ಹೃದಯ ಬಡಿತ ಹೆಚ್ಚಿಸುವಂತ ಅತ್ಯಾಕರ್ಷಕ ನೃತ್ಯ..ಕಿವಿಗಿಂಪೆನಿಸುವ ಮಧುರ ಹಾಡುಗಳ ಸಂಗಮದೊಂದಿಗೆ ಶುಭ ಸಮಾರಂಭಗಳು ಕಳೆಗಟ್ಟುವಂತೆ ಮಾಡುತ್ತಿರುವ ಹೊನ್ನಾವರದ ಓಶಿಯನ್ ಹಾರ್ಟ್ ಬ್ರೇಕರ್ಸ್ ಡಾನ್ಸ್ ತಂಡ, ತನ್ನ ಅತ್ಯದ್ಭುತವೆನ್ನಿಸುವ ಪ್ರದರ್ಶನಗಳಿಂದಲೇ ಅವಕಾಶಗಳನ್ನು ಗಿಟ್ಟಿಸಿಕೊಂಡು ನಾಡಿನ ಮನೆಮಾತಾಗುತ್ತಿದೆ.

ಹತ್ತುವರ್ಷಗಳ ಹಿಂದೆ ಪಟ್ಟಣದ ನ್ಯೂ ಇಂಗ್ಲಿಷ್ ಶಾಲೆಯಲ್ಲಿ ಖ್ಯಾತ ಗಾಯಕ ರಮೇಶ ಮೇಸ್ತ ಅವರ ಸಾರಥ್ಯದಲ್ಲಿ ಜಗದೀಶ ಗೌಡ ಹಾಗೂ ಪ್ರಥಮ ಮೇಸ್ತ ಅವರ ಜೊತೆಗೂಡಿ, ಕೇವಲ ಐದು ವಿದ್ಯಾರ್ಥಿಗಳನ್ನಿಟ್ಟುಕೊಂಡು ಕಟ್ಟಿದ ಓಶಿಯನ್ ನೃತ್ಯ ತಂಡ ಇದುವರೆಗೆ ಒಂದು ಸಾವಿರದ ಒಂದುನೂರಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಅದರಲ್ಲೂ ಹೆಚ್ಚಾಗಿ ಗ್ರಾಮೀಣ ಪ್ರತಿಭೆಗಳಿಗೆ ನೃತ್ಯ ತರಬೇತಿ ನೀಡಿ ವೇದಿಕೆ ಕಲ್ಪಿಸಿದ ಕೀರ್ತಿಯನ್ನು ಗಳಿಸಿದೆ.
ರಾಜ್ಯಾದ್ಯಂತ 690 ಕ್ಕೂ ಹೆಚ್ಚು ಯಶಸ್ವೀ ಪ್ರದರ್ಶನಗಳನ್ನು ನೀಡಿರುವ ತಂಡ ತೆಲಂಗಾಣದ ನಲಗೊಂಡದಲ್ಲಿ ನಡೆದ ಈ ಟಿವಿ ತೆಲಗು 20 ನೇ ವರ್ಷದ ಸಂಭ್ರಮಾಚರಣೆಯಲ್ಲಿ ಭಾಗವಹಿಸಿ ತನ್ನ ಅತ್ಯಧ್ಬುತ ನೃತ್ಯ ಪ್ರದರ್ಶನದಿಂದ ಅಪಾರ ಮೆಚ್ಚುಗೆ ಗಳಿಸಿದೆ. ಹಿಂದಿನ ವರ್ಷ ನಡೆದ ಜೀ ಕನ್ನಡ ವಾಹಿನಿಯ ಡಾನ್ಸ್ ಕರ್ನಾಟಕ ಡಾನ್ಸ್ ಕಾರ್ಯಕ್ರಮದಲ್ಲಿಯೂ ಓಶಿಯನ್ ಹಾರ್ಟ್ಬ್ರೇಕರ್ಸ್ ತಂಡದ ಪ್ರತಿಭೆಗಳು ಅವಕಾಶಗಿಟ್ಟಿಸಿಕೊಂಡು ಅತ್ಯುತ್ತಮ ಪ್ರದರ್ಶನ ನೀಡಿದ್ದಾರೆ.



ಪ್ರತಿಭಾವಂತ ನೃತ್ಯಪಟುಗಳು, ಉತ್ತಮ ಗಾಯಕರು ಹಾಗೂ ನಿರೂಪಕರನ್ನು ಹೊಂದಿರುವ ಶಿಸ್ತಿನ ತಂಡ ಎಂದೇ ಹೆಸರಾಗಿರುವ ಓಶಿಯನ್ ಹಾರ್ಟ್ಬ್ರೇಕರ್ಸ್ ಗರಡಿಯಲ್ಲಿ ನೃತ್ಯದ ಕಾಗುಣಿತ ಕಲಿಯಲು ತಾಲೂಕಿನ ವಿದ್ಯಾರ್ಥಿಗಳು ಆಸಕ್ತಿ ತೋರುತ್ತಿದ್ದಾರೆ. ಇದರಿಂದ ರಾಜ್ಯ, ರಾಷ್ಟ್ರಮಟ್ಟದಲ್ಲಿ ಬೆಳೆಯಬಲ್ಲ ಬೆಳಗಬಲ್ಲ ಎಳೆಯ ಪ್ರತಿಭೆಗಳಿಗೆ ಈ ತಂಡ ಅವಕಾಶದ ಚಿಮ್ಮು ಹಲಗೆಯಾಗಲಿದೆ ಎನ್ನುವ ಭರವಸೆಯನ್ನು ಮೂಡಿಸಿದೆ.
Leave a Comment