ಕೊರೊನಾದಿಂದ ಕೆಲಸವಿಲ್ಲದೇ ಕಂಗಾಲಾಗಿದ್ದ ಜನರು ತರಕಾರಿ ಬೆಳೆಯತ್ತ ಆಸಕ್ತಿ ತೋರಿಸಿದ್ದರಾದರೂ ರೋಗ ಬಾಧೆಯಿಂದಾಗಿ ಈ ವರ್ಷ ಇಡೀ ತಾಲೂಕಿನಲ್ಲಿ ಎಲ್ಲಿಯೂ ತರಕಾರಿ ರೈತರ ಕೈ ಹಿಡಿಯುವ ಲಕ್ಷಣಗಳು ಕಾಣಿಸುತ್ತಿಲ್ಲವಾಗಿದೆ. ಇದರ ಜೊತೆಗೆ ಮತ್ತೊಂದು ಸಮಸ್ಯೆ ಅನ್ನದಾತರ ಹೆಗಲೇರಿದ್ದು ಭತ್ತದ ಬೆಳೆಗೂ ರೋಗ ಕಾಣಿಸಿಕೊಂಡು ವ್ಯಾಪಿಸುತ್ತಿರುವುದು ಚಿಂತೆಗೆ ಕಾರಣವಾಗಿದೆ.
ತಾಲೂಕಿನಲ್ಲಿ ಮುಂಗಾರಿನಲ್ಲಿ ಅತೀ ಹೆಚ್ಚು ಭತ್ತವನ್ನು ಬೆಳೆಯಲಾಗುತ್ತದೆ. ಇದುವರೆಗೆ ಮಳೆ ಉತ್ತಮವಾಗಿ ಮುನ್ನಡೆಸುತ್ತಿದೆ ಎನಿಸುತ್ತಿದ್ದರೂ ಬಹಳಷ್ಟು ಕಡೆ ಭತ್ತದ ಸಸಿಗಳ ರಸ ಹೀರುವ ಹಸಿರು ಜಿಗಿ ಹುಳ, ಕಾಂಡ ಕೊರೆಯುವ ಹುಳುವಿನ ಬಾಧೆ ಹೆಚ್ಚಿದೆ. ಯಾವುದೇ ಔಷಧಿ ಸಿಂಪಡಿಸಿದರೂ ರೋಗ ಹತೋಟಿಗೆ ಬರುತ್ತಿಲ್ಲ. ವಾತಾವರಣದಲ್ಲಿನ ಏರುಪೇರಿನಿಂದಾಗಿಯೇ ಈ ರೀತಿ ಸಮಸ್ಯೆ ಕಾಣಿಸಿಕೊಳ್ಳುತ್ತಿರಬಹುದು ಎನ್ನುವುದು ರೈತರ ಅಂಬೋಣವಾಗಿದೆ.

ಸಾವಯವ ಕೃಷಿಯನ್ನು ಬಿಟ್ಟು ರಾಸಾಯನಿಕ ಗೊಬ್ಬರದ ಅವಲಂಬನೆ ಹೆಚ್ಚಾದ ಕಾರಣ ಮಣ್ಣಿನಲ್ಲಿ ಫಲವತ್ತತೆ ಇಲ್ಲವಾಗಿದೆ. ಇದರಿಂದಾಗಿಯೇ ಭತ್ತದ ಬೆಳೆಗೆ ಕೀಟ ಬಾಧೆ ಹೆಚ್ಚಾಗಿದೆ. ರಸಗೊಬ್ಬರಗಳನ್ನು ಕ್ರಿಮಿನಾಶಕಗಳನ್ನು ತಂದು ಗದ್ದೆಗೆ ಸುರಿಯುವ ಬದಲು ಮುಂದಿನ ದಿನಗಳಲ್ಲಾದರೂ ರಾಸಾಯನಿಕ ಕೃಷಿಯಿಂದ ವಿಮುಖರಾಗಿ ಸಾವಯವ ಕೃಷಿಗೆ ಒತ್ತು ಕೊಟ್ಟು ಮಣ್ಣಿನ ಸಾರವನ್ನು ಹೆಚ್ಚಿಸುವ ಜೊತೆಗೆ ಬೆಳೆದ ಬೆಳೆಯಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಕೆಲಸವಾಗಬೇಕು ಎನ್ನುವ ಬುದ್ಧಿಮಾತು ಪ್ರಗತಿಪರ ರೈತರಿಂದ ಕೇಳಿಬರುತ್ತಿದೆ. ಕೇಳಿಸಿಕೊಳ್ಳುವ ವ್ಯವಧಾನ ಯಾರಿಗಿದೆಯೋ ಗೊತ್ತಿಲ್ಲ.
Leave a Comment