ಹೊನ್ನಾವರ – ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿರುವ ಕಾಡು ಪ್ರಾಣಿ ಹಾಗೂ ಪಕ್ಷಿಗಳ ಹಾವಳಿಯಿಂದ ಭತ್ತ, ಅಡಿಕೆ, ತೆಂಗು, ಬಾಳೆ, ಮಳೆಗಾಲದ ತರಕಾರಿ ಸೇರಿದಂತೆ ಯಾವುದೇ ಬೆಳೆಬೆಳೆದರೂ ಸುರಕ್ಷಿತವಾಗಿ ಫಸಲು ಕೈಸೇರುತ್ತದೆ ಎನ್ನುವ ಭರವಸೆಯೇ ಇಲ್ಲವಾಗಿದೆ ರೈತರ ಪಾಲಿಗೆ.
ಮಂಗ, ಹಂದಿ, ಮುಳ್ಳುಹಂದಿ, ಕಡವೆ, ಜಿಂಕೆ, ಕಾಡುಕೋಣ, ಮೊಲ, ನವಿಲು ಮುಂತಾದ ಪ್ರಾಣಿಪಕ್ಷಿಗಳು ಮಲೆನಾಡಿಗೆ ಹೊಂದಿಕೊಂಡಿರುವ ಕರವಾಳಿ ಭಾಗದಲ್ಲಿ ನಿರಂತರವಾಗಿ ರೈತರ ಹೊಲ ಗದ್ದೆಗಳಿಗೆ ದಾಳಿಯಿಟ್ಟು ಬೆಳೆದ ಬೆಳೆಯನ್ನು ಮನಸ್ಸೋ ಇಚ್ಚೆ ತಿಂದು ತುಳಿದು ನಾಶ ಮಾಡುವ ಪ್ರಕರಣಗಳು ವರದಿಯಾಗುತ್ತಿದೆ.

ಕಾಡು ಪ್ರಾಣಿಗಳ ಉಪಟಳವನ್ನು ತಡೆಯಲು ತಡೆಯಲು ಕೃಷಿಕರು ಮಾಡಿದ ಬೆರ್ಚು, ಮಾಳ, ಜಾಗಟೆ, ಪಟಾಕಿ ಸಿಡಿಸುವ ಪ್ರಯೋಗಗಳಷ್ಟೇ ಅಲ್ಲದೆ ಅರಣ್ಯ ಇಲಾಖೆಯವರು ತೋಡಿದ ಹಳ್ಳ, ಮಂಗನ ಹಿಡಿಯುವ ಬೋನ್ಗಳೂ ಪ್ರಯೋಗವೂ ಫಲಪ್ರದವಾಗಿಲ್ಲ.
ಕಾಡು ಕಾಡು ಪ್ರಾಣಿಗಳನ್ನು ದೂಷಿಸಿ ಪ್ರಯೋಜನವಿಲ್ಲ
ಹೆಚ್ಚುತ್ತಿರುವ ಜನಸಂಖ್ಯೆಯಿಂದಾಗಿ ಒಂದಿದ್ದ ಕುಟುಂಬಗಳು ನಾಲ್ಕಾಗಿ ಬದಲಾಗಿದೆ. ಜಮೀನು ಕಡಿಮೆಯಾದಾಗ ಕಾಡನ್ನು ಹೊಕ್ಕು ಎಲ್ಲೆಲ್ಲಿ ಜಲಮೂಲಗಳಿವೆಯೋ ಅಲ್ಲೆಲ್ಲಾ ಮನೆ ಕಟ್ಟಿಕೊಂಡು ಕಾಡನ್ನು ಕಡಿದು ನಾಡನ್ನಾಗಿ ಪರಿವರ್ತಿಸಿಕೊಂಡಿದ್ದಾರೆ. ನಾಡಿನಲ್ಲಿದ್ದವರು ಕಾಡು ಹೊಕ್ಕಮೇಲೆ ಕಾಡಲ್ಲಿದ್ದ ಪ್ರಾಣಿ ಪಕ್ಷಿಗಳು ನಾಡಿಗೆ ಬರುವುದರಲ್ಲಿ ತಪ್ಪೇನಿದೆ ಎನ್ನುವ ಪ್ರಶ್ನೆ ಅರಣ್ಯ ಇಲಾಖೆ ಹಾಗೂ ಪರಿಸರವಾದಿಗಳ ಪ್ರಶ್ನೆ.

