ಉಪಕಾರ ಮಾಡಲು ಸಾಧ್ಯವಾಗದಿದ್ದರೂ ಪರವಾಗಿಲ್ಲ ಆದರೆ ಬೇರೆಯವರಿಗೆ ಉಪದ್ರ ಕೊಡಬಾರದು ಎನ್ನುವುದು ಹಳ್ಳಿಗಳಲ್ಲಿ ಹಿರಿಯರೆನಿಸಿಕೊಂಡವರು ಆಗಾಗ ಕಿರಿಯರಿಗೆ ಹೇಳುವ ಬುದ್ಧಿಮಾತು.ಹೊನ್ನಾವರ ಪೋರ್ಟ್ ಪ್ರೈವೇಟ್ ಲಿಮಿಟೆಡ್ ಹೆಸರಿನ ಖಾಸಗಿ ಬಂದರು ನಿರ್ಮಾಣ ಕಂಪನಿ ಕಳೆದ ಎರಡು ವರ್ಷಗಳಿಂದ ನಡೆದುಕೊಳ್ಳುತ್ತಿರುವ ರೀತಿಯನ್ನು ಗಮನಿಸಿದಾಗ ಕಂಪನಿಯವರು ಮೀನುಗಾರರಿಗೆ ಉಪದ್ರ ಕೊಡುವ ಉದ್ದೇಶಕ್ಕಾಗಿಯೇ ಬಹು ಬೇಡಿಕೆಯ ಬ್ರೇಕ್ವಾಟರ್ ನಿರ್ಮಾಣ ಕೆಲಸವನ್ನು ಮುಂದೆ ಹಾಕುತ್ತಿದ್ದಾರಾ ಎನ್ನುವ ಅನುಮಾನ ಕಾಡುತ್ತಿದೆ.

ಖಾಸಗಿ ಕಂಪನಿಯವರು ಅದೆಷ್ಟೇ ಸುಸಜ್ಜಿತವಾಗಿ ಬಂದರು ನಿರ್ಮಿಸಿದರೂ ಬ್ರೇಕ್ವಾಟರ್ ನಿರ್ಮಾಣವಾಗದೇ ಈಗಿರುವ ಹೂಳು ತುಂಬಿದ ಅಳಿವೆ ಬಾಯಿಮೂಲಕ ಬೃಹತ್ ಹಡಗುಗಳು ಬಂದರನ್ನು ಪ್ರವೇಶಿಸುವುದು ಸಾಧ್ಯವಿಲ್ಲ. ಇದು ಕಂಪನಿಯವರಿಗೂ ಗೊತ್ತಿದೆ. ಹಾಗಂತ ಬ್ರೇಕ್ವಾಟರ್ ಮಾಡುವುದೇ ಇಲ್ಲ ಎಂದು ಕಂಪನಿಯವರೂ ಹೇಳುತ್ತಿಲ್ಲ. ಬಂದರು ಕಾಮಗಾರಿ ಪೂರ್ತಿಯಾದಮೇಲೆ ಬ್ರೇಕ್ವಾಟರ್ ನಿರ್ಮಿಸುವುದು ಕಂಪನಿಯ ಉದ್ದೇಶವಾಗಿರಬಹುದು. ಆದರೆ ಕಾಮಗಾರಿ ಪೂರ್ಣಗೊಳ್ಳಲು ಕನಿಷ್ಠ ಎರಡಿರಿಂದ ಮೂರು ವರ್ಷ ಬೇಕಾಗಬಹುದು. ಆರಂಭದಲ್ಲಿಯೇ ಬ್ರೇಕ್ವಾಟರ್ ನಿರ್ಮಿಸುವುದಕ್ಕಿರುವ ತೊಡಕೇನು ಎನ್ನುವ ಬಗ್ಗೆ ಕಂಪನಿಯವರು ಮತ್ತು ಬ್ರೇಕ್ವಾಟರ್ ನಿರ್ಮಾಣವಾಗುವವರೆಗೆ ಮೀನುಗಾರರ ಪಾಡೇನು ಎನ್ನುವುದಕ್ಕೆ ಜನಪ್ರತಿನಿಧಿಗಳು ಉತ್ತರಿಸಬೇಕಾಗಿದೆ.
ಬೇರೆಲ್ಲಾ ಹೋರಾಟಗಳಲ್ಲೂ ಮುಂಚೂಣಿಯಲ್ಲಿ ಕಾಣಿಸಿಕೊಳ್ಳುವ ಮೀನುಗಾರರು ತಮ್ಮ ಅಸ್ಥಿತ್ವದ ಪ್ರಶ್ನೆಯಾಗಿರುವ ಅಳಿವೆ ಸಮಸ್ಯೆಯನ್ನು ಬಗೆಹರಿಸಿಕೊಳ್ಳುವ ನಿಟ್ಟಿನಲ್ಲಿ ಆರಂಭಿಸಿದ್ದ ಹೋರಾಟವನ್ನು ದಡ ಮುಟ್ಟಿಸುವ ಇಚ್ಚಾಶಕ್ತಿ ತೋರದಿರುವುದೂ ಅಚ್ಚರಿಗೆ ಕಾರಣವಾಗಿದೆ.
Leave a Comment