ಕೊರೊನಾ ಪರೀಕ್ಷೆ, ಚಿಕಿತ್ಸೆ ಎಲ್ಲವೂ ಉಚಿತವಾಗಿರುವಾಗ ಅನಾರೋಗ್ಯ ಕಾಣಿಸಿಕೊಂಡವರು ಟೆಸ್ಟ್ ಮಾಡಿಸಿಕೊಳ್ಳಲು ಹಿಂದೇಟು ಹಾಕುತ್ತಿರುವುದು ಸರಿಯಲ್ಲ. ಖಾಯಿಲೆಗಿಂತ ಜೀವ ಅಮೂಲ್ಯವಾದುದು. ಮರಣ ಪ್ರಮಾಣ ಕಡಿಮೆಯಾಗಲು ಜನರ ಸಹಕಾರ ಅತ್ಯಗತ್ಯ ಎಂದು ಜಿಲ್ಲಾಧಿಕಾರಿಗಳು ಅಭಿಪ್ರಾಯಪಟ್ಟರು.
ಬುಧವಾರ ಮದ್ಯಾಹ್ನ ತಹಶೀಲ್ದಾರ್ ಕಛೇರಿಯಲ್ಲಿ ನಡೆದ ಕೊರೊನಾ ಸಂಬಂಧಿತ ಅಧಿಕಾರಿಗಳ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ಡಾ. ಹರೀಶ ಕುಮಾರ್ ಜಿಲ್ಲೆಯಲ್ಲಿ ಕೊರೊನಾ ಮಾರಣಾಂತಿಕವಾಗಿ ಬದಲಾಗದಿರಲು ಅಧಿಕಾರಿಗಳ ಶ್ರಮದ ಜೊತೆ ಜನರ ಸಹಕಾರವೂ ಕಾರಣವಾಗಿದೆ. ಆದರೆ ಇತ್ತೀಚೆಗೆ ಕೊರೊನಾ ಒಂದು ಖಾಯಿಲೆಯೇ ಅಲ್ಲ ಅದೊಂದು ಸಾಮಾನ್ಯ ಜ್ವರ ಎನ್ನುವ ನಿರ್ಲಕ್ಷ್ಯ ಜನರಲ್ಲಿ ಮನೆಮಾಡುತ್ತಿದೆ. ಕೊರೊನಾ ಉಸಿರಾಟಕ್ಕೆ ತೊಂದರೆಯುಂಟುಮಾಡುವ ಖಾಯಿಲೆಯಾಗಿದ್ದರಿಂದ ಆರಂಭದಲ್ಲಿ ನಿರ್ಲಕ್ಷಿಸಿ ಖಾಯಿಲೆ ಉಲ್ಬಣಿಸಿದಾಗ ಆಸ್ಪತ್ರೆಗೆ ಬಂದರೆ ಪರಿಸ್ಥಿತಿ ಕೈ ಮೀರುತ್ತದೆ ಎಂದರು.

ಸರ್ಕಾರಿ ಕಛೇರಿಗೆ ಬರುವವರು ಮಾಸ್ಕ್ ಧರಿಸುವುದು ಕಡ್ಡಾಯ
ಆರ್ಥಿಕ ಪುನಶ್ಚೇತನದ ಕಾರಣ ಈ ಹಿಂದೆ ವಿಧಿಸಿದ್ದ ಎಲ್ಲಾ ನಿರ್ಬಂಧಗಳನ್ನೂ ತೆಗೆದುಹಾಕಲಾಗಿದೆ. ಜನರು ಮನೆಯಿಂದ ಹೊರಗೆ ಬರದಿದ್ದಾಗ ಕಛೇರಿಯಲ್ಲಿದ್ದ ಅಧಿಕಾರಿಗಳು ಆರೋಗ್ಯವಾಗಿದ್ದರು. ಈಗ ಜನರು ಹೊರಗೆ ಓಡಾಡಲು ಶುರುಮಾಡಿದ್ದಾರೆ. ಆದರೆ ಅಧಿಕಾರಿಗಳು ಕೊರೊನಾ ಸೋಂಕಿತರಾಗಿ ಕ್ವಾರಂಟೈನ್ ಆಗುತ್ತಿದ್ದಾರೆ. ಇದರಿಂದ ಅಭಿವೃದ್ಧಿ ಕೆಲಸಗಳು ಕುಂಠಿತವಾಗುತ್ತಿದೆ. ಸಾರ್ವಜನಿಕ ಸ್ಥಳಗಳಲ್ಲಿ ಕಾಣಿಸಿಕೊಳ್ಳುವವರು, ಸರ್ಕಾರಿ ಕಛೇರಿಗೆ ಬರುವವರು ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು. ಯಾರು ನಿಯಮ ಮೀರುತ್ತಾರೋ ಅಂತವರಿಗೆ ದಂಡ ವಿಧಿಸಬೇಕು ಎಂದು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ಆರೋಗ್ಯದಲ್ಲಿ ದುರ್ಬಲರಾಗಿರುವವರಮೇಲೆ ಕೊರೊನಾ ವಾರಿಯರ್ಸ್ ಕಣ್ಣಿಡಬೇಕು
ಪಟ್ಟಣ ಅಥವಾ ಗ್ರಾಮೀಣ ಪ್ರದೇಶದಲ್ಲಿ ಯಾರು ಆರೋಗ್ಯದ ದೃಷ್ಟಿಯಿಂದ ದುರ್ಬಲರಾಗಿರುತ್ತಾರೋ ಅಂತವರಮೇಲೆ ಆ ಭಾಗದ ಕೊರೊನಾ ವಾರಿಯರ್ಸ್ ಅಂತ ಯಾರಿದ್ದಾರೋ ಅವರು ಗಮನವಿಡಬೇಕು. ಅವರ ಆರೋಗ್ಯದಲ್ಲಿ ಏರುಪೇರಾದಲ್ಲಿ ತಕ್ಷಣ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸಬೇಕು. ಬೇರೆ ಖಾಯಿಲೆಗಳಿಂದ ಬಳಲುತ್ತಿದ್ದವರು ಕೊರೊನಾ ಸೋಂಕಿತರಾಗಿ ಆಸ್ಪತ್ರೆಗೆ ಬರುವ ಮೊದಲೇ ಮರಣಿಸಿದರೆ ಅವರನ್ನು ಕೊರೊನಾ ವಾರಿಯರ್ಸ್ ಗಮನಿಸಿಲ್ಲ ಎಂದೇ ಅರ್ಥೈಸಬೇಕಾಗುತ್ತದೆ ಎಂದು ಎಚ್ಚರಿಸಿದರು.
