ಬೋಟ್ ಮಾಲಕರ ಪಾಲಿಗೆ ಮುಳುವಾಗುತ್ತಿದೆ ಅಳಿವೆ – ಬ್ರೇಕ್ವಾಟರ್ ನಿರ್ಮಾಣದಬಗ್ಗೆ ಜನಪ್ರತಿನಿಧಿಗಳ ಮೌನ
ಹೊನ್ನಾವರ – ಗುರುವಾರ ಬೆಳಿಗ್ಗೆ ಅರಬ್ಬೀ ಸಮುದ್ರದಲ್ಲಿ ಮೀನುಗಾರಿಕೆಗೆ ತೆರಳಿದ್ದ ಸಂತ ಅಂತೋನಿ ಹೆಸರಿನ ಪರ್ಸಿನ್ ಬೋಟ್ ಅಳಿವೆಯ ಹೂಳಿನಲ್ಲಿ ಸಿಲುಕಿ ಅಲೆಯ ಹೊಡೆತಕ್ಕೆ ಸಿಕ್ಕು ಹಾನಿಯಾಗಿ ನೀರಲ್ಲಿ ಮುಳುಗಿ ಲಕ್ಷಾಂತರ ರುಪಾಯಿ ಹಾನಿಯಾದ ಘಟನೆ ಶರಾವತಿ ಅಳಿವೆ ಬಳಿ ಸಂಭವಿಸಿದೆ.
ಈ ಸಾಲಿನ ಮೀನುಗಾರಿಕೆ ಆರಂಭವಾದ ಕೇವಲ ಒಂದು ತಿಂಗಳ ಅವಧಿಯಲ್ಲಿ ಅಳಿವೆಯಲ್ಲಿ ಸಂಭವಿಸಿದ ಮೂರನೇ ಬೋಟ್ ದುರಂತ ಇದಾಗಿದೆ. 25 ಮೀನುಗಾರರಿದ್ದ ಬೋಟ್ ಅಲೆಯ ಹೊಡೆತಕ್ಕೆ ಸಿಕ್ಕು ಮುಳುಗುತ್ತಿದ್ದಾಗ ರಕ್ಷಣೆಗೆ ದಾವಿಸಿದ ಉಳಿದ ಬೋಟ್ನವರು ಮೀನುಗಾರರನ್ನು ರಕ್ಷಿಸುವಲ್ಲಿ ಯಶಸ್ವಿಯಾಗಿದ್ದಾರೆ. ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ ಎನ್ನುವ ಸಮಾಧಾನ ಬಿಟ್ಟರೆ ಲಕ್ಷಾಂತರ ಬೆಲೆ ಬಾಳುವ ಬೋಟ್ ಮತ್ತು ಬಲೆ ನೀರುಪಾಲಾಗಿದೆ.
ಕಳೆದ ಎರಡುಮೂರು ವರ್ಷದಿಂದ ಭೀಕರ ಮತ್ಸ್ಯ ಕ್ಷಾಮದಿಂದಾಗಿ ಸಿಕ್ರೆ ಶಿಕಾರಿ ಇಲ್ದಿದ್ರೆ ಬಿಕಾರಿ ಎನ್ನುವಂತೆ ಅನಿಶ್ಚತೆಯ ಅಲೆಯಮೇಲೆ ಹೊಯ್ದಾಡುತ್ತಿರುವ ಮೀನುಗಾರರ ಬದುಕೆನ್ನುವುದು ಕಷ್ಟದ ಕಣ್ಣೀರಾಗಿದೆ. ಇದರ ಜೊತೆ ನದಿ ಸಮುದ್ರ ಸೇರುವ ಅಳಿವೆಯ ಬಾಯಿಯಲ್ಲಿ ತುಂಬು ಹೂಳು ಪ್ರತೀ ವರ್ಷ ಬೋಟ್ಗಳ ದುರಂತಕ್ಕೆ ಕಾರಣವಾಗಿ ಮಾಲಕರಿಗೆ ಲಕ್ಷಾಂತರ ರೂಪಾಯಿ ನಷ್ಟದ ಜೊತೆ ಕಾರ್ಮಿಕರ ಜೀವಕ್ಕೂ ಅಪಾಯವನ್ನು ತರುತ್ತಿದ್ದರೂ ಜನಪ್ರತಿನಿಧಿಗಳು ಮೀನುಗಾರರ ಬಹುಕಾಲದ ಬೇಡಿಕೆಯಾದ ಬ್ರೇಕ್ವಾಟರ್ ನಿರ್ಮಾಣದ ಬಗ್ಗೆ ಚಕಾರವೆತ್ತದಿರುವುದು ಅನುಮಾನಕ್ಕೆಡೆಮಾಡಿಕೊಟ್ಟಿದೆ.

