ಟೆಂಡರ್ ಕರೆದು ಲಕ್ಷ ಲಕ್ಷ ಎಣಿಸುವಲ್ಲಿ ಪಟ್ಟಣ ಪಂಚಾಯತ ಮುಂದೆ.. ಮೂಲಭೂತ ಸೌಕರ್ಯ ಕಲ್ಪಿಸುವಲ್ಲಿ ಮಾತ್ರ ಹಿಂದೆ
“ಇಲ್ಲಿ ಕುಳಿತುಕೊಳ್ಳುವುದಕ್ಕೆ ಆಗ್ತಾ ಇಲ್ಲ.. ಮೀನು ಮಾರುಕಟ್ಟೆಯನ್ನು ತೆರೆದಿದ್ದರೆ ಅಲ್ಲಿಯಾದರೂ ಕುಳಿತುಕೊಳ್ತಿದ್ದೆವು. ಅಲ್ಲಿ ಮಳೆ ಬಿಸಿಲಿನಿಂದ ರಕ್ಷಣೆಯಾದರೂ ಸಿಕ್ತಾ ಇತ್ತು ಯಾವಾಗ ಬೀಗ ತೆರೆಯುತ್ತಾರೋ ಗೊತ್ತಿಲ್ಲ” ಎಂದು ತಮ್ಮ ಹತಾಶೆಯನ್ನು ಹೊರ ಹಾಕುತ್ತಿದ್ದಾರೆ ಹೊನ್ನಾವರ ಬಂದರು ಪ್ರದೇಶದ ಮೀನು ವ್ಯಾಪಾರ ಮಾಡುವ ಮಹಿಳೆಯರು.
ಕೊರೊನಾ ಸಂಬಂಧಿತ ಲಾಕ್ಡೌನ್ ತೆರವಾದ ನಂತರ ಹಳ್ಳಿಗಳಿಂದ ಜನರು ಸಾವಕಾಶವಾಗಿ ಪೇಟೆಯತ್ತ ಮುಖ ಮಾಡುತ್ತಿದ್ದು ವ್ಯಾಪಾರ ವಹಿವಾಟುಗಳು ನಿಧಾನಕ್ಕೆ ಚಿಗುರುತ್ತಿದೆ. ಇದರ ಜೊತೆಗೆ ಆಳ ಸಮುದ್ರ ಮೀನುಗಾರಿಕೆಯೂ ಆರಂಭವಾಗಿ ತಿಂಗಳೇ ಉರುಳಿದ್ದು ಮೀನಿನ ಖರೀದಿಯೂ ಜೋರಾಗಿಯೇ ನಡೆದಿದೆ. ಆದರೆ ಮೀನುಮಾರುಕಟ್ಟೆ ಇದ್ದರೂ ಮಾರ್ಗಸೂಚಿ ಬಂದಿಲ್ಲ ಎನ್ನುವ ಕಾರಣವೊಡ್ಡಿ ಬೀಗ ಹಾಕಿಟ್ಟಿರುವುದರಿಂದ ಬೀದಿಯಲ್ಲಿ ಕುಳಿತೇ ಅಸಹ್ಯಕರ ವಾತಾವರಣದಲ್ಲಿ ವ್ಯಾಪಾರ ಮಾಡಬೇಕಾದ ಅನಿವಾರ್ಯತೆ ನಿರ್ಮಾಣವಾಗಿದೆ.

ಮೀನುಮಾರುಕಟ್ಟೆ ಮಳೆ ಬಿಸಿಲಿನಿಂದ ರಕ್ಷಣೆ ಕೊಡುವುದು ಬಿಟ್ಟರೆ ಇಲ್ಲಿನ ಕುಡಿಯುವ ನೀರು ಹಾಗೂ ಬೀದಿ ದೀಪದ ಸಮಸ್ಯೆಯ ಬಗ್ಗೆ ಪದೇ ಪದೇ ದೂರು ಕೇಳಿಬರುತ್ತಲೇ ಇರುತ್ತದೆ. ಎಲ್ಲಕ್ಕಿಂತ ಮುಖ್ಯವಾಗಿ ಶೌಚಾಲಯ ವ್ಯವಸ್ಥೆ ಬಳಸುವುದಕ್ಕೇ ಆಗದಷ್ಟು ಹದಗೆಟ್ಟು ಹಲವು ವರ್ಷಗಳೇ ಉರುಳಿದರೂ ಸರಿಪಡಿಸುವ ಸಣ್ಣ ಪ್ರಯತ್ನವೂ ಪಟ್ಟಣಪಂಚಾಯತದಿಂದ ಆಗಿಲ್ಲ ಎಂದು ದೂರುತ್ತಿದ್ದಾರೆ ಮೀನು ವ್ಯಾಪಾರ ಮಾಡುವ ಮಹಿಳೆಯರು.
ಮೀನು ಮಾರುಕಟ್ಟೆ ತೆರೆಯುವ ನಿಟ್ಟಿನಲ್ಲಿ ಅನುಮತಿ ನೀಡುವಂತೆ ಜಿಲ್ಲಾಧಿಕಾರಿ ಕಛೇರಿಗೆ ಮನವಿ ಮಾಡಿದ್ದೇವೆ. ಸಧ್ಯ ವ್ಯಾಪಾರ ನಡೆಯುತ್ತಿರುವ ಸ್ಥಳ ಮತ್ತು ಮೀನು ಮಾರುಕಟ್ಟೆ ಇರುವ ಸ್ಥಳವರೆಡೂ ಬಂದರು ಇಲಾಖೆಯ ವ್ಯಾಪ್ತಿಗೆ ಒಳಪಡುತ್ತದೆ. ಇದರಿಂದ ಅಲ್ಲಿ ಯಾವುದೇ ಕೆಲಸವನ್ನು ಕೈಗೆತ್ತಿಕೊಳ್ಳುವುದಾದರೂ ಬಂದರು ಇಲಾಖೆಯ ಅನುಮತಿ ಪಡೆಯಬೇಕು. ಅದೇ ಕಾರಣಕ್ಕೆ ಅಭಿವೃದ್ಧಿ ಕೆಲಸಗಳನ್ನು ನಡೆಸುವುದಕ್ಕೆ ತೊಂದರೆಯಾಗುತ್ತಿದೆ ಎಂದು ಬಂದರು ಇಲಾಖೆಯತ್ತ ಬೊಟ್ಟು ತೋರಿಸುತ್ತಾರೆ ಪಟ್ಟಣಪಂಚಾಯತ ಅಧಿಕಾರಿಗಳು.

