ಹಳಿಯಾಳ:- ಹಲವು ಪರ ವಿರೋಧಗಳ ಬಳಿಕ ಆರಂಭವಾಗಿರುವ ಒಳಚರಂಡಿ ಕಾಮಗಾರಿಯು ಸದ್ಯ ಕಾಮಗಾರಿ ನಡೆಯುವ ಸ್ಥಳಗಳಲ್ಲಿ ಜನರಿಗೆ ನರಕ ದರ್ಶನ ಮಾಡಿಸುತ್ತಿದ್ದು ಸಾರ್ವಜನೀಕರ ಸಮಸ್ಯೆಗೆ ಕ್ಯಾರೇ ಎನ್ನದೇ ಒಳಚರಂಡಿ ಮಂಡಳಿ ಹಾಗೂ ಗುತ್ತಿಗೆದಾರ ಅದ್ವಾನಗಳನ್ನು ಸೃಷ್ಠೀಸುತ್ತಾ ಕಾಮಗಾರಿ ಮುಂದುವರೆಸಿದ್ದಾನೆ.

ಕಳೆದ 2 ವರ್ಷಗಳ ಹಿಂದೆಯಷ್ಟೇ ಪಟ್ಟಣಕ್ಕೆ 24*7 ನಿರಂತರ ಕುಡಿಯುವ ನೀರಿನ ಯೋಜನೆ ಅನುಷ್ಠಾನಕ್ಕೆ ಕಾಮಗಾರಿ ಆರಂಭವಾದಾಗ ಸಿಮೆಂಟ್(ಸಿಸಿ), ಡಾಂಬರ ರಸ್ತೆಗಳನ್ನು ಮಾನವ ಸಂಪನ್ಮೂಲ ಬಳಸದೆ ಜೆಸಿಬಿ, ಹಿಟಾಚಿ, ವೈಬ್ರೇಟರ್ ಡ್ರೀಲ್ಲಿಂಗ್ ಮಷಿನ್ ಯಂತ್ರೋಪಕರಣಗಳನ್ನು ಬಳಸಿ ರಸ್ತೆಗಳನ್ನು ಇಕ್ಕೆಲಗಳಲ್ಲಿ ಅಗೆದು ಬಗೆದು ಹಾಳುಗೆಡವಿ ಯೋಜನೆ ಕಾಮಗಾರಿಯನ್ನು ಮುಗಿಸಲಾಯಿತು. ಸದ್ಯ 24*7 ನಿರಂತರ ನೀರು ಸರಬರಾಜು ಯೋಜನೆ ಹಳಿಯಾಳದಲ್ಲಿ ಲೋಕಾರ್ಪಣೆ ಆಗಿದೆ ಆದರೇ ನೀರು ಮಾತ್ರ ದಿನದಲ್ಲಿ ಯಾವಾಗ ಬರುತ್ತೆ ಯಾವಾಗ ಹೊಗುತ್ತೆ ಹಾಗೂ ಕೆಲವೊಮ್ಮೆ ವಾರಗಟ್ಟಲೇ ನೀರು ಬರದೆ ಸಾರ್ವಜನೀಕರು ಸಮಸ್ಯೆಗಳನ್ನು ಅನುಭವಿಸುವುದು ಅಷ್ಟೇ ಸತ್ಯವಾಗಿದೆ.


ಈ ಯೋಜನೆ ಅನುಷ್ಠಾನಕ್ಕೆ ಹಾಳುಗೆಡವಿದ ಪಟ್ಟಣದ ರಸ್ತೆಗಳನ್ನು ನಿರ್ಮಿಸಲು ಮತ್ತೇ ಕೊಟ್ಯಂತರ ರೂ. ಅನುದಾನವು ಬಿಡುಗಡೆಯಾಗಿ ರಸ್ತೆಗಳು ಸುಸ್ಥಿತಿಗೆ ಬಂದಿದ್ದವು ಆದರೇ ಮತ್ತೇ ಕಳೆದ ವರ್ಷ ಒಳಚರಂಡಿ ಯೋಜನೆ ಮಂಜೂರಿಯಾಗಿ ಟೆಂಡರ್ ಆಗಿ ಸಾಕಷ್ಟು ವಿರೋಧವನ್ನು ಎದುರಿಸಿ ಬಳಿಕ ಪೋಲಿಸ್ ರಕ್ಷಣೆಯೊಂದಿಗೆ ಕಾಮಗಾರಿ ಪ್ರಾರಂಭಿಸಲಾಗಿದೆ.
