ಹಿಂದೆ ಎಲ್ಲೆಂದರಲ್ಲಿ ಕಾಣಸಿಗುತ್ತಿದ್ದ ಸತ್ತ ಪ್ರಾಣಿಗಳನ್ನು ಹರಿದು ಮುಕ್ಕುತ್ತಿದ್ದ ರಣ ಹದ್ದುಗಳು, ಆಗಸದಲ್ಲಿ ಮೋಡದೆತ್ತರಕ್ಕೆ ಹಾರಿ ಗಿರಕಿ ಹೊಡೆಯುತ್ತಾ ಶಿಕಾರಿ ಕಂಡರೆ ಸೊಯ್ಯನೆ ಕೆಳಗಿಳಿದು ಶಕ್ತಿಯುತ ಕಾಲುಗಳಲ್ಲಿ ಗಬಕ್ಕೆನೆ ಹಿಡಿದು ಬಂದಷ್ಷೇ ವೇಗದಲ್ಲಿ ಮಾಯವಾಗುತ್ತಿದ್ದ ಗಿಡುಗಗಳ ಸಂತತಿ ಈಗ ವಿನಾಶದಂಚಿಗೆ ತಲುಪಿದೆ ಎನ್ನುವುದಕ್ಕೆ ಅವುಗಳು ಕಾಣಿಸಿಕೊಳ್ಳದಿರುವುದೇ ಸಾಕ್ಷಿಯಾಗಿದೆ. ಆದರೆ ತಾಲೂಕಿನ ಕಾಸರಕೋಡ ಮತ್ತು ಅಪ್ಸರಕೊಂಡ ನಡುವಿನ ಪ್ರದೇಶದ ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿ ಮಾತ್ರ ಇವುಗಳು ಇಂದಿಗೂ ಕಾಣಸಿಗುತ್ತಿದೆ.
ಒಂದು ಕಡೆ ರಸ್ತೆಯಲ್ಲಿ ವಾಹನಗಳ ಚಕ್ರದಡಿ ಸಿಕ್ಕು ನಾಯಿ, ದನಕರುಗಳು ಸಾಯುತ್ತಲೇ ಇರುತ್ತದೆ. ಇನ್ನೊಂದು ಪಕ್ಕದಲ್ಲಿರುವ ಸಮುದ್ರದಲ್ಲಿಯೂ ತೆರೆಗೆ ದಡಕ್ಕೆ ಸತ್ತ ಪ್ರಾಣಿ, ಮೀನುಗಳ ದೇಹಗಳು ಬಂದು ಬೀಳುತ್ತಿರುತ್ತವೆ. ಇದರ ಜೊತೆಗೆ ಈ ಭಾಗದಲ್ಲಿ ತಾಲೂಕಿನ ಅನೇಕ ಮಾಂಸದಂಗಡಿಯವರು ತ್ಯಾಜ್ಯವನ್ನು ತಂದು ಸುರಿಯುತ್ತಿರುತ್ತಾರೆ. ಇದರಿಂದ ವರ್ಷದ ಎಲ್ಲಾ ದಿನವೂ ಕಾಗೆ, ಗಿಡುಗ, ಹದ್ದುಗಳಿಗೆ ಆಹಾರ ಸಿಗುವ ಕಾರಣ ಹೆಚ್ಚು ಕಾಣಿಸಿಕೊಳ್ಳುತ್ತಿರಬಹುದು ಎನ್ನಲಾಗಿದೆ.

Leave a Comment