ಪಟ್ಟಣ ಪಂಚಾಯತ ಮತ್ತು ಬಂದರು ಇಲಾಖೆಯ ನಡುವಿನ ಸಮನ್ವಯದ ಕೊರತೆ ಮೀನುಗಾರರನ್ನು ಸೌಲಭ್ಯಗಳಿಂದ ವಂಚಿತರನ್ನಾಗಿ ಮಾಡಿದೆ. ಟೆಂಡರ್ನಲ್ಲಿ ಲಕ್ಷ ಲಕ್ಷ ಆದಾಯ ಗಳಿಸುವ ಪಟ್ಟಣ ಪಂಚಾಯತ್ ವ್ಯಾಪಾರಿಗಳ ಹಿತ ಕಾಯಲು ಆಸಕ್ತಿ ತೋರಬೇಕು ಎನ್ನುವ ಒತ್ತಾಯ ಕೇಳಿಬರುತ್ತಿದೆ.

ಮುಖ್ಯಾಂಶಗಳು
ಮೀನು ವ್ಯಾಪಾರಿಗಳು ಮಳೆ ಬಿಸಿಲಿನಲ್ಲಿಯೇ ಕುಳಿತುಕೊಳ್ಳಬೇಕಾದ ಅನಿವಾರ್ಯತೆ
ಟೆಂಡರ್ನಲ್ಲಿ ಲಕ್ಷಾಂತರ ರುಪಾಯಿ ಆದಾಯ ಗಳಿಸಿದರೂ ಮೂಲ ಸೌಕರ್ಯ ಕಲ್ಪಿಸುವಲ್ಲಿ ಪಟ್ಟಣಪಂಚಾಯತ ವಿಫಲ
ಬಂದರು ಇಲಾಖೆ ಮತ್ತು ಪಟ್ಟಣ ಪಂಚಾಯತ ನಡುವಿನ ಹೊಂದಾಣಿಕೆ ಸಮಸ್ಯೆಗೆ ಮೀನುಗಾರರು ಬಲಿಪಶು
[ಹಿಂದಿನ ವರ್ಷ 2 ಲಕ್ಷ 40 ಸಾವಿರ ರುಪಾಯಿಗೆ ನಾವು ಮಹಿಳೆಯರೇ ಒಟ್ಟಾಗಿ ಕಟ್ಟಡವನ್ನು ಟೆಂಡರ್ ಪಡೆದಿದ್ದೆವು. ಈವರ್ಷ 2 ಲಕ್ಷ 75 ಸಾವಿರಕ್ಕೆ ಟೆಂಡರ್ ಬೆಲೆ ಹೆಚ್ಚಿಸಿ ಬೇರೊಬ್ಬರು ಪಡೆದುಕೊಂಡಿದ್ದಾರೆ. ಇಷ್ಟೆಲ್ಲಾ ಆದಾಯವಿದ್ದರೂ ಹೇಳಿಕೊಳ್ಳುವಂತ ಯಾವುದೇ ಸೌಲಭ್ಯ ಕಟ್ಟಡದಲ್ಲಿಲ್ಲ. ಕಟ್ಟಡದ ಬೀಗ ತೆರೆದು ವ್ಯಾಪಾರಕ್ಕೆ ಅವಕಾಶಮಾಡಿಕೊಡುವ ಜೊತೆಗೆ ಹಾಳಾಗಿರುವ ಶೌಚಾಲಯವನ್ನು ದುರಸ್ಥಿಮಾಡಿಕೊಡಬೇಕು – ಗಂಗಾ, ಮೀನು ವ್ಯಾಪಾರ ಮಾಡುವ ಮಹಿಳೆ]
[ಟೆಂಡರ್ನಲ್ಲಿ ಬಂದ ಆದಾಯದಲ್ಲಿ ದೊಡ್ಡ ಮೊತ್ತವನ್ನು ಬಂದರು ಇಲಾಖೆಗೆ ಪಾವತಿಸಬೇಕಾಗಿದೆ. ಮೀನುಮಾರುಕಟ್ಟೆ ತೆರೆಯುವ ಬಗ್ಗೆ ಜಿಲ್ಲಾಧಿಕಾರಿಗಳ ಆದೇಶವನ್ನು ಎದುರುನೋಡುತ್ತಿದ್ದೇವೆ. ಶೌಚಾಲಯ ದುರಸ್ಥಿಮಾಡುವ ಬಗ್ಗೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ – ನೀಲಕಂಠ ಮೇಸ್ತ, ಮುಖ್ಯಾಧಿಕಾರಿ ಪಟ್ಟಣಪಂಚಾಯತ]


Leave a Comment