ಈಗಾಗಲೇ ಪಟ್ಟಣದ ಬಸವನಗರ, ದೇಶಪಾಂಡೆ ಆಶ್ರಯ ಬಡಾವಣೆ, ಚವ್ವಾಣ ಪ್ಲಾಟ್, ಆನೆಗುಂದಿ ಬಡಾವಣೆ, ಸದಾಶೀವನಗರ, ದುರ್ಗಾನಗರ, ಕೆಇಬಿ ಹಿಂಬದಿ ಕಿಲ್ಲೆದಾರ್ ಲೇಔಟ್ನಲ್ಲಿ ಯೋಜನೆ ಅನುಷ್ಠಾನಕ್ಕಾಗಿ ರಸ್ತೆಗಳನ್ನು ಅಗೆದು ಪೈಪಲೈನ್ ಜೊಡಿಸಲಾಗಿದ್ದು ಮ್ಯಾನಹೋಲ್ ಚೆಂಬರ್ಗಳನ್ನು ನಿರ್ಮಿಸಲಾಗಿದೆ.
ಆದರೇ ಬಹುತೇಕ ಕಾಮಗಾರಿ ನಡೆದಿರುವ ಎಲ್ಲ ಸ್ಥಳಗಳಲ್ಲಿ ರಸ್ತೆಗಳೇ ಮಾಯವಾಗಿದ್ದು ಕೆಸರು ಗದ್ದೆ ಹಾಗೂ ಕಚ್ಚಾ ರಸ್ತೆಗಳಾಗಿ ಮಾರ್ಪಟ್ಟಿದ್ದರೇ ಕೆಲವೆಡೆ ಹೊಂಡಗಳ ಆಗರವಾಗಿ ಮಾರ್ಪಟ್ಟಿವೆ. ಅಲ್ಲದೇ ಹಲವು ಕಡೆಗಳಲ್ಲಂತೂ ಮನೆಯಿಂದ ರಸ್ತೆಗೆ ಕಾಲಿಡದೆ ಇರುವಂತಹ ಸ್ಥಿತಿ ಇದೆ ಅಲ್ಲದೇ ಹಲವಾರು ಜನರು ಬಿದ್ದು ಪೆಟ್ಟುಗಳು ಮಾಡಿಕೊಂಡಿದ್ದಾರೆ ಮತ್ತು ವಾಹನಗಳು ಕೆಸರಿನಲ್ಲಿ ಸಿಕ್ಕಿಹಾಕಿಕೊಂಡು ಸಾಕಷ್ಟು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ.
ಈ ಬಗ್ಗೆ ಹತ್ತಾರು ಬಾರಿ ಕಾಮಗಾರಿ ನಡೆಸುತ್ತಿರುವ ಗುತ್ತಿಗೆದಾರರಿಗೆ ಹಾಗೂ ಕರ್ನಾಟಕ ನಗರ ನೀರು ಸರಬರಾಜು ಹಾಗೂ ಒಳಚರಂಡಿ ಮಂಡಳಿಯವರು ಮಾತ್ರ ಯಾವುದಕ್ಕೂ ಕ್ಯಾರೇ ಎನ್ನದೇ, ಸಾರ್ವಜನೀಕರ ತೊಂದರೆ, ದೂರುಗಳಿಗೆ ಸ್ಪಂದಿಸದೆ ಪ್ರತಿನಿತ್ಯ ಜನರು ತೊಂದರೆ ಅನುಭವಿಸುವ ಹಾಗೆ ಕಾಮಗಾರಿ ನಡೆಸುತ್ತಿರುವುದು ಮಾತ್ರ ದುರ್ದೈವವೇ ಸರಿ.