ಕಾಡುಪ್ರಾಣಿಗಳಿಂದ ರೈತರ ಬೆಳೆ ನಷ್ಟವಾದರೆ ಅರಣ್ಯ ಇಲಾಖೆಯಿಂದ ಪರಿಹಾರ ನೀಡಲಾಗುತ್ತಿದೆಯಾದರೂ ಗ್ರಾಮೀಣ ಭಾಗದ ಹೊನ್ನಾವರ ಅರಣ್ಯ ವಿಭಾಗದ ಮಂಕಿ, ಭಟ್ಕಳ, ಕುಮಟಾ, ಹಿರೇಗುತ್ತಿ, ಕತಗಾಲ್, ಗೇರಸೊಪ್ಪಾ ಮತ್ತು ಹೊನ್ನಾವರ ವಲಯ ವ್ಯಾಪ್ತಿಯಲ್ಲಿ ಅತೀ ಹೆಚ್ಚಿನ ಪ್ರಮಾಣದಲ್ಲಿ ಕಾಡುಪ್ರಾಣಿಗಳಿಂದ ಬೆಳೆ ನಷ್ಟವಾಗುತ್ತಿದೆ. ಆದರೆ ಕಾಡುಪ್ರಾಣಿಗಳಿಂದಾಗುವ ಬೆಳೆ ಹಾನಿಗೆ ಅರಣ್ಯ ಇಲಾಖೆಯಿಂದ ಪರಿಹಾರ ನೀಡಲಾಗುತ್ತದೆ ಎನ್ನುವ ಸಂಗತಿಯೇ ಹೆಚ್ಚಿನ ರೈತರಿಗೆ ತಿಳಿದಿಲ್ಲ. ತಿಳಿದಿದ್ದರೂ ಆಗುವ ಹಾನಿಗೂ ಇಲಾಖೆ ನೀಡುವ ಪರಿಹಾರಕ್ಕೂ ಒಂದಕ್ಕೊಂದು ತಾಳೆಯಾಗುವುದಿಲ್ಲ. ಬಹಳಷ್ಟು ಸಂದರ್ಭದಲ್ಲಿ ಕಾಗದ ಪತ್ರ ಹೊಂದಿಸಲು ತಿರುಗಾಡಿದ ಖರ್ಚೂ ಸಿಗಲಾರದು ಎಂದು ಅರ್ಜಿ ಸಲ್ಲಿಸಲೂ ಮುಂದಾಗುವುದಿಲ್ಲ ಎನ್ನುವುದು ಹಲವು ರೈತರ ಅಂಬೋಣ.
ಸೊಪ್ಪಿನ ಬೆಟ್ಟಗಳೆಲ್ಲಾ ಅಕೇಶಿಯಾ ತೋಪುಗಳಾಗಿವೆ
ರೈತರ ಹೊಲ ಗದ್ದೆಗಳ ಪಕ್ಕದಲ್ಲಿದ್ದ ಸೊಪ್ಪಿನ ಬೆಟ್ಟಗಳು ಮಾಯವಾಗಿ ಅಲ್ಲೆಲ್ಲಾ ಅರಣ್ಯ ಇಲಾಖೆಯ ಪ್ರಾಯೋಜಕತ್ವದ ಅಕೇಶಿಯಾ ತೋಪುಗಳು ನಿರ್ಮಾಣವಾಗಿದೆ. ಹುಲ್ಲುಗಾವಲು ಸಹಿತ ಕಿರು ಅರಣ್ಯ ಪ್ರದೇಶಗಳನ್ನೆಲ್ಲಾ ತನ್ನ ಸುಪರ್ದಿಗೆ ಪಡೆದಿರುವ ಗೇರು ಅಭಿವೃದ್ಧಿ ನಿಗಮ ಗೇರು ಮರದ ಪಕ್ಕದಲ್ಲಿ ಯಾವೊಂದು ಜಾತಿಯ ಗಿಡಗಳೂ ಬೆಳೆಯದಂತೆ ನೋಡಿಕೊಂಡು ಟೆಂಡರ್ ಪಡೆದವರ ಹಿತ ಕಾಯುತ್ತಿದೆ. ಈ ಪ್ರದೇಶದಲ್ಲಿರುವ ಪ್ರಾಣಿ ಪಕ್ಷಿಗಳು ರೈತರ ಹೊಲ ಗದ್ದೆಗಳನ್ನೇ ತಮ್ಮ ಆಹಾರದ ಪಾತ್ರೆಯನ್ನಾಗಿಸಿಕೊಂಡಿವೆ.

