ಹಳಿಯಾಳ:- ತಮ್ಮ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ವೈದ್ಯಕೀಯ ಶಿಕ್ಷಣ ಇಲಾಖೆ ಗುತ್ತಿಗೆ ಹಾಗೂ ಹೋರಗುತ್ತಿಗೆ ನೌಕರರ ಸಂಘದವರು ತಾಲೂಕಾ ಕೇಂದ್ರ ಹಳಿಯಾಳ ಪಟ್ಟಣದ ಮಿನಿ ವಿಧಾನಸೌಧದ ಎದುರು ನಡೆಸುತ್ತಿರುವ ಪ್ರತಿಭಟನೆ 13ನೇ ದಿನಕ್ಕೆ ಕಾಲಿಟ್ಟಿದ್ದು ಮಂಗಳವಾರ ಹಳಿಯಾಳದ ವಿವಿಧ ಸಂಘಟನೆಗಳು ನೌಕರರ ಹೋರಾಟಕ್ಕೆ ಬೆಂಬಲ ಸೂಚಿಸಿವೆ.


ಕಳೆದ ದಿ.24 ರಿಂದ ಕರ್ತವ್ಯಕ್ಕೆ ಗೈರು ಹಾಜರಾಗುವ ಮೂಲಕ ಅನಿರ್ದಿಷ್ಟಾವಧಿ ಮುಷ್ಕರ ಆರಂಭಿಸಿರುವ ನೌಕರರ ನ್ಯಾಯಯುತ ಬೇಡಿಕೆಗಳಾದ ಸೇವಾ ಭದ್ರತೆ, ಸಮಾನ ಕೆಲಸಕ್ಕೆ ಸಮಾನ ವೇತನ ಸೇರಿದಂತೆ ವಿವಿಧ ಬೇಡಿಕೆಗಳನ್ನು ಸರ್ಕಾರ ಕೂಡಲೇ ಈಡೇರಿಸಬೇಕೆಂದು ಸಂಘಟನೆಗಳು ಆಗ್ರಹಿಸಿವೆ. ಅಲ್ಲದೇ ಕೊರೊನಾ ಸಂಕಷ್ಟದ ಸಂದರ್ಭದಲ್ಲಿ ಹಗಲಿರುಳು ಶ್ರಮಿಸುತ್ತಿರುವ ಕೊರೊನಾ ವಾರಿಯರ್ಸ್ಗಳ ಬೇಡಿಕೆ ಈಡೇರಿಸುವ ಮೂಲಕ ಸರ್ಕಾರ ಅವರಿಗೆ ಗೌರವ ಸಲ್ಲಿಸಬೇಕಿದೆ ಎಂದು ಅವರು ಆಗ್ರಹಿಸಿದ್ದಾರೆ.
ಮಿನಿ ವಿಧಾನಸೌಧದ ಎದುರು ಪ್ರತಿಭಟನೆ ನಡೆಸುತ್ತಿರುವ ಗುತ್ತಿಗೆ ಹೊರಗುತ್ತಿಗೆ ನೌಕರರಾದ ವೈದ್ಯರು, ನರ್ಸಗಳು, ಚಾಲಕರು ಇತರರನ್ನು ಭೇಟಿಯಾದ ಕನ್ನಡಪರ ಸಂಘಟನೆಯಾದ ಕರ್ನಾಟಕ ರಕ್ಷಣಾ ವೇದಿಕೆ ಹಳಿಯಾಳ ಘಟಕ ಅಧ್ಯಕ್ಷ ಬಸವರಾಜ ಬೆಂಡಿಗೇರಿಮಠ, ಜಯ ಕರ್ನಾಟಕ ಸಂಘಟನೆ ಘಟ್ಟದ ಮೇಲಿನ ಜಿಲ್ಲಾದ್ಯಕ್ಷ ವಿಲಾಸ ಕಣಗಲಿ, ಪತಂಜಲಿ ಯೋಗ ಸಮೀತಿಯ ಅಧ್ಯಕ್ಷ ಕಮಲ ಸಿಕ್ವೇರಾ, ಹಿರಿಯ ನಾಗರೀಕರ ವೇದಿಕೆ ಜಿಡಿ ಗಂಗಾಧರ, ಭಾರತ ರೀಕ್ಷ ಆಟೋ ಸಂಘದ ಅಬ್ದುಲ್ ಶೇಖ, ದಲಿತ ಸಂಘಟನೆಗಳು, ಕಾರ್ಮಿಕ ಸಂಘಟನೆಗಳು ತಮ್ಮ ಬೆಂಬಲ ಸೂಚಿಸಿದವು.
ಪ್ರತಿಭಟನೆಯಲ್ಲಿ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ವೈದ್ಯಕೀಯ ಶಿಕ್ಷಣ ಇಲಾಖೆ ಗುತ್ತಿಗೆ ಹಾಗೂ ಹೋರಗುತ್ತಿಗೆ ನೌಕರರ ಸಂಘದ ಹಳಿಯಾಳ ಘಟಕದ ಚನ್ನಬಸವರಾಜ ಹಿರೆಹಾಳ್, ಎಸ್ಟಿಎಸ್ ಸಿಬ್ಬಂದಿ ರಾಹುಲ್ ಬಾವಕರ, ಆಯುಷ್ ವೈದ್ಯೆ ಡಾ.ಸೋನಾ, ಡಾ.ಶೀಲಾ, ಶಾಂತಾ ಹರಿಜನ, ಹೇಮಲತಾ ನಾಯ್ಕ, ಸಂಧ್ಯಾ ತಳೆಕರ, ಯಲ್ಲವ್ವಾ ವಡ್ಡರ, ರಾಜೇಶ್ವರಿ ಮಿಂಡೊಳಕರ, ಜರಿನಾ ದೇಸಾಯಿ, ಚಾಲಕ ಸಿಬ್ಬಂದಿ ನಾರಾಯಣ, ಸಾಗರ ಧಾರವಾಡಕರ, ಅರ್ಫಾತ ಭಾಗವಹಿಸಿದ್ದರು.
ವಿವಿಧ ಸಂಘಟನೆಗಳ ಪ್ರಮುಖರಾದ ಚಂದ್ರಕಾಂತ ದುರ್ವೆ, ಅಮರ ಪಳನಿಸ್ವಾಮಿ, ಮಹೇಶ ಆನೆಗುಂದಿ, ಅರ್ಜುನ ಬೊವಿ ಇತರರು ಇದ್ದರು.
Leave a Comment