ರಸ್ತೆ ಅಪಘಾತದಿಂದ ಅಪರೂಪದ ಸಸ್ತನಿಗಳ ರಕ್ಷಣೆಗೆ ಮುಂದಾದ ಅರಣ್ಯ ಇಲಾಖೆ
1 ಲಕ್ಷ ವೆಚ್ಚದಲ್ಲಿ 10 ಸುಲಭ ಸರಳ ಮೇಲ್ಸೇತುವೆ ನಿರ್ಮಾಣ
ಹೊನ್ನಾವರ – ಜಗತ್ತಿನಲ್ಲಿ ಅಳಿವಿನಂಚಿನಲ್ಲಿರುವ, ಆದರೆ ನಿತ್ಯ ಹರಿದ್ವರ್ಣದ ಪಶ್ಚಿಮಘಟ್ಟದಲ್ಲಿ ಮಾತ್ರ ಕಾಣಸಿಗುವ ಅಪರೂಪದ ವನ್ಯ ಜೀವಿ, ಸಿಂಗಳೀಕಗಳನ್ನು ರಸ್ತೆ ಅಪಘಾತಗಳಿಂದ ರಕ್ಷಿಸಲು ಅರಣ್ಯ ಇಲಾಖೆ ಹೊಸ ಉಪಾಯ ಹುಡುಕಿದ್ದು ಗೇರಸೊಪ್ಪಾದಿಂದ ಮಲೆಮನೆವರೆಗೆ ರಸ್ತೆಯ ಮೇಲ್ಭಾಗದಲ್ಲಿ 10 ಕಡೆ ಸರಳವಾದ ಮೇಲ್ಸೇತುವೆಗಳನ್ನು ನಿರ್ಮಿಸಿದ್ದಾರೆ.
ಸರಿಸುಮಾರು 20 ವರ್ಷ ಬದುಕುವ ಸಿಂಹಬಾಲದ ಸಿಂಗಳೀಕಗಳು ತಮ್ಮ ಜೀವಿತದ ಹೆಚ್ಚಿನ ಸಮಯವನ್ನು ಎತ್ತರದ ಮರಗಳಮೇಲೆಯೇ ಕಳೆಯುತ್ತವೆ. ಎಷ್ಟೇ ಎತ್ತರದ ಮರವಾದರೂ ಸಲೀಸಾಗಿ ಓಡಾಡುವ ಇವು ಮರದಿಂದ ಮರಕ್ಕೆ ಸುಲಭವಾಗಿ ಜಿಗಿಯಬಲ್ಲವು. ಜಗತ್ತಿನ ಬೇರೆಲ್ಲೂ ಕಾಣಸಿಗದ ಇವು ಪಶ್ಚಿಮಘಟ್ಟದ ಕಾಡುಗಳಲ್ಲಿ ಮಾತ್ರ ಇರುವುದು ವಿಶೇಷವಾಗಿದೆ.

ಆದರೆ ಈ ಭಾಗದ ಕಾಡಿನಲ್ಲಿ ರಸ್ತೆಗಳು ಹಾದುಹೋಗಿದ್ದರಿಂದ ರಸ್ತೆಯ ಒಂದು ಬದಿಯ ಮರದಿಂದ ಇನ್ನೊಂದು ಬದಿಯಲ್ಲಿರುವ ಮರಕ್ಕೆ ಹಾರಲಾಗದ ಸಿಂಗಳೀಕಗಳು ಮರದಿಂದ ಇಳಿದು ರಸ್ತೆ ದಾಟುವಾಗ ವಾಹನಗಳಿಗೆ ಸಿಕ್ಕು ಅಪಘಾತದಲ್ಲಿ ಸಾಯುತ್ತಿದ್ದವು. ಇದಕ್ಕೊಂದು ಪರಿಹಾರ ಕಂಡುಕೊಳ್ಳಲು ಮುಂದಾದ ಇಲಾಖೆ ಕೇರಳ ರಾಜ್ಯದಲ್ಲಿ ಸಿಂಗಳೀಕಗಳ ರಕ್ಷಣೆಗೆ ಕೈಗೊಂಡ ಕ್ರಮಗಳನ್ನು ಅಭ್ಯಸಿಸಿ ಅತ್ಯಂತ ಸುಲಭವೂ ಕಡಿಮೆ ಖರ್ಚಿನಲ್ಲಿಯೂ ಮಾಡಬಹುದಾದ ಫ್ಲೆಕ್ಸ್ ವೈರ್ ಹಾಗೂ ಕಟ್ಟಿಗೆಯ್ನು ಬಳಸಿ ಮೇಲ್ಸೇತುವೆ ನಿರ್ಮಿಸಿದ್ದಾರೆ. ಇದರಿಂದ ಸಿಂಗಳೀಕದ ಜೊತೆ ಅಳಿಲು, ಮಂಗ ಮುಂತಾದ ಮರದಮೇಲಿರುವ ಪ್ರಾಣಿಗಳಿಗೂ ರಸ್ತೆ ದಾಟುವಾಗಿನ ಅಪಾಯ ದೂರವಾಗಲಿದೆ.