[ಶೈಕ್ಷಣಿಕವಾಗಿ ಸಮಾಜದಲ್ಲಿ ಸುಧಾರಣೆ ಕಂಡುಬರುತ್ತಿದ್ದರೂ ಓದಿದವರು ಕೃಷಿಯತ್ತ ಮುಖಮಾಡಲು ಹಿಂದೇಟು ಹಾಕುತ್ತಿದ್ದಾರೆ ಎನ್ನುವ ಮಾತು ಕೇಳಿಬರುತ್ತಿದೆ. ಇದು ಅರ್ದ ಸತ್ಯ ಮಾತ್ರ. ಕೃಷಿಯಲ್ಲಿ ಅದೆಷ್ಟೇ ಕಷ್ಟಪಟ್ಟು ದುಡಿದರೂ ಬೆಳೆ ಉತ್ತಮವಾಗಿ ಬರುತ್ತದೆ ಎಂದು ಹೇಳಲು ಸಾಧ್ಯವಿಲ್ಲ. ಬೆಳೆ ಬಂದರೂ ಅದನ್ನು ಪ್ರಾಣಿ ಪಕ್ಷಿಗಳಿಂದ ಕಾಪಾಡಿಕೊಳ್ಳುವುದೇ ಹರ ಸಾಹಸ ಹೀಗಿರುವಾಗ ಯಾರು ಕೃಷಿಯತ್ತ ಆಸಕ್ತಿ ತೋರುತ್ತಾರೆ – ಮೋಹನ ನಾಯ್ಕ, ಬಾಳೆಮೆಟ್ಟು]
[ಕಾಡು ಪ್ರಾಣಿಗಳು ನಾಡಿಗೆ ಬರುವುದಕ್ಕೆ ಮುಖ್ಯ ಕಾರಣವೇ ಮನುಷ್ಯರು ಕಾಡಿನ ಪ್ರಶಾಂತತೆಗೆ ಭಂಗ ತಂದಿರುವುದು. ಮಳೆಗಾಲದಲ್ಲಿ ಕಾಡಿನಲ್ಲಿ ಹಣ್ಣುಗಳ ಲಭ್ಯತೆಯೂ ಕಡಿಮೆ ಇರುವ ಕಾರಣ ಮಂಗಗಳು ಹೆಚ್ಚಾಗಿ ರೈತರ ತೋಟಗಳಿಗೆ ಬರುತ್ತವೆ. ಕಾಡು ಪ್ರಾಣಿಗಳಿಂದ ಹಾನಿಯಾದ ಪ್ರತಿಯೊಂದು ಬೆಳೆಗೂ ಪರಿಹಾರ ಧನ ನೀಡಲಾಗುತ್ತದೆ. ಜನರು ಇದರ ಪ್ರಯೋಜನ ಪಡೆದುಕೊಳ್ಳಬೇಕು. ಮತ್ತು ಕಾಡಿನೊಂದಿಗೆ ಸೌಹಾರ್ಧಯುತ ಸಂಬಂಧ ಇಟ್ಟುಕೊಳ್ಳಬೇಕು – ಗಣಪತಿ.ಕೆ, ಡಿ.ಎಪ್.ಓ ಹೊನ್ನಾವರ]
ಹೊನ್ನಾವರ ವಿಭಾಗದಲ್ಲಿ ಕಾಡು ಪ್ರಾಣಿಗಳಿಂದಾದ ಬೆಳೆ ನಾಶದ ಅರ್ಜಿ ಮತ್ತು ಪರಿಹಾರ ಧನ ವಿತರಣೆ
(ಹೊನ್ನಾವರ,ಗೇರಸೊಪ್ಪಾ,ಕತಗಾಲ, ಹಿರೇಗುತ್ತಿ, ಕುಮಟಾ, ಭಟ್ಕಳ, ಮಂಕಿ ವಲಯಗಳನ್ನೊಳಗೊಂಡು)
ವರ್ಷ ಪ್ರಕರಣಗಳ ಸಂಖ್ಯೆ ಪರಿಹಾರಮೊತ್ತ
2017 -18 17 200000
2018 -19 11 101449
2019 -20 24 300000
2020-21(ಅಗಷ್ಟ್ ವರೆಗೆ) 10 100000
Leave a Comment