ಕಾಸರಕೋಡಿನಲ್ಲಿ ಹೊನ್ನಾವರ ಪೋರ್ಟ್ ಕಂಪನಿ ಹಾಗೂ ವಾಣಿಜ್ಯ ಬಂದರು ನಿರ್ಮಾಣ ತೊಲಗಲಿ ಎಂದು ಪ್ರಾರ್ಥಿಸಿ ಮಂಗಳವಾರ ನೂರಾರು ಸಂಖ್ಯೆಯಲ್ಲಿ ಮೀನುಗಾರ ಮಹಿಳೆಯರು ಕಾಸರಕೊಡ ಟೊಂಕಾದಿಂದ ಹೊನ್ನಾವರ ಪಟ್ಟಣದವರೆಗೆ 5 ಕಿಲೋಮೀಟರ್ ಗೂ ಹೆಚ್ಚಿನ ದೂರ ಪಾದಯಾತ್ರೆ ನಡೆಸಿ ಶ್ರೀ ಮಾರುತಿ ಮಂದಿರ, ಜೈನ್ ಜಟಕಾ ಹಾಗೂ ಶ್ರೀ ಮಾರಮ್ಮ ಯಾನೆ ದಂಡಿನದುರ್ಗಾ ದೇವಾಲಯಗಳಲ್ಲಿ ವಿಶೇಷ ಪೂಜೆ ಮೂಲಕ ಸೇವೆ ಸಲ್ಲಿಸಿದರು.
ಕಾಸರಕೋಡಿನ ಶ್ರೀ ಮಾರುತಿ ಮಂದಿರ ಹಾಗೂ ಜೈನ್ ಜಟಕಾ ದೇವಾಲಯಗಳಲ್ಲಿ ಸೇರಿದ ಮಹಿಳೆಯರು ಶ್ರೀ ದೇವರಿಗೆ ವಿಶೇಷ ಪೂಜೆಯ ಸೇವೆ ಸಲ್ಲಿಸಿ, ವಾಣಿಜ್ಯ ಬಂದರು ನಿರ್ಮಾಣ ಹಾಗೂ ಕೊರೋನಾ ಸಮಸ್ಯೆಯಿಂದ ಮುಕ್ತಿ ಸಿಗಲಿ ಎಂದು ಪ್ರಾರ್ಥಿಸಿದರು. ನಂತರ ಫಲ ಪುಷ್ಪ, ಸಿಂಗಾರ ಹಿಡಿದು ರಾಷ್ಟ್ರೀಯ ಹೆದ್ದಾರಿ ಮೂಲಕ 5 ಕಿ.ಮೀ. ಗಿಂತ ಹೆಚ್ಚುದೂರ ಪಟ್ಟಣದ ದುರ್ಗಾದೇವಿ ದೇವಸ್ಥಾನಕ್ಕೆ ಪಾದಯಾತ್ರೆಯಲ್ಲಿ ತೆರಳಿ ವಿಶೇಷ ಪೂಜೆ ಸಲ್ಲಿಸಿ ಪ್ರಾರ್ಥಿಸಿದರು.

ಈ ಸಂದರ್ಭದಲ್ಲಿ ಮಾಧ್ಯಮದವರೊಂದಿಗೆ ಮೀನುಗಾರ ಮಹಿಳೆ ಚೇತನಾ ತಾಂಡೇಲ್ ಮಾತನಾಡಿ ನಾವೆಲ್ಲರೂ ಮೀನುಗಾರಿಕೆಯನ್ನು ನಂಬಿ ಬದುಕುತ್ತಿದ್ದೇವೆ. ನಾವು ಈ ಪ್ರದೇಶದಲ್ಲಿ ಬಹಳ ಹಿಂದಿನಿಂದಲೂ ವಾಸ ಮಾಡುತ್ತಿದ್ದರು ನಮಗೆ ಪಟ್ಟಾ ಸಿಗಲಿಲ್ಲ ಆದರೆ ಆಚ್ಚರಿಯೆಂದರೆ 98ಎಕರೆ ಪ್ರದೇಶಕ್ಕೆ ಅವರಿಗೆ ಈಗಾಗಲೇ ಪಟ್ಟಾ ನೀಡಲಾಗಿದೆ. ನಮಗೆ ಯಾರಿಂದಲೂ ನ್ಯಾಯ ಸಿಕ್ಕಿಲ್ಲ ಅದಕ್ಕಾಗಿ ಇಂದು ದೇವರ ಮೋರೆ ಹೋಗಿದ್ದೇವೆ. ಇವರ ವಾಹನ ಓಡಾಟ ಮಣ್ಣು ತುಂಬಿದ ಲಾರಿಗಳ ಓಡಾಟದಿಂದ ರಸ್ತೆಯೆಲ್ಲ ಧೂಳುಮಯದಿಂದ ಓಡಾಡಲು ಸಾಧ್ಯವಿಲ್ಲದ ಸ್ಥಿತಿ ತಲುಪಿದೆ. ಶಾಲಾಮಕ್ಕಳ ಯೂನಿಫಾರಂ ಕೊಳೆಯಾಗುದನ್ನು ತಪ್ಪಿಸಲು ಬೇರೆ ಬಟ್ಟೆ ಹೊದಿಕೆ ಮಾಡಿಕೊಂಡು ಬರಬೇಕಾದ ಸ್ಥಿತಿ ನಿರ್ಮಾಣವಾಗಿದೆ. ಇವರ ಕಂಪನಿ ಪ್ರಾರಂಭವಾದರೆ ಮೀನುಗಾರಿಕೆ ನಂಬಿಕೊಂಡವರ ಸ್ಥಿತಿ ಅಲ್ಲೋಲಕಲ್ಲೋಲವಾಗಲಿದೆ. ಇದೀಗ ರೈತರ ಆತ್ಮಹತ್ಯೆ ಕೇಳುತ್ತಿದ್ದು ಮುಂದೆ ಮೀನುಗಾರರ ಆತ್ಮಹತ್ಯೆ ಸರಣೆ ಉದ್ಬವಿಸಬಹುದು ಸರ್ಕಾರ ಕೂಡಲೇ ಈ ಬಗ್ಗೆ ಪರಿಶೀಲನೆ ನಡೆಸಬೇಕಿದೆ ಎಂದರು.
ಮೀನುಗಾರರಾದ ರಾಜೇಶ ತಾಂಡೇಲ್ ಮಾತನಾಡಿ ಈ ಹಿಂದಿನಿಂದಲೂ ಮೀನುಗಾರರು ವಿವಿಧ ರೀತಿಯಲ್ಲಿ ಸಂಕಷ್ಟದಲ್ಲಿದ್ದಾರೆ. ನದಿ ಕಂಪನಿಯು ವಹಿವಾಟಿನಿಂದ ಕಲುಷಿತವಾಗುವುದಲ್ಲದೆ ಅದರಲ್ಲಿರುವ ಮೀನು ಸಂತತಿ, ಜೀವಸಂಕುಲಗಳನ್ನು ಸರ್ವನಾಶವಾಗುತ್ತವೆ ಜನ ಬಂದರು ವ್ಯವಹಾರ ಮೂಲಕ ಸಮುದ್ರ ಮಾರ್ಗವಾಗಿ ಬರುವಾಗ ತರುವ ಕರೋನಾ ವೈರಸ್ಸಿನ ಭೀತಿಯಾದರೆ, ನದಿ ಪರಿಸರದ ಶುದ್ಧ ಹವೆ-ಜಲ ನಾಶ, ದೂಳು, ಜಲ ಕಲುಷಿತದಿಂದ ನಮ್ಮ ಕುಟುಂಬದ ಆರೋಗ್ಯ ಕಾಳಜಿ ನಿಭಾಯಿಸುವಲ್ಲಿ ನಮಗೆ ಕಷ್ಟಕರವಾಗುವ ಭೀತಿ, ಮಧ್ಯೆ ಈ ಕಂಪನಿಯ ಹೊರ ರಾಜ್ಯದಿಂದ ಕಾರ್ಯ ನಿರ್ವಹಿಸಲು ಕೆಲಸಗಾರರು ಬರುತ್ತಿದ್ದು ಇದರಿಂದ ಸೊಂಕು ತಗಲಬಹುದೆನ್ನುವ ಭಯ ಆವರಿಸಿದೆ ಕೂಡಲೇ ಕೆಲಸ ಸ್ಥಗಿತಗೊಳಿಸುವಂತೆ ಆಗ್ರಹಿಸಿದರು.
ಈ ಸಂದರ್ಭದಲ್ಲಿ ನೂರಾರು ಸಂಖ್ಯೆಯ ಮೀನುಗಾರ ಮಹಿಳೆಯರು ಉಪಸ್ಥಿತರಿದ್ದರು.

Leave a Comment