ಕೈಲಾಗದವರ ಕಷ್ಟಕ್ಕೆ ಕರಗುವ.. ಅಸಹಾಯಕರ ಸ್ಥಿತಿಗೆ ಮರುಗುವ ಸಾಕಷ್ಟು ಮನಸ್ಸುಗಳು ನಮ್ಮ ನಡುವಿದೆ. ಆದರೆ ಸಹಾಯಕ್ಕೆ ಮುಂದಾಗುವವರ ಒಳ್ಳೆಯತನವನ್ನೇ ದುರುಪಯೋಗಮಾಡಿಕೊಂಡು ವಂಚಿಸುವ ಕೆಟ್ಟ ಮನಸ್ಥಿತಿಯ ಜನರಿಂದಾಗಿ ನಿಜವಾಗಿ ಕಷ್ಟದಲ್ಲಿದ್ದವರಿಗೆ ಸಹಾಯ ಮಾಡಲೂ ಜನರು ಹಿಂದೆಮುಂದೆ ನೋಡುವ ಪರಿಸ್ಥಿತಿ ನಿರ್ಮಾಣವಾಗಿದೆ.

ಸೋಮವಾರ ಎರಡು ಓಮ್ನಿ ಒಂದು ಒಂದು ಟಾಟಾ ಏಸ್ ವಾಹದನಲ್ಲಿ ಬಂದಿದ್ದ ಮೈಸೂರು ಕಡೆಯವರೆಂದು ಹೇಳಿಕೊಂಡ ಹಲವು ಮಂದಿ ಇಡೀ ಪಟ್ಟಣವನ್ನು ಸುತ್ತಾಡಿ ತಾವು ವೃದ್ಧಾಶ್ರಮ ಹಾಗೂ ಅನಾಥಾಶ್ರಮ ನಡೆಸುತ್ತಿದ್ದೇವೆ. ನೀವು ಬಳಸಿದ ಹಳೆಯ ಬಟ್ಟೆಗಳಿದ್ದರೆ ಕೊಟ್ಟರೆ ಅನಾಥಾಶ್ರಮದಲ್ಲಿದ್ದವರಿಗೆ ಸಹಾಯಮಾಡಿದಂತಾಗುತ್ತದೆ. ಊಟದ ಖರ್ಚಿಗೆ ಸ್ವಲ್ಪ ಹಣ ಸಹಾಯ ಮಾಡಿ, ದುಡ್ಡು ಇಲ್ಲ ಅಂದರೆ ದವಸ ಧಾನ್ಯ ಕೊಟ್ಟರೂ ಪರವಾಗಿಲ್ಲ ಎಂದು ದಮ್ಮಯ್ಯ ಹಾಕಿದವರ ಮಾತನ್ನು ನಂಬಿ ಪಟ್ಟಣದಲ್ಲಿ ಹಲವಾರು ಮಂದಿ ಬಟ್ಟೆ ಅಕ್ಕಿ ಧಾನ್ಯ ಮುಂತಾದವನ್ನು ಕೊಟ್ಟು ಕಳುಹಿಸಿದ್ದರು. ಆದರೆ ಅನಾಥಾಶ್ರಮ ನಡೆಸುತ್ತಿದ್ದೇವೆಂದು ಹೇಳಿಕೊಂಡು ಬಂದಿದ್ದವರ ಬಣ್ಣ ಕೆಲವೇ ಗಂಟೆಗಳಲ್ಲಿ ಬಯಲಾಗಿದ್ದು ಊರೂರು ಸುತ್ತಿ ಸಂಗ್ರಹಿಸಿದ್ದ ಬಟ್ಟೆಯನ್ನೆಲ್ಲಾ ಗಂಟುಕಟ್ಟಿ ಪಟ್ಟಣದ ಎಲ್.ಐ.ಸಿ ಕಛೇರಿಯ ಪಕ್ಕದಲ್ಲಿರುವ ಪೊದೆಗಳು ಬೆಳೆದಿರುವ ಜಾಗದಲ್ಲಿ ಎಸೆದು ಹಣ ಮತ್ತು ಧಾನ್ಯವನ್ನು ಮಾತ್ರ ತೆಗೆದುಕೊಂಡು ಹೋಗಿದ್ದಾರೆ ಎನ್ನುವ ಆರೋಪ ಕೇಳಿಬಂದಿದೆ.
ಇವರ ಕೃತ್ಯವನ್ನು ಕಂಡು ಅನುಮಾನಗೊಂಡ ಶ್ರೀರಾಮ ಜಾದೂಗಾರ ಎಂಬವರು ಪಟ್ಟಣಪಂಚಾಯತ ಅಧಿಕಾರಿಗಳಿಗೆ ಕರೆಮಾಡಿ ವಿಷಯ ತಿಳಿಸಿದಾಗ ನಾಲ್ಕು ಓಮ್ನಿ ಒಂದು ಟಾಟಾ ಏಸ್ ಗಾಡಿಯಲ್ಲಿ ಬಂದಿದ್ದ ಇವರು ಪಟ್ಟಣದ ಖಾಸಗಿ ಲಾಡ್ಜ್ ಒಂದರಲ್ಲಿ ರೂಮ್ ಬಾಡಿಗೆ ಪಡೆದು ಉಳಿದುಕೊಂಡಿದ್ದರು ಎನ್ನುವ ಮಾಹಿತಿ ಗೊತ್ತಾಗಿದೆ. ವಂಚನೆಗೆ ಹೊಸ ದಾರಿ ಹುಡುಕಿಕೊಂಡ ಈ ತಂಡದ ಸದಸ್ಯರು ನೇರವಾಗಿ ಹಣ ಕೊಡಿ ಎಂದು ಕೇಳಿದರೆ ಕೊಡುವುದಕ್ಕೆ ಹೆಚ್ಚಿನವರು ಮುಂದೆಬರುವುದಿಲ್ಲ ಎಂದು ವಿವಿಧ ಪೌಂಢೇಶನಗಳ ಹೆಸರು ಹೇಳಿ ಅನಾಥಾಶ್ರಮ, ವೃದ್ದಾಶ್ರಮ ನಡೆಸಲು ನೆರವು ಕೇಳುವ ನೆಪದಲ್ಲಿ ಜನರಿಗೆ ಮಂಕುಬೂದಿ ಎರಚಿದ್ದಾರೆ ಎನ್ನಲಾಗಿದೆ. ಸಮಾಜಸೇವೆಯ ಹೆಸರು ಹೇಳಿಕೊಂಡು ವಂಚಿಸುವ ಇಂತ ಸೋಗಲಾಡಿಗಳಿಂದ ಜನರು ಎಲ್ಲರನ್ನೂ ಅನುಮಾನದಿಂದ ನೋಡುವ ಸ್ಥತಿ ನಿರ್ಮಾಣವಾಗಿದೆ.

Leave a Comment