ಸುನಾಮಿಯಿಂದಲೂ ರಕ್ಷಿಸುತ್ತೆ ಕಾಂಡ್ಲಾ ಇದು ಜಲಚರಗಳ ಪಾಲಿಗಂತೂ ಸ್ವರ್ಗ/honavar mangrove forest
ಕೈ ಬೀಸಿ ಕರೆಯುತ್ತಿದೆ ಶರಾವತಿ ಮಡಿಲಲ್ಲಿ ಮೈದಳೆದ ಕಾಂಡ್ಲಾ ಕಾಡಿನ ಬೋರ್ಡ ವಾಕ್
ಹೊನ್ನಾವರ –
ಮಣ್ಣಿನ ಸವಕಳಿ ತಡೆಯುವ ಜೊತೆಗೆ ವಿನಾಶಕ್ಕೆ ಕಾರಣವಾಗಬಲ್ಲ ಚಂಡಮಾರುತ ಹಾಗೂ ಸುನಾಮಿಯ ಪ್ರಭಾವವನ್ನೂ ತಗ್ಗಿಸಬಲ್ಲ, ಜಲಚರಗಳಿಗೆ ಆಹಾರಮೂಲವೂ ಆವಾಸಸ್ಥಾನವೂ ಆಗಿರುವ ಬಹುಪಯೋಗಿ ಕಾಂಡ್ಲಾ ಕಾಡುಗಳನ್ನು ಪ್ರವಾಸೋದ್ಯಮಕ್ಕೆ ಅಣಿಗೊಳಿಸುವ ಕಾರ್ಯ ತಾಲೂಕಿನಲ್ಲಿ ಭರದಿಂದ ನಡೆಯುತ್ತಿದೆ.
ಶರಾವತಿ ನದಿಗೆ ಅಡ್ಡಲಾಗಿ ನಿರ್ಮಿಸಲಾದ ಕೊಂಕಣ ರೇಲ್ವೇ ಸೇತುವೆ ಮತ್ತು ಹೆದ್ದಾರಿ ಸೇತುವೆ ನಡುವೆ ಹೂಳು ತುಂಬಿದ ಪ್ರದೇಶವನ್ನು ಗುರುತಿಸಿ ಅರಣ್ಯ ಇಲಾಖೆಯವರು ಅಲ್ಲೆಲ್ಲಾ ಕಾಂಡ್ಲಾ ಸಸಿಗಳನ್ನು ನೆಟ್ಟು ಬೆಳೆಸಿದ್ದಾರೆ. ಇದರಿಂದ ಇಂದು ಶರಾವತಿ ನದಿಯಲ್ಲಿ ಹತ್ತಾರು ಪುಟ್ಟ ಪುಟ್ಟ ಕಾಂಡ್ಲಾ ಕಾಡುಗಳು ನಿರ್ಮಾಣವಾಗಿದೆ. ಸೇತುವೆಯ ಮೇಲಿಂದ ಸಾಗುವಾಗ ನೋಡಿದರೆ ನೀರಿನಲ್ಲಿ ತೇಲಿಬಿಟ್ಟ ಹಸಿರ ಮುದ್ದೆಯಂತೆ ಕಾಣಿಸುವ ಇವುಗಳ ಬಗ್ಗೆ ಅರಿಯುವ ಕುತೂಹಲವಿದ್ದರೂ ನೀರಿನ ನಡುವೆ ಇರುವ ಕಾರಣ ಮತ್ತು ಇವು ಒಂದಕ್ಕೊಂದು ಬೆಸೆದುಕೊಂಡು ಜಟಿಲವಾಗಿ ಬೆಳೆಯುವುದರಿಂದ ಅಬೇಧ್ಯವೆನಿಸಿ ನೋಟಕ್ಕಷ್ಟೇ ಸೀಮಿತವಾಗಿತ್ತು.
