ರೇಲ್ವೇ, ರಸ್ತೆ, ಬಂದರಿನ ಪ್ರಯೋಜನ ತಾಲೂಕಿನವರಿಗಾಲು ಉತ್ಪಾದನಾವಲಯ ಅತ್ಯಗತ್ಯ..! – ಜಾಗದ ಪ್ರಶ್ನೆಗೆ ಮೈನರ್ ಫಾರೆಸ್ಟ್ ಉತ್ತರ..?
ಮುಖ್ಯಾಂಶಗಳು
ಕೈಗಾರಿಕಾವಲಯ ನಿರ್ಮಾಣ ತಾಲೂಕಿನ ಹಲವು ದಶಕಗಳ ಬೇಡಿಕೆಯಾಗಿದೆ.
ಜಾಗದ ಕೊರತೆಯೇ ಬಹುದೊಡ್ಡ ಸಮಸ್ಯೆ
ಕೈಗಾರಿಕಾ ವಲಯ ನಿರ್ಮಾಣವಾದರೆ ಬಂಡವಾಳ ಹೂಡುವವರನ್ನು ಸುಲಭವಾಗಿ ಆಕರ್ಷಿಸಬಹುದು.
ಕೈಗಾರಿಕೆಗಳ ಸ್ಥಾಪನೆಯಾದರೆ ಉದ್ಯೋಗ ಸೃಷ್ಟಿಯಾಗುತ್ತದೆ.
ಉತ್ಪಾದನಾ ಕ್ಷೇತ್ರ, ರಫ್ತು ವಲಯ ಸುಧಾರಿಸುತ್ತದೆ.

ಹೊನ್ನಾವರ –ಕಳೆದ ನಾಲ್ಕು ದಶಕಗಳಿಂದಲೂ ಪದೇ ಪದೇ ಮುನ್ನಲೆಗೆ ಬಂದು ಸದ್ದಿಲ್ಲದೇ ಬದಿಗೆ ಸರಿದು ಹೋಗುತ್ತಿರುವ ತಾಲೂಕಿನಲ್ಲಿ ಕೈಗಾರಿಕಾ ವಲಯ ಸ್ಥಾಪನೆಯ ಬೇಡಿಕೆ ಈಡೇರದಿರಲು ಅಗತ್ಯವಿರುವ ಭೂಮಿ ಲಭ್ಯವಿಲ್ಲದಿರುವುದೇ ಮುಖ್ಯ ತೊಡಕಾಗಿದೆ. ತೊಡಕನ್ನು ನಿವಾರಿಸಿ ಕೈಗಾರಿಕಾ ವಲಯ ಹೊಂದುವ ತಾಲೂಕಿನ ಜನರ ಕನಸನ್ನು ಜನಪ್ರತಿನಿಧಿಗಳು ಅಧಿಕಾರಿಗಳು ಒಟ್ಟಾಗಿ ನನಸುಮಾಡಬೇಕೆನ್ನುವ ಒತ್ತಾಯ ಕೇಳಿಬರುತ್ತಿದೆ.