ಬಂದರು ಇಲಾಖೆಯಿಂದ ಕಿತ್ತುಕೊಂಡು ಖಾಸಗಿ ಕಂಪನಿಗೆ ಗಿಪ್ಟ್
ಬ್ರೇಕ್ವಾಟರ್ ನಿರ್ಮಾಣ ಬಂದರು ಇಲಾಖೆಯ ಯೋಜನೆಯಾಗಿತ್ತಾದರೂ 2012 ರಲ್ಲಿ ಅದನ್ನು ರದ್ಧುಪಡಿಸಿ ಖಾಸಗಿ ಕಂಪನಿಗೆ ವಹಿಸಲಾಗಿದೆ ಎನ್ನುವ ಮಾಹಿತಿ ಇದೆ. ಕಾಸರಕೋಡ ಟೊಂಕಾದಲ್ಲಿ ಖಾಸಗಿ ಬಂದರು ನಿರ್ಮಾಣದ ಗುತ್ತಿಗೆ ಪಡೆದಿರುವ ಹೊನ್ನಾವರ ಪೋರ್ಟ್ ಪ್ರೈ ಲಿ ಕೆಲಸ ಆರಂಭಿಸಿದ ದಿನದಿಂದಲೂ ಈ ಭಾಗದ ಮೀನುಗಾರರು ಮೊದಲು ಬ್ರೇಕ್ ವಾಟರ್ ಮಾಡಿ ಆಮೇಲೆ ಉಳಿದ ಕೆಲಸಕ್ಕೆ ಮುಂದಾಗಿ ಎಂದು ಒತ್ತಾಯಿಸುತ್ತಿದ್ದರೂ ಖಾಸಗಿ ಕಂಪನಿ ಮಾತ್ರ ಮೀನುಗಾರರ ಬೇಡಿಕೆಗೆ ಮಣಿದಿಲ್ಲ. ಇದರ ಪರಿಣಾಮವನ್ನು ಮೀನುಗಾರರು ಇಂದು ಅನುಭವಿಸುತ್ತಿದ್ದಾರೆ.
ಅಳಿವೆಯ ಹೂಳೆತ್ತುವುದು ಶಾಶ್ವತ ಪರಿಹಾರವಲ್ಲ..?
ಅಲೆ ತಡೆಗೋಡೆ ನಿರ್ಮಾಣವಾಗಬೇಕೆನ್ನುವ ಬೇಡಿಕೆ ಇದೆ. ಆದರೆ ಅದಕ್ಕಾಗಿ ಕಾಯುತ್ತಾ ಇರುವ ಬೋಟ್ಗಳನ್ನು ಹಾನಿಮಾಡಿಕೊಂಡು ಲಕ್ಷಾಂತರ ಹಾನಿ ಅನುಭವಿಸಿದರೆ ನಮ್ಮ ಸ್ಥಿತಿ ಏನಾಗಬೇಕು. ಅಲೆತಡೆಗೋಡೆ ನಿರ್ಮಾಣವಾಗುವವರೆಗಾದರೂ ತಾತ್ಕಾಲಿಕವಾಗಿ ಹೂಳೆತ್ತಿ ಅಳಿವೆ ಸಮಸ್ಯೆಗೆ ಮುಕ್ತಿ ನೀಡಬೇಕೆನ್ನುವ ಬೇಡಿಕೆ ಮೀನುಗಾರರದು. ಆದರೆ ಹೂಳೆತ್ತುವ ಯೋಜನೆಯೇ ಅಪ್ರಯೋಜಕ 2018 ರಲ್ಲಿ 4 ಕೋಟಿ ವೆಚ್ಚಮಾಡಿ ಹೂಳೆತ್ತಿದ ಪರಿಣಾಮ ಕಣ್ಮುಂದಿದೆ. ಹೂಳೆತ್ತಿದ ಕೆಲವೇ ದಿನಗಳಲ್ಲಿ ಅಳಿವೆಯಲ್ಲಿ ಹೂಳು ತುಂಬುತ್ತದೆ ಎನ್ನುತ್ತಾರೆ ಬಂದರು ಇಲಾಖೆಯ ಅಧಿಕಾರಿಗಳು.
