಡಾ. ವೈಶಾಲಿ ಪ್ರಕಾಶ, ಹಿರಿಯ ಆಯುಷ್ ವೈದ್ಯೆ ಡಾ. ವಾಹಿನಿ, ಡಾ. ಗುರುದತ್ತ ಕುಲಕರ್ಣಿ, ಡಾ. ಕುಮಾರ ಮೊಗೇರ, ಡಾ. ಕೃಷ್ಣಮೂರ್ತಿ, ಡಾ. ಪ್ರಸನ್ನ ಕಾರ್ಯಕ್ರಮ ನಿರ್ವಹಿಸಿದರು. ಡಾ. ಪ್ರವೀಣ ಸ್ವಾಗತಿಸಿದರು. 125ಕ್ಕೂ ಹೆಚ್ಚು ಜನ ಶಿಬಿರದ ಪ್ರಯೋಜನ ಪಡೆದರು.
Leave a Comment