ರೇಲ್ವೇ, ರಸ್ತೆ ಮಾರ್ಗದ ವಿಸ್ತರಣೆಯ ಜೊತೆ ತಾಲೂಕಿನಲ್ಲಿಯೇ ಅಂತರಾಷ್ಟ್ರೀಯ ಗುಣಮಟ್ಟದ ಬಂದರು ಖಾಸಗಿ ಸಹಭಾಗಿತ್ವದಲ್ಲಿ ನಿರ್ಮಾಣವಾಗುತ್ತಿದೆ. ಆದರೆ ಇದಕ್ಕೆ ಪೂರಕವಾಗಿ ಸರಕುಗಳ ಆಮದು ಮತ್ತು ರಫ್ತಿಗೆ ಸಂಬಂಧಿಸಿದ ಯಾವೊಂದು ಕೈಗಾರಿಕೆಗಳ ಸ್ಥಾಪನೆಯೂ ಇದುವರೆಗೂ ತಾಲೂಕಿನಲ್ಲಿ ಆಗಿಲ್ಲ. ಮುಂದೆ ಆಗುವ ಲಕ್ಷಣಗಳೂ ಕಾಣಿಸುತ್ತಿಲ್ಲ..! ಇಂಡಸ್ಟ್ರಿಯಲ್ ಏರಿಯಾ ಇಲ್ಲದಿರುವ ಕಾರಣ ಕೋಟಿಗಟ್ಟಲೆ ಹಣ ಸುರಿದು ಜಾಗ ಖರೀದಿಸಿ ರಸ್ತೆ ಸಂಪರ್ಕ, ನೀರು, ವಿದ್ಯುತ್ ಸೌಕರ್ಯಗಳನ್ನು ಹೊಂದಿಸಿಕೊಂಡು ಕೈಗಾರಿಕಗೆಳನ್ನು ಸ್ಥಾಪಿಸುವುದಕ್ಕೆ ಯಾರೊಬ್ಬರೂ ಮುಂದೆಬರುತ್ತಿಲ್ಲ. ಕೈಗಾರಿಕೆಗಳಿಲ್ಲದ ಕಾರಣ ದುಡಿಯುವ ಸಾಮಥ್ರ್ಯವಿರುವ ಸಾವಿರಾರು ಮಂದಿ ನಿರುದ್ಯೋಗಿಗಳಾಗುತ್ತಿದ್ದಾರೆ ಇಲ್ಲವೇ ಉದ್ಯೋಗವನ್ನರಸಿ ಹೊರ ಜಿಲ್ಲೆ, ರಾಜ್ಯಗಳಿಗೆ ವಲಸೆ ಹೋಗಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದೆ.
ಕೈಗಾರಿಕಾ ವಲಯ ಸ್ಥಾಪನೆಗೆ 500 ಎಕರೆ ಜಾಗ ಇದ್ದರೂ ಬೇಕು. ಇಲ್ಲ ಎಂದಾದಲ್ಲಿ ಕನಿಷ್ಠ 50 ಎಕರೆ ಜಾಗವಾದರೂ ಒಂದೇ ಕಡೆ ಸಿಕ್ಕರೆ ಕೈಗಾರಿಕಾ ವಲಯ ಸ್ಥಾಪನೆಗೆ ನಾವೂ ತುದಿಗಾಲಮೇಲೆ ನಿಂತಿದ್ದೇವೆನ್ನುವ ಭರವಸೆಯ ಮಾತು ಅಧಿಕಾರಿಗಳದ್ದು. ಆದರೆ ಈಗಾಗಲೇ ಮೂರುಬಾರಿ (ರಾಮತೀರ್ಥ, ರಜತಗಿರಿ, ವಡಗೆರೆ) ಪ್ರಸ್ಥಾವನೆ ಕಳುಹಿಸಿಯೂ ನಾನಾ ಕಾರಣಗಳಿಂದ ಪ್ರಸ್ಥಾವನೆ ರದ್ದಾಗಿರುವುದರಿಂದ ಇದು ಆಗದ ಕೆಲಸ ಎನ್ನುವ ನಿರ್ಧಾರಕ್ಕೆ ಬಂದಂತಿರುವ ಅಧಿಕಾರಿಗಳಲ್ಲಿಯೂ ಮೊದಲಿನ ಉತ್ಸಾಹ ಕಾಣಿಸುತ್ತಿಲ್ಲವಾಗಿದೆ.
