ಹೊನ್ನಾವರ: ತಾಲೂಕಿನ ಚಂದಾವರ ಗ್ರಾಪಂ ವ್ಯಾಪ್ತಿಯಲ್ಲಿ ಜನಸಾಮಾನ್ಯರಿಗೆ ಅನುಕೂಲವಾಗುವಂತೆ `ನೆಮ್ಮದಿ ಕೇಂದ್ರ’ವನ್ನು ಅತಿ ಶೀಘ್ರದಲ್ಲಿ ಪ್ರಾರಂಭಿಸುವಂತೆ ಒತ್ತಾಯಿಸಿ ಚಂದಾವರ, ಕಡ್ನೀರು ಹಾಗೂ ಕಡತೋಕಾ ಭಾಗದ ನೂರಾರು ಸಾರ್ವಜನಿಕರು ಸೇರಿ ಶಾಸಕ ದಿನಕ ಶೇಟ್ಟಿ ಅವರಿಗೆ ಭಾನುವಾರ ಮನವಿ ಸಲ್ಲಿಸಿದರು.

ಚಂದಾವರ ಗ್ರಾಪಂ ಮಾಜಿ ಅಧ್ಯಕ್ಷ ಶ್ರೀಕಾಂತ ನಾಯ್ಕ ನೇತೃತ್ವದಲ್ಲಿ ನೂರಾರು ಸಾರ್ವಜನಿಕರು ಸೇರಿ ಕಮಟಾದಲ್ಲಿರುವ ಶಾಸಕ ದಿನಕರ ಶೆಟ್ಟಿ ಅವರ ನಿವಾಸಕ್ಕೆ ತೆರಳಿ ಮನವಿ ಸಲ್ಲಿಸಿದರು. ಅಂಗವಿಕಲರು, ವೃದ್ಧರು ಮತ್ತು ದುರ್ಬಲವರ್ಗದ ಜನರು ತಮಗೆ ಅಗತ್ಯವಿರುವ ಜಾತಿ ಮತ್ತು ಆದಾಯ, ವಿಧವಾ ವೇತನ, ವಾಸಸ್ಥಳ, ಜನನ-ಮರಣ ದೃಢೀಕರಣ, ಮ್ಯುಟೇಶನ್, ಪಹಣಿ ಸೇರಿದಂತೆ ವಿವಿಧ ಪ್ರಮಾಣ ಪತ್ರಗಳು ಮತ್ತು ಇತರೆ ಸೇವೆಗಳಿಗಾಗಿ ದೂರದ ಹೊನ್ನಾವರ ತಾಲೂಕು ಕೇಂದ್ರಕ್ಕೆ ಅಲೆದಾಡುವಂತಾಗಿದೆ.
ಚಂದಾವರ, ಕಡ್ನೀರು, ಹೊದ್ಕೆ ಶಿರೂರು, ಕಡ್ಲೆ, ಕೆಕ್ಕಾರ, ಕಡತೋಕಾ, ಜಡ್ಡಿಗದ್ದೆ, ಮಲ್ಲಾಪುರ ಇತರ ಹಳ್ಳಿಗಳ ಜನರು ತಮ್ಮ ವೈಯಕ್ತಿಕ ಕೆಲಸಗಳಿಗೆ ಹೊನ್ನಾವರಕ್ಕೆ ಹೋಗಬೇಕಾಗಿದ್ದು, 3-4 ದಿನವೂ ಓಡಾಟ ಮಾಡಬೇಕಾಗುತ್ತದೆ. ಇದು ವಿದ್ಯಾರ್ಥಿಗಳಿಗೆ, ವಯಸ್ಕರಿಗೆ ತುಂಬಾ ಸಮಸ್ಯೆ ಉಂಟಾಗುತ್ತಿದೆ. ಚಂದಾವರವು ಎಲ್ಲಾ ಹಳ್ಳಿಗಳಿಗೆ ಮಧ್ಯವರ್ತಿ ಸ್ಥಳವಾಗಿದ್ದು, ಇಲ್ಲಿ ನೆಮ್ಮದಿ ಕೇಂದ್ರ ಆರಂಭಿಸಿದರೆ ಜನರಿಗೆ ತುಂಬಾ ಅನುಕೂಲವಾಗಲಿದೆ. ಇದರಿಂದ ರೈತರಿಗೆ, ಕೂಲಿ ಕಾರ್ಮಿಕರಿಗೆ ಓಡಾಟದ ಹಣ ವ್ಯಯಿಸುವುದು ಮತ್ತು ಶ್ರಮವನ್ನು ಉಳಿಸುತ್ತದೆ. ಹೀಗಾಗಿ ಎಲ್ಲಾ ಸೇವೆಗಳು ಒಂದೇ ಸೂರಿನಡಿ ದೊರೆಯುವ ನೆಮ್ಮದಿ ಕೇಂದ್ರವನ್ನು ಚಂದಾವರದಲ್ಲಿ ಆದಷ್ಟು ಬೇಗ ತೆರೆಯಬೇಕು ಎಂದು ಮನವಿಯಲ್ಲಿ ಆಗ್ರಹಿಸಿದ್ದಾರೆ.
ಚಂದಾವರ ಗ್ರಾಪಂ ಮಾಜಿ ಅಧ್ಯಕ್ಷ ಚಂದ್ರಕಾಂತ ನಾಯ್ಕ, ಮಾಜಿ ಸದಸ್ಯರಾದ ಹನುಮಂತ ನಾಯ್ಕ, ಕಮಲಾಕರ ನಾಯ್ಕ, ಸಾರ್ವಜನಿಕರಾದ ದಿನೇಶ ಗುನಗಾ, ಕಿರಣ ಬಾಡ್ಕರ್, ಜಯಂತ ಪಟಗಾರ, ಮೋಹನ ನಾಯ್ಕ, ತಾಲೀಫ್ ಸಾಬ್, ಸಾಂಜುಜೆ ಫರ್ನಾಂಡೀಸ್ ಇತರರು ಪಾಲ್ಗೊಂಡಿದ್ದರು.
ಶಾಸಕ ದಿನಕರ ಶೆಟ್ಟಿ ಅವರು ಮನವಿ ಸ್ವೀಕರಿಸಿ ಮಾತನಾಡಿ ಜನರ ಸಮಸ್ಯೆಗೆ ಸ್ಪಂದಿಸುವ ಕೆಲಸ ಮಾಡುತ್ತೇನೆ. ಜನಸಾಮಾನ್ಯರಿಗೆ ತೊಂದರೆಯಾಗದಂತೆ ನೋಡಿಕೊಳ್ಳುವ ಹೊಣೆ ನನ್ನದು. ನೆಮ್ಮದಿ ಕೇಂದ್ರ ಚಂದಾವರದಲ್ಲಿ ಅವಶ್ಯವಾಗಿ ಬೇಕಾಗಿದೆ. ಹೀಗಾಗಿ ಚಂದಾವರದಲ್ಲಿ ನೆಮ್ಮದಿ ಕೇಂದ್ರ ತೆರೆಯುವ ಬಗೆಗೆ ಜಿಲ್ಲಾಧೀಕಾರಿಯವರೊಂದಿಗೆ ಚರ್ಚಿಸಿ ಬಹುಬೇಗ ಕ್ರಮ ಕೈಗೊಳ್ಳುತ್ತೇನೆ ಎಂದು ಭರವಸೆ ನೀಡಿದರು.
Leave a Comment