ಕೇವಲ ಕೊರೊನಾ ಕಾರಣಕ್ಕಾಗಿ ಬೇರೆ ಜಿಲ್ಲೆಯ ಆಸ್ಪತ್ರೆಗಳಿಗೆ ಶಿಫಾರಸು ಮಾಡುವಂತಿಲ್ಲ
ರೋಗಿ ಎಲ್ಲಿ ತಾನು ಚಿಕಿತ್ಸೆ ಪಡೆಯಬೇಕೆಂದು ಬಯಸುತ್ತಾನೋ ಅಲ್ಲಿಗೆ ಕಳುಹಿಸುವುದು ತಪ್ಪಲ್ಲ. ಆದರೆ ಈಗಾಗಲೇ ಹೊರ ಜಿಲ್ಲೆಗಳಲ್ಲೂ ಕೊರೊನಾ ಸಂಬಂಧಿತ ವಾರ್ಡಗಳಲ್ಲಿ ಬೆಡ್ಗಳು ಭರ್ತಿಯಾಗಿರುವ ಹಿನ್ನಲೆಯಲ್ಲಿ. ಕೊರೊನಾ ಸೋಂಕಿತರನ್ನು ಕಳುಹಿಸಬೇಡಿ ಎನ್ನುವ ಸೂಚನೆ ಬಂದಿದೆ. ಕೊರೊನಾಗೆ ಸಂಬಂಧಪಟ್ಟಂತೆ ಉತ್ತರಕನ್ನಡದಲ್ಲಿ ಸಿಗುವ ಚಿಕಿತ್ಸೆಯೇ ಮಂಗಳೂರು ಉಡುಪಿಯಲ್ಲಿಯೂ ಸಿಗುವುದು. ಆದ್ಧರಿಂದ ಕೇವಲ ಕೊರೊನಾ ಕಾರಣಕ್ಕಾಗಿ ಬೇರೆ ಜಿಲ್ಲೆಯ ಆಸ್ಪತ್ರೆಗೆ ಶಿಫಾರಸು ಮಾಡದೇ ಇಲ್ಲಿಯೇ ಉತ್ತಮ ಚಿಕಿತ್ಸೆ ನೀಡಬೇಕು ಎಂದರು.
ಕೊರೊನಾ ನಂಬರ್ ಬಗ್ಗೆ ನಾವು ಚಿಂತೆ ಮಾಡುವುದಿಲ್ಲ. ಅನ್ಲಾಕಿಂಗ್ ಪ್ರಕ್ರಿಯೆ ಅನಿವಾರ್ಯವಾಗಿದ್ದು ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಹಾಗೂ ಕೊರೊನಾ ಟೆಸ್ಟ್ ಮಾಡಿಸಕೊಳ್ಳುವುದಕ್ಕೆ ಜನರು ಮುಂದೆ ಬಂದು ಸಾವಿನ ಪ್ರಮಾಣವನ್ನು ತಗ್ಗಿಸುವುದಕ್ಕೆ ಸಹಕಾರ ನೀಡಬೇಕು. ಜನರಲ್ಲಿ ಭಯ ಹುಟ್ಟಿಸುವ ಅಥವಾ ನಿರ್ಲಕ್ಷ್ಯ ಧೊರಣೆ ತಾಳುವಂತೆ ಮಾಡುವ ಸುಳ್ಳುಸುದ್ದಿಗಳನ್ನು ಹಬ್ಬಿಸುವುದನ್ನು ಬಿಟ್ಟು ಎಲ್ಲರೂ ಸಾಮಾಜಿಕ ಬದ್ಧತೆ ತೋರಬೇಕು – ಡಾ.ಹರೀಶ ಕುಮಾರ್, ಜಿಲ್ಲಾಧಿಕಾರಿ ಉತ್ತರಕನ್ನಡ
Leave a Comment