ಪಟ್ಟಣಪಂಚಾಯತ ಎದುರರಿರುವ ಪ್ರಯಾಣಿಕರ ತಂಗುದಾಣದಲ್ಲಿ ಸದಾ ಯಾರಾದರೂ ವಿಶ್ರಮಿಸುತ್ತಿರುತ್ತಾರೆ. ಪಟ್ಟಣದ ಹೃದಯಭಾಗದಲ್ಲಿರುವುದರಿಂದ ಯಾರಾದರೂ ಅಪರಿಚಿತರು ಬರುವುದಿದ್ದರೆ ಅವರಿಗಾಗಿ ಕಾಯುವವರು ಈ ತಂಗುದಾಣದಲ್ಲಿರುವುದು ಹೆಚ್ಚು. ಕಾರಣ ಶರಾವತಿ ಸರ್ಕಲ್ ಅಲ್ಲಿದ್ದೇನೆ ಎಂದರೆ ಸುಲಭವಾಗಿ ಈ ಸ್ಥಳವನ್ನು ಗುರುತಿಸಬಹುದು ಎಂದು. ಆದರೆ ಜನರಿಗೆ ಮಾತ್ರ ಎಷ್ಟು ಬುದ್ಧಿ ಹೇಳಿದರೂ ಸಾಲುವುದಿಲ್ಲ. ನೀವು ಕುಳಿತುಕೊಳ್ಳಿ ಎಂದರೆ ತಾವು ಬಂದ, ತಂದ ವಾಹನಗಳನ್ನು ಅಲ್ಲಿ ಬಿಟ್ಟು ಪೇಟೆ ಸುತ್ತುವುದಕ್ಕೆ ಹೋಗುತ್ತಾರೆ.

ಪಟ್ಟಣ ಪಂಚಾಯತನವರು ಕಣ್ಣಿಗೆ ರಾಚುವಂತೆ ನೋ ಪಾರ್ಕಿಂಗ್ ಬೋರ್ಡ ನೇತುಹಾಕಿದ್ದರೂ ನೋ ಎನ್ನುವ ಅಕ್ಷರ ಬಿಟ್ಟು ಮುಂದಿನ ಶಬ್ಧವನ್ನು ಮಾತ್ರ ಓದಿದವರಂತೆ ಅಲ್ಲಿಯೇ ವಾಹನ ಪಾರ್ಕ್ ಮಾಡಿ ಹೋಗುತ್ತಾರೆ. ಇಲ್ಲಿ ಉಗುಳಬಾರದ ಎಂಬ ಬೋರ್ಡ್ ಕಂಡ ತಕ್ಷಣ ಬಾಯಲ್ಲಿ ತುಂಬಿಕೊಂಡಿರುವುದನ್ನು ಉಗುಳಬೇಕು ಎನ್ನುವುದು ನೆನಪಾಗುವವರಂತೆ ನೋ ಪಾರ್ಕಿಂಗ್ ಬೋರ್ಡ್ಬಳಿಯೇ ಪಾರ್ಕ್ ಮಾಡುವ ಖಾಯಿಲೆಗೆ ದಂಡವೇ ಮದ್ದಾಗಬಹುದೇನೋ.

ಹೆಚ್ಚಿನವರು ಹೊನ್ನಾವರ ಪಟ್ಟಣವನ್ನು ಗುರುತಿಸುವುದೇ ಶರಾವತಿ ಸರ್ಕಲ್ನಿಂದ. ಯಾವುದೇ ಪ್ರತಿಭಟನೆ ಅಥವಾ ಉತ್ಸವದ ಮೆರವಣಿಗೆ ಇರಲಿ, ಜನ ಸೇರುವುದಿರಲಿ, ಸಂಭ್ರಮಾಚರಣೆಯಿರಲಿ ಮೌನಾಚರನೆಯಿರಲಿ ಅದು ಶರಾವತಿ ಸರ್ಕಲ್ನಲ್ಲಿ ಆದರೆ ಅದರ ತೂಕ ಒಂದಷ್ಟು ಹೆಚ್ಚು. ಶರಾವತಿ ಸರ್ಕಲ್ನ ನಿರ್ವಹಣೆಯೆಂದರೆ ಮಾತ್ರ ಘನತೆವೆತ್ತ ಪಟ್ಟಣಪಂಚಾಯತಗೆ ಅದೇನೋ ನಿರ್ಲಕ್ಷ್ಯ. ಒಂದಷ್ಟು ದಿನ ಬಣ್ಣದ ಬೆಳಕಿನಲ್ಲಿ ಬಳುಕಿದ ಕಾರಂಜಿ ಕಳೆಗುಂದಿ ಎಷ್ಟು ಸಮಯವಾಯಿತು ಎಂದು ಬಹುಶ: ಪಟ್ಟಣ ಪಂಚಾಯತದವರಿಗೂ ಅರಿವಿಲ್ಲವೇನೋ. ಜಾಡ್ಯ ಬಿಟ್ಟು ಕಾರಂಜಿಯನ್ನು ದುರಸ್ಥಿಮಾಡಿ ಪಟ್ಟಣ ಸೌಂದರ್ಯಕ್ಕೆ ಮೆರುಗು ನೀಡುವ ಕೆಲಸಕ್ಕೆ ಪಟ್ಟಣ ಪಂಚಾಯತ ಮುಂದಾಗಲಿದೆಯಾ ಎನ್ನುವುದನ್ನು ಕಾದುನೋಡಬೇಕು.
Leave a Comment