ಅಂತೂ ಇಂತೂ ಪಟ್ಟಣ ವ್ಯಾಪ್ತಿಯಲ್ಲಿ ಚತುಷ್ಪಥ ಕಾಮಗಾರಿ ಕೈಗೆತ್ತಿಕೊಳ್ಳುವುದಕ್ಕೆ ಐ.ಆರ್.ಬಿ ಸಜ್ಜಾಗುತ್ತಿರುವ ಲಕ್ಷಣಗಳು ಕಂಡುಬರುತ್ತಿದ್ದು ಮಾರ್ಕಿಂಗ್ ಕಾರ್ಯ ಕೂಡು ರಸ್ತೆಗಳಲ್ಲಿ ಸ್ಪೀಡ್ ಬ್ರೇಕರ್ ಅಳವಡಿಸುವ ಕೆಲಸ ನಡೆಯುತ್ತಿದೆ. ವಿಚಿತ್ರ ಎಂದರೆ ಶರಾವತಿ ನದಿಗೆ ಸೇತುವೆ ನಿರ್ಮಾಣವಾಗುವವರೆಗೂ ಮೌನವಾಗಿದ್ದು ನಂತರ ಪಟ್ಟಣ ವ್ಯಾಪ್ತಿಯಲ್ಲಿ ಮೇಲ್ಸೇತುವೆ ಆಗಲೇ ಬೇಕು ಎನ್ನುವ ಬೇಡಿಕೆಯನ್ನಿಟ್ಟು ಹಲವು ಸಮಾನ ಮನಸ್ಕರು ಸೇರಿ ಕೆಲ ಸಭೆಗಳನ್ನು ನಡೆಸಿ ಪ್ರತಿಭಟನೆಗೂ ಮುಂದಾಗಿದ್ದರು. ಜನರ ಪ್ರತಿಭಟನೆಯ ಕಾವು ಕಡಿಮೆಯಾಗಲೆಂದೇ ತಾಳ್ಮೆಯಿಂದ ಕಾಯುತ್ತಿದ್ದಂತಿದ್ದ ಖಾಸಗಿ ಕಂಪನಿಯವರು ಬರೋಬ್ಬರಿ ಒಂದು ವರ್ಷದ ನಂತರ ಕಾಮಗಾರಿ ಕೈಗೆತ್ತಿಕೊಳ್ಳಲು ಮುಂದಾಗಿದ್ದಾರೆ.

ಮೇಲ್ಸೇತುವೆ ಕನಸು ನನಸಾಗುವ ಸಾಧ್ಯತೆ ಕ್ಷೀಣಿಸುತ್ತಿದ್ದು