ಜನರಿಗಾಗಿಯೇ ಮಾಡುವ ಅಭಿವೃದ್ದಿ ಯೋಜನೆಯೊಂದು ಜನರು, ಜನಪ್ರತಿನಿಧಿಗಳ ವಿರೋಧದ ಮಧ್ಯೆ ಪೋಲಿಸ್ ರಕ್ಷಣೆಯಲ್ಲಿ ಪ್ರಾರಂಭವಾಯಿತು. ಅಲ್ಲದೇ ಇಲ್ಲಿಯ ಪುರಸಭೆ ಭವನದಲ್ಲಿ ಕಳೆದ ಕೆಲವು ತಿಂಗಳ ಹಿಂದೆ ನಡೆದ ಸಭೆಯಲ್ಲಿ ಶಾಸಕ ಆರ್.ವಿ ದೇಶಪಾಂಡೆ ಅವರು ಒಳಚರಂಡಿ ಕಾಮಗಾರಿಯ ಕುರಿತು ಜನರ ದೂರುಗಳ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿ ಜನರಿಗೆ ತೊಂದರೆ ಆಗದಂತೆ ಕಾಮಗಾರಿ ನಡೆಸುವಂತೆ ಆದೇಶಿಸಿದ್ದರು ಆದರೇ ಇಲ್ಲಿ ಮಾತ್ರ ಅದ್ಯಾವುದು ಕಾಣಸಿಗುತ್ತಿಲ್ಲ.
ಹಳಿಯಾಳ ಪಟ್ಟಣದ ಸಾರ್ವಜನೀಕರ ಸಮಸ್ಯೆಗಳಿಗೆ ಸ್ಪಂದಿಸದೆ ಇರುವ ಅಧಿಕಾರಿಗಳ ಮತ್ತು ಜನಪ್ರತಿನಿಧಿಗಳ ವಿರುದ್ದ ಸಾರ್ವಜನೀಕರು ಕೆಂಡ ಕಾರುತ್ತಿದ್ದಾರೆ. ಹಳಿಯಾಳದಲ್ಲಿ ಮಾತ್ರ ಸಾರ್ವಜನೀಕರ ಸಮಸ್ಯೆಗಳಿಗೆ ಸ್ಪಂದಿಸುವ ಯಾವೊಬ್ಬರು ಇಲ್ಲವೇ ಎಂಬ ಪ್ರಶ್ನೇಯು ಇಲ್ಲಿ ಉಧ್ಬವವಾಗಿದೆ.
ಸದ್ಯ ಸುರಿಯುತ್ತಿರುವ ಮಳೆಯಿಂದ ಒಳಚರಂಡಿ ಕಾಮಗಾರಿ ನಡೆಯುತ್ತಿರುವ ಸ್ಥಳಗಳಲ್ಲಿ ಕೆಸರುಗದ್ದೆಯಾದ, ಹೊಂಡಗಳು ಬಿದ್ದು ವಾಹನ ಜೊತೆಗೆ ಜನ ಸಂಚಾರಕ್ಕೆ ಸಮಸ್ಯೆಯಾಗಿರುವ ಸ್ಥಳಗಳಲ್ಲಿ ಒಳಚರಂಡಿ ಮಂಡಳಿಯವರು ಹಾಗೂ ಗುತ್ತಿಗೆದಾರರು ರಸ್ತೆಗಳನ್ನು ಸರಿಪಡಿಸಿ ಜನರ ಸಂಕಷ್ಟಕ್ಕೆ ಸ್ಪಂದಿಸುವವರೇ ಎಂದು ಕಾದು ನೋಡಬೇಕಿದೆ.
Leave a Comment