[ಮೀನುಗಾರರು ಎದುರಿಸುತ್ತಿರುವ ಸಮಸ್ಯೆಯ ಅರಿವಿದೆ. ಅಳಿವೆ ಸಮಸ್ಯೆ ಬಗ್ಗೆ ಹೊನ್ನಾವರದ ಮೀನುಗಾರರೊಂದಿಗೆ ಚರ್ಚಿಸಿ ಬ್ರೇಕ್ವಾಟರ್ ನಿರ್ಮಾಣದ ಬಗ್ಗೆ ಸರ್ಕಾರದ ಗಮನಸೆಳೆದು ಖಾಸಗಿ ಕಂಪನಿಯವರಮೇಲೆ ಒತ್ತಡಹಾಕುತ್ತೇವೆ. – ದಿನಕರ ಶೆಟ್ಟಿ, ಶಾಸಕರು ಕುಮಟಾ ಹೊನ್ನಾವರ ವಿಧಾನಸಭಾ ಕ್ಷೇತ್ರ]
[ಕಾಸರಕೋಡ ಟೊಂಕ ಬಂದರನಿಂದ ಮೀನುಗಾರಿಕೆಗೆ ತೆರಳಿದ್ದಾಗ ಶರಾವತಿ ಅಳಿವೆಯ ಮುಖಜ ಪ್ರದೇಶದಲ್ಲಿ ಕಡಲಿನ ರಭಸ ಅಲೆಗಳಿಗೆ ಸಿಲುಕಿ ಬೋಟ್ ಕೆಳಭಾಗದಲ್ಲಿ ಬಿರುಕು ಬಿಟ್ಟು ನೀರು ತುಂಬಿ ಮುಳುಗಿದೆ. ಬೋಟ್ ಮತ್ತು ಮೀನುಗಾರಿಕಾ ಸಲಕರಣೆಗಳ ಕಿಮ್ಮತ್ತು ಸುಮಾರು 70 ಲಕ್ಷ ರುಪಾಯಿ ನಷ್ಟವಾಗಿದೆ – ಫೆಲಿಕ್ಸ್ ಲೋಪಿಸ್, ಸಂತ ಅಂತೋನಿ ಬೋಟ್ ಮಾಲಕ]
ಮುಖ್ಯಾಂಶಗಳು
ಅಳಿವೆ ಸಮಸ್ಯೆಯಿಂದ ತಾಲೂಕಿನಲ್ಲಿ ಒಂದು ತಿಂಗಳ ಅವಧಿಯಲ್ಲಿ ಸಂಭವಿಸಿದ ಮೂರನೇ ಬೋಟ್ ದುರಂತ
ಸಾವಿರ ಮೀಟರ್ ಬಲೆ,ಜಿ.ಪಿ.ಎಸ್, ವೈರ್ಲೆಸ್, ಫಿಶ್ಪೈಂಡರ್, ಇಲೆಕ್ಟ್ರಿಕ್ ಉಪಕರಣಗಳು, ಬ್ಯಾಟರಿಗಳು, 1500 ಲೀಟರ್ ಡೀಸೆಲ್ ನೀರುಪಾಲಾಗಿದೆ.
ಮೊದಲು ಬ್ರೇಕ್ವಾಟರ್ ನಿರ್ಮಿಸಿ ನಂತರ ಉಳಿದ ಕೆಲಸ ಕೈಗೆತ್ತಿಕೊಳ್ಳುತ್ತೇವೆಂದಿದ್ದ ಖಾಸಗಿ ಬಂದರು ನಿರ್ಮಾಣ ಕಂಪನಿ ಈಗ ಯೂ ಟರ್ನ್
ಮತ್ಸ್ಯ ಕ್ಷಾಮ, ಕೊರೊನಾ ಲಾಕ್ಡೌನ್ನಿಂದ ಸಂಕಷ್ಟಕ್ಕೆ ಸಿಲುಕಿದ್ದ ಮೀನುಗಾರರೀಗ ಅಳಿವೆ ಸಮಸ್ಯೆಯಿಂದ ಹೈರಾಣು
Leave a Comment