ಆದರೆ ಇತ್ತೀಚೆಗೆ ಕಾಂಡ್ಲಾ ಕಾಡಿನ ಬಗ್ಗೆ ಜನರಲ್ಲಿ ಅರಿವುಮೂಡಿಸುವ ಸಲುವಾಗಿ ಮತ್ತು ಪ್ರವಾಸೋದ್ಯಮಕ್ಕೆ ಇಲ್ಲಿನ ನಿಸರ್ಗ ಸೌಂದರ್ಯವನ್ನು ತೆರೆದಿಡುವ ಪ್ರಯತ್ನದ ಭಾಗವಾಗಿ ಅರಣ್ಯ ಇಲಾಖೆ ಸಿ.ಎಸ್.ಎಸ್.ಮ್ಯಾಂಗ್ರೋಸ್ ಪ್ಲ್ಯಾನ್ ಅಡಿಯಲ್ಲಿ ಕೇಂದ್ರ ಸರ್ಕಾರದಿಂದ ಮಂಜೂರಾದ 8 ಲಕ್ಷ ಅನುದಾನದಲ್ಲಿ ಬೋರ್ಡ್‍ವಾಕ್ ನಿರ್ಮಿಸಿದೆ. 2018 ರಲ್ಲಿ ಪ್ರಾಯೋಗಿಕವಾಗಿ ನಿರ್ಮಿಸಿದ ಬೋರ್ಡ್‍ವಾಕ್‍ಗೆ ಸಾರ್ವಜನಿಕರಿಂದಲೂ ಅಭೂತಪೂರ್ವ ಮೆಚ್ಚುಗೆ ವ್ಯಕ್ತವಾಗಿತ್ತು. ಆರಂಭದಲ್ಲಿ ಸಿಕ್ಕ ಯಶಸ್ಸಿನ ಎಳೆಯನ್ನು ಹಿಡಿದು ಹೊರಟ ಇಲಾಖೆ ಮೊದಲಿಗಿಂತಲೂ ದೊಡ್ಡದಾದ ಬೋರ್ಡವಾಕ್ ನಿರ್ಮಿಸಿದ್ದು ಉದ್ಘಾಟನೆಗೆ ಸಿದ್ದಗೊಳ್ಳುತ್ತಿದೆ.
ಸುನಾಮಿಯಿಂದಲೂ ರಕ್ಷಿಸುತ್ತೆ ಕಾಂಡ್ಲಾ ಇದು ಜಲಚರಗಳ ಪಾಲಿಗಂತೂ ಸ್ವರ್ಗ/honavar mangrove forest
ಕಾಂಡ್ಲಾ ಕಾಡಿನ ಜೈವಿಕ ವೈಶಿಷ್ಠ್ಯ
ಅಳಿವೆ ಪ್ರದೇಶಗಳಲ್ಲಿ ಲವಣಾಂಶ ಹೆಚ್ಚಿರುವ ಜೌಗು ಮಣ್ಣಿನಲ್ಲಿ ಗಾಳಿಯ ಪ್ರಮಾಣ ತೀರಾ ಕಡಿಮೆ ಇರುತ್ತದೆ ಮತ್ತು ಭರತದ ನೀರು ತುಂಬುವ ಪ್ರದೇಶದಲ್ಲಿ ಉಳಿದ ಸಸ್ಯಗಳು ಬೆಳೆಯಲಾರವು. ಆದರೆ ಕಾಂಡ್ಲಾ ಸಸ್ಯಗಳು ಮಾತ್ರ ಈ ಪ್ರತಿಕೂಲ ಪರಿಸ್ಥಿತಿಯಲ್ಲಿಯೂ ಯಶಸ್ವಿಯಾಗಿ ಬೆಳೆಯುವ ಸಾಮಥ್ರ್ಯವನ್ನು ಪಡೆದಿವೆ. ಹೊನ್ನಾವರ ಅರಣ್ಯ ವಿಭಾಗದಲ್ಲಿ ಹರಿಯುವ ಶರಾವತಿ, ಅಘನಾಶಿನಿ, ಗಂಗಾವಳಿ ಮತ್ತು ವೆಂಕಟಾಪುರ ನದಿಗಳ ಅಳಿವೆ ಪ್ರದೇಶದಲ್ಲಿ ಕಾಂಡ್ಲಾ ಕಾಡುಗಳು ಕಂಡುಬರುತ್ತದೆ.
ಕಾಂಡ್ಲಾ ಕಾಡಿನ ಪ್ರಯೋಜನಗಳು
ಸಮುದ್ರ ಮತ್ತು ನದಿ ತೀರಗಳಲ್ಲಿ ಮಣ್ಣಿನ ಸವಕಳಿ ತಡೆದು ಹಸಿರು ತಡೆಗೋಡೆಯಂತೆ ಕಾರ್ಯನಿರ್ವಹಿಸುತ್ತದೆ.