ಜಗತ್ತಿನಲ್ಲಿರುವುದು ಕೇವಲ 3 ಸಾವಿರ ಸಿಂಗಳೀಕಗಳು ಮಾತ್ರ..!
ಒಂದು ಅಧ್ಯಯನದ ಪ್ರಕಾರ ಇಡೀ ಪ್ರಪಂಚದಲ್ಲಿ 3 ಸಾವಿರ ಸಿಂಗಳೀಕಗಳು ಇರಬಹುದೆಂದು ಅಂದಾಜಿಸಲಾಗಿದೆ. ಕೇರಳದ ಸೈಲೆಂಟ್ ವ್ಯಾಲಿ ನ್ಯಾಷನಲ್ ಪಾರ್ಕ, ಕರ್ನಾಟಕದ ಆಗುಂಬೆ, ಕೊಡಗು, ಕುದುರೆಮುಖ ಹಾಗೂ ಶರಾವತಿ ಕಣಿವೆಯಲ್ಲಿ ಮಾತ್ರ ಇವುಗಳು ಕಂಡುಬಂದಿವೆ. ವಿಶೇಷ ಎಂದರೆ 2015 ನಡೆಸಲಾದ ಸಿಂಗಳೀಕಗಳ ಸಂಖ್ಯಾ ಗಣತಿಯ ಪ್ರಕಾರ ಶರಾವತಿ ಕಣಿವೆಯೊಂದರಲ್ಲಿಯೇ 630 ಸಿಂಗಳೀಕಗಳು ಇವೆ ಎನ್ನಲಾಗಿದ್ದು ಇಷ್ಟು ದೊಡ್ಡ ಸಂಖ್ಯೆಯಲ್ಲಿ ಇವು ಬೇರೆಲ್ಲೂ ಕಾಣಸಿಗುವುದಿಲ್ಲ.

ಜೀವ ವೈವಿಧ್ಯತೆಯ ಪ್ರತೀಕ
ಸಿಂಗಳೀಕಗಳು ಯಾವ ಭಾಗದಲ್ಲಿ ಕಾಣಿಸಕೊಳ್ಳುತ್ತದೊ ಆ ಕಾಡು ಮತ್ತು ಅಲ್ಲಿನ ಜೀವ ವೈವಿದ್ಯತೆ ಬಹಳ ಶ್ರೀಮಂತವಾಗಿದೆ ಎಂದೇ ಅರ್ಥೈಸಲಾಗುತ್ತದೆ. ದಪ್ಪನೆಯ ಕೂದಲಿನ ರಕ್ಷಣೆಯನ್ನು ಹೊಂದಿದ್ದು ಮರದ ಮೇಲೆ ಲೀಲಾಜಾಲವಾಗಿ ಓಡಾಡುವ ಸಿಂಗಳೀಕಗಳು ಎಲೆಗಳನ್ನು ಕಿತ್ತು ತಿನ್ನುವ ಜೊತೆ ತಮ್ಮ ಚೂಪಾದ ಹಲ್ಲುಗಳನ್ನು ಬಳಸಿ ಒಣಗಿದ ಮರದ ತೊಗಟೆಗಳನ್ನು ಅಲ್ಲಿ ಸಿಗುವ ಹುಳು ಹುಳುವಿನ ಮೊಟ್ಟೆಗಳನ್ನೂ ಭಕ್ಷಿಸುತ್ತವೆ. ಪಶ್ಚಿಮಘಟದಲ್ಲಿ ಉಗಮಿಸುವ ತೊರೆಗಳು, ಜಲಪಾತ, ಈ ಭಾಗದಲ್ಲಿ ಹರಿಯುವ ಶರಾವತಿ ಮತ್ತು ಅಘನಾಶಿನ ನದಿ ಇಲ್ಲಿನ ಪರಿಸರವನ್ನು ಮತ್ತಷ್ಟು ಶ್ರೀಮಂತಗೊಳಿಸಿದೆ. ಈ ಕಾಡಿನಲ್ಲಿ ಹೇರಳವಾಗಿ ಸಿಗುವ ಉಪ್ಪಾಗೆ, ಮುರುಗಲು, ಸಂಪಿಗೆ, ಕಣಗಿಲ ಮುಂತಾದ ಹಣ್ಣುಗಳು ಈ ಪ್ರದೇಶವನ್ನು ಸಿಂಗಳೀಕಗಳಿಗೆ ಬಹು ಪ್ರಿಯವಾದ ತಾಣವನ್ನಾಗಿಸಿದೆ. ಇದೇ ಕಾರಣಕ್ಕೆ ಸರ್ಕಾರ 2019ರಲ್ಲಿ ಶರಾವತಿ ಕಣಿವೆಯನ್ನು ಸಿಂಗಳೀಕ ವನ್ಯಧಾಮ ಎಂದು ಘೋಷಣೆ ಮಾಡಿದೆ.

ಮುಖ್ಯಾಂಶಗಳು
ಜಗತ್ತಿನಲ್ಲಿರುವ ಸಿಂಗಳೀಕಗಳ ಸಂಖ್ಯೆ 3000
ಶರಾವತಿ ಕಣಿವೆಯಲ್ಲಿರುವ ಸಿಂಗಳೀಕಗಳ ಸಂಖ್ಯೆ 630 (2015 ರ ಸಂಖ್ಯಾ ಗಣತಿ)
ಫ್ಲೆಕ್ಸ್ ವೈರ್ ಹಾಗೂ ಕಟ್ಟಿಗೆ ಬಳಸಿ 10 ಕಡೆ ಮೇಲ್ಸೇತುವೆ ನಿರ್ಮಾಣ
ಒಂದು ಮೇಲ್ಸೇತುವೆಗೆ 10 ಸಾವಿರ ಖರ್ಚು
ಸಿಂಗಳೀಕಗಳು ಕಾಡು ಹಾಗೂ ಅಲ್ಲಿನ ಜೀವ ವೈವಿದ್ಯತೆಯನ್ನು ಪ್ರತಿನಿಧಿಸುತ್ತವೆ
ಗೇರಸೊಪ್ಪಾದಲ್ಲಿ ಸಿಂಗಳೀಕ ಇಕೋ ಪಾರ್ಕ್ ನಿರ್ಮಿಸಿಲಾಗಿದೆ
[ಸಿಂಗಳೀಕ ಸಂರಕ್ಷಿತ ಪ್ರದೇಶದಲ್ಲಿ ಹಾದುಹೋಗಿರುವ ವಿದ್ಯುತ್ ತಂತಿಗಳನ್ನು ಇನ್ಸುಲೇಟರ್ ವಾಯರ್ಗೆ ಬದಲಿಸಿದ್ದೇವೆ. ಕಾಡಿನ ನಡುವೆ ಹಾದುಹೋಗಿರುವ ರಸ್ತೆಯಲ್ಲಿ ವಾಹನ ಅಪಘಾತಕ್ಕೆ ಸಿಂಗಳೀಕಗಳು ಬಲಿಯಾಗಬಾರದೆಂದು ಅವು ಮರದ ಮೇಲಿಂದಲೇ ರಸ್ತೆಯನ್ನು ದಾಟುವುದಕ್ಕೆ ಅನುಕೂಲಮಾಡಿಕೊಡಲು ವೈರ್ ಮತ್ತು ಕಟ್ಟಿಗೆಯನ್ನು ಬಳಸಿ ಪ್ರಾಯೋಗಿಕವಾಗಿ ಮೇಲ್ಸೇತುವೆ ಮಾದರಿ ನಿರ್ಮಿಸಿದ್ದೇವೆ. – ಕೆ.ಟಿ.ಬೋರಯ್ಯ, ಎ.ಸಿ.ಎಪ್.ಹೊನ್ನಾವರ ]
Leave a Comment