ಜಿಲ್ಲೆಯ ಬಹುತೇಕ ತಾಲೂಕುಗಳು ಇಂದು ಕೈಗಾರಿಕಾವಲಯ ಹೊಂದಿವೆ. ಆದರೆ ಹೇರಳವಾದ ನೈಸರ್ಗಿಕ ಸಂಪತ್ತು, ಪ್ರತೀ ವರ್ಷವೂ ಕಾಲೇಜು, ಐ.ಟಿ.ಐಗಳಿಂದ ತರಬೇತಿ ಪಡೆದು ಹೊರ ಬರುತ್ತಿರುವ ಸಾವಿರ ಸಾವಿರ ಸಂಖ್ಯೆಯ ಯುವ ಸಮೂಹ ಇದ್ದರೂ ಅವರ ಸಾಮಥ್ರ್ಯವನ್ನು ಬಳಸಿಕೊಳ್ಳುವ ಉದ್ಯಮಗಳು ತಾಲೂಕಿನಲ್ಲಿ ಸ್ಥಾಪನೆಯಾಗುತ್ತಿಲ್ಲ. ಇದಕ್ಕೆ ನೇರ ಕಾರಣ ಕೈಗಾರಿಕಾವಲಯ ಇಲ್ಲದಿರುವುದು. ಸವಿರಾರು ಮಂದಿಗೆ ನೇರ ಉದ್ಯೋಗ ದೊರೆಯುವ ಜೊತೆಗೆ ಸಾರಿಗೆ, ವ್ಯಾಪಾರ, ರಫ್ತು ವಹಿವಾಟು ಸುಧಾರಿಸುವುದರೊಂದಿಗೆ ಇಡೀ ತಾಲೂಕಿನ ಜನರ ಆರ್ಥಿಕ ಸ್ಥಿತಿ ಸುಧಾರಣೆಗೆ ಉತ್ತೇಜನ ನೀಡುವ ಕೈಗಾರಿಕಾ ವಲಯ ಸ್ಥಾಪನೆಯಾಗಲೇಬೇಕು ಎನ್ನುವುದು ತಾಲೂಕಿನ ಜನರ ಬಹುದೊಡ್ಡ ಬೇಡಿಕೆಯಾಗಿದೆ.
ಜಾಗದ ಕೊರತೆಯೇ ಮುಖ್ಯ ಕಾರಣ
ಹೊನ್ನಾವರದಲ್ಲಿ ಕೈಗಾರಿಕಾ ವಲಯ ನಿರ್ಮಾಣ ಸಾಧ್ಯವಾಗದಿರಲು ಮುಖ್ಯ ಕಾರಣವೇ ಜಾಗದ ಕೊರತೆ. ಒಂದೇ ಏರಿಯಾದಲ್ಲಿ ಕನಿಷ್ಠ 50 ಎಕರೆ ಜಾಗವಾದರೂ ಸಿಕ್ಕರೆ ಮುಂದೆ ಹೆಜ್ಜೆಯಿಡಬಹುದು. ಆದರೆ ಅದೇ ಸಾಧ್ಯವಾಗುತ್ತಿಲ್ಲ. ಖಾಸಗಿಯವರ ಜಾಗ ಖರೀದಿಸಲು ಮುಂದಾಗಬಹುದಿತ್ತಾದರೂ ಮಾರುಕಟ್ಟೆ ಬೆಲೆಗೂ ಸರ್ಕಾರ ನಿಗಧಿಪಡಿಸಿದ ದರಕ್ಕೂ ಅಜಗಜಾಂತರ ವ್ಯತ್ಯಾಸವಿದೆ. ಪಟ್ಟಣದ ಸುತ್ತಮುತ್ತ ಒಂದು ಗುಂಟೆ ಜಾಗಕ್ಕೆ 5ರಿಂದ 10 ಲಕ್ಷ ಬೆಲೆಯಿದೆ ಆದರೆ ಸರ್ಕಾರ ಒಂದು ಎಕರೆಗೆ ಹೆಚ್ಚೆಂದರೆ 5 ಲಕ್ಷ ಕೊಡಬಹುದು ಇಷ್ಟು ಕಡಿಮೆ ಮೊತ್ತಕ್ಕೆ ಯಾರು ಜಾಗ ಕೊಡುತ್ತಾರೆ ಎನ್ನುವ ಪ್ರಶ್ನೆ ಅಧಿಕಾರಿಗಳದ್ದು.
ಮೈನರ್ ಫಾರೆಸ್ಟ್ ಜಾಗ ಇದ್ದರೆ ಅನುಕೂಲವಾಗಬಹುದು
ತಾಲೂಕಿನ ಹೆಚ್ಚಿನ ಪ್ರದೇಶ ಫಾರೆಸ್ಟ ಲ್ಯಾಂಡ್, ಮಾಲ್ಕಿ ಇದ್ದರೂ ತುಂಡು ಭೂಮಿ ಸಾಗುವಳಿದಾರರೇ ಹೆಚ್ಚು. ಎಕರೆ ಲೆಕ್ಕದಲ್ಲಿ ಭೂಮಿ ಹೊಂದಿರುವವರ ಸಂಖ್ಯೆ ಬೆರಳೆಣಿಕೆಯಷ್ಟು ಮಾತ್ರ. ಲಭ್ಯವಿರುವ ಮಾಹಿತಿ ಪ್ರಕಾರ ತಾಲೂಕಿನಲ್ಲಿ ಮೈನರ್ ಫಾರೆಸ್ಟ್ ಏರಿಯಾವಿದ್ದರೆ ಅದನ್ನು ಗುರುತಿಸಿ ಇಂಡಸ್ಟ್ರಿಯಲ್ ಏರಿಯಾ ಯೋಜನೆ ರೂಪಿಸಿ ಪ್ರಸ್ಥಾವನೆ ಕಳುಹಿಸಬಹುದು. ಆದರೆ ಅದನ್ನು ಗುರುತಿಸುವ ಕೆಲಸ ಮಾಡುವುದಕ್ಕೂ ಇಲಾಖೆಯಲ್ಲಿ ಫೀಲ್ಡ್ ಸ್ಟಾಪ್ ಇಲ್ಲ ಎನ್ನುವುದೇ ದುರಂತ.
[ಹೊನ್ನಾವರದಲ್ಲಿ ಕೈಗಾರಿಕಾ ವಲಯ ನಿರ್ಮಾಣವಾಗಬೇಕು ಎಂದು ನಾವು ಸಾಕಷ್ಟು ಪ್ರಯತ್ನಿಸಿದ್ದೇವೆ. 1984 ರಿಂದ 93 ಅವಧಿಯಲ್ಲಿ ಮೂರುಸಲ ಪ್ರಸ್ಥಾವನೆ ಕಳುಹಿಸಿದ್ದರೂ ಬೇರೆ ಬೇರೆ ಕಾರಣಗಳಿಗೆ ಪ್ರಸ್ಥಾವನೆ ಕೈಬಿಡಲಾಗಿದೆ. ಅಗತ್ಯವಿರುವ ಭೂಮಿ ಸಿಕ್ಕರೆ ಈಗಲೂ ಜಿಲ್ಲಾಧಿಕಾರಿಗಳಿಗೆ ಪ್ರಸ್ಥಾವನೆ ಕಳುಹುಹಿಸಲು ನಾವು ರೆಡಿ ಇದ್ದೇವೆ – ಧನಂಜಯ ಹೆಗಡೆ, ಜಂಟಿ ನಿರ್ದೇಶಕರು ಜಿಲ್ಲಾ ಕೈಗಾರಿಕಾ ಕೇಂದ್ರ]
[ಜಿಲ್ಲೆಯ ಬಹುತೇಕ ತಾಲೂಕುಗಳಲ್ಲಿ ಕೈಗಾರಿಕಾ ವಲಯವಿದೆ. ಹೊನ್ನಾವರ ತಾಲೂಕಿನಲ್ಲಿ ಬೆಳೆ ಬೆಳೆಯಲು ಅನುಪಯುಕ್ತವಾದ ಮಾಲ್ಕಿ ಜಮೀನಿದ್ದರೆ ಖರೀದಿಸುವ ನಿಟ್ಟಿನಲ್ಲಿ ಪ್ರಯತ್ನಿಸುತ್ತೇವೆ. ಇಲ್ಲವಾದರೆ ಮೈನರ್ ಫಾರೆಸ್ಟ್ ಲ್ಯಾಂಡ್ ಇದ್ದರೂ ಅರಣ್ಯ ಇಲಾಖೆಯವರೊಂದಿಗೆ ಚರ್ಚಿಸುತ್ತೇವೆ. ಕೈಗಾರಿಕಾ ವಲಯ ಉದ್ಯೋಗ ನಿರ್ಮಾಣದ ದೃಷ್ಟಿಯಲ್ಲಿ ಬಹಳ ಅಗತ್ಯವಾದುದಾಗಿದೆ. – ದಿನಕರ ಶೆಟ್ಟಿ, ಶಾಸಕರು ಕುಮಟಾ ಹೊನ್ನಾವರ ಕ್ಷೇತ್ರ]
Leave a Comment