ಹೊನ್ನಾವರ: ಶರಾವತಿ ಅಳಿವೆಗೆ ಶಾಶ್ವತ ತಡೆಗೋಡೆಯನ್ನು ನಿರ್ಮಿಸಿ ಮೀನುಗಾರರ ದೋಣಿಯನ್ನು ಮತ್ತು ಜೀವವನ್ನು ರಕ್ಷಿಸುವಂತೆ ಕೋರಿ ಹೊನ್ನಾವರ ಪರ್ಶಿಯನ್ ಬೋಟ್ ಮಾಲೀಕರ ಸಂಘ, ಹೊನ್ನಾವರ ಮೀನು ವ್ಯಾಪರಸ್ಥರ ಸಂಘಟನೆ ಟೊಂಕಾ ಜಂಟಿಯಾಗಿ ತಹಶೀಲ್ದಾರರಿಗೆ ಮನವಿ ನೀಡಿತು.
ಶರಾವತಿ ನದಿಯ ಹರಿವಿನಲ್ಲಿ ಬದಲಾವಣೆ ಉಂಟಾದ ಪರಿಣಾಮ ಸಮುದ್ರದ ಅಳಿವೆ ಮುಖಜ ಭೂಮಿಯಲ್ಲಿ ಕೆಸರು ತುಂಬಿ ಮೀನುಗಾರಿಕಾ ದೋಣಿಗಳ ದುರಂತಗಳು ಉಂಟಾಗುತ್ತಿವೆ. ಇದರಿಂದ ಈ ಭಾಗದ ಮೀನುಗಾರಿಕೆಗೆ ಹಿನ್ನಡೆ ಉಂಟಾಗುತ್ತಿದೆ. ಮೀನುಗಾರರು ಆರ್ಥಿಕ ಸಂಕಷ್ಟಕ್ಕೆ ಗುರಿಯಾಗುತ್ತಿದ್ದಾರೆ.

ಈ ಭಾಗದಲ್ಲಿ ಮೀನುಗಾರಿಕಾ ಅಭಿವೃದ್ಧಿ ಹಂತ 1 ಮತ್ತು 2 ನೇದನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸಿಲ್ಲ. ಶರಾವತಿ ಅಳಿವೆ ಇಕ್ಕೆಲದಲ್ಲಿ ಶಾಶ್ವತ ತಡೆಗೊಡೆಯ ನಿರ್ಮಾಣ ಈ ವರೆಗೂ ಪ್ರಾರಂಭವಾಗಿಲ್ಲ. ಹೊನ್ನಾವರ ಪೋರ್ಟ್ ಕಂಪನಿಯ ಸಹಭಾಗಿತ್ವದಲ್ಲಿ ಈ ಕಾಮಗಾರಿಯನ್ನು ಮಾಡುವುದಾಗಿ ತಿಳಿಸಿದ್ದು ಆದರೆ ಪೋರ್ಟ್ ಕಂಪನಿ ಪ್ರದೇಶವು ವಶಪಡಿಸಿಕೊಂಡ ಭೂಮಿಗೂ ಪಹಣಿ ಪತ್ರಿಕೆಯಲ್ಲಿ ಮತ್ತು ಖಾತೆಯನ್ನು ಹೊಂದಿರುವ ಆಯಾ ರೈತರ ಭೂಮಿಗೂ ವ್ಯತ್ಯಾಸವಿದೆ. ಇದು ಸಂಶಯಕ್ಕೆ ಕಾರಣವಾಗುತ್ತಿದೆ ಎಂದು ಮನವಿಯಲ್ಲಿ ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಮೀನುಗಾರರ ವಿವಿಧ ಸಂಘಟನೆಯ ಮುಖಂಡರಾದ ಹಮಜಾ ಸಾಬ ಪಟೇಲ್, ಅಶೋಕ ಕಾಸರಕೊಡ, ರಾಮಚಂದ್ರ ಹರಿಕಂತ್ರ, ವಿವನ್ ಫರ್ನಾಂಡಿಸ್, ಸಂದೀಪ ತಾಂಡೇಲ್, ಇನ್ನಿತರರು ಉಪಸ್ಥಿತರಿದ್ದರು.
Leave a Comment