ಜಲಚರಗಳಿಗೆ ಆಹಾರ ಮೂಲ ಮತ್ತು ವಂಶಾಭಿವೃದ್ಧಿಗೆ ಅನುಕೂಲ ಪರಿಸರ
ಅತೀ ಹೆಚ್ಚಿನ ಪ್ರಮಾಣದಲ್ಲಿ ಇಂಗಾಲವನ್ನು ಹೀರಿಕೊಳ್ಳುತ್ತದೆ
ಪರಿಸರದ ಬಗ್ಗೆ ಅಧ್ಯಯನ ಹಾಗೂ ಪ್ರವಾಸೋದ್ಯಮಕ್ಕೆ ಪೂರಕ
[ ವಿದ್ಯಾರ್ಥಿಗಳಿಗೆ, ಮೀನುಗಾರರಿಗೆ, ಸಾರ್ವಜನಿಕರಿಗೆ ಕಾಂಡ್ಲಾ ಕಾಡಿನ ಬಗ್ಗೆ ಮಾಹಿತಿ ಮತ್ತು ಅವುಗಳ ಉಪಯೋಗವನ್ನು ಮನದಟ್ಟು ಮಾಡಿಸುವುದಕ್ಕೆ ಬೋರ್ಡ್‍ವಾಕ್ ಸಹಾಯ ಮಾಡುತ್ತದೆ. ಕೇಂದ್ರ ಸರ್ಕಾರದ ಮ್ಯಾಂಗ್ರೋವ್ಸ್ ಪ್ಲ್ಯಾನ್ ಅಡಿಯಲ್ಲಿ ಅನುಷ್ಠಾನವಾದ ಯೋಜನೆಯನ್ನು ಗ್ರಾಮ ಅರಣ್ಯ ಸಮಿತಿಯವರೇ ನಿರ್ವಹಿಸಲಿದ್ದಾರೆ – ಗಣಪತಿ.ಕೆ, ಡಿ.ಎಫ್.ಓ. ಹೊನ್ನಾವರ]
ಭಾರತೀಯ ವಿಜ್ಞಾನ ಸಂಸ್ಥೆಯ ಡಾ.ಸುಭಾಶ್‍ಚಂದ್ರನ್ ನೇತೃತ್ವದ ತಂಡ 2012ರಲ್ಲಿ ನಡೆಸಿದ ಅಧ್ಯಯನದ ಪ್ರಕಾರ ಹೊನ್ನಾವರ ಅರಣ್ಯ ವಿಭಾಗದಲ್ಲಿ 390 ಹೆಕ್ಟೇರ್ ವಿಸ್ತೀರ್ಣವಾದ ಕಾಂಡ್ಲಾ ಕಾಡಿದೆ ಎನ್ನಲಾಗಿದೆ. ಇನ್ನೂ ಸುಮಾರು 1019 ಹೆಕ್ಟೇರ್ ಪ್ರದೇಶ ಕಾಂಡ್ಲಾ ಬೆಳೆಯಲು ಯೋಗ್ಯವಾದ ಭೂಮಿ ಈ ಭಾಗದಲ್ಲಿ ಇದೆ ಎನ್ನಲಾಗಿದೆ.]
ಹೊನ್ನಾವರ ಭಾಗದಲ್ಲಿ ಕಂಡುಬರುವ ಕಾಂಡ್ಲಾ ಬಗೆಗಳು -ಅವಿಸಿನಿಯಾ, ಬ್ರುಗೇರಿಯಾ, ಎಕ್ಸೋಕಾರಿಯಾ, ಕಾಮಡಿಲಿಯಾ, ರೈಜೋಫೊರಾ, ಸೊನರೇಶಿಯಾದಂತ ನೈಜ ಕಾಂಡ್ಲಾ ಸಸ್ಯಗಳು ಮತ್ತು ಸಮುದ್ರಫಲ, ಹೊನ್ನೆಮರ,ಸೀಸಾಲ್ಪಿನಿಯಾ ಕ್ರಿಸ್ಟಾ, ಡೆರ್ರಿಸ್ ಟ್ರೈಪೋಲಿಯೇಟಾ, ಕೇದಿಗೆ, ಹೊಂಗೆ ಮುಂತಾದ ಕಾಂಡ್ಲಾ ಸಹಚರ ಸಸ್ಯಗಳೂ ಈ ಭಾಗದಲ್ಲಿ ಬೆಳೆಯುತ್ತವೆ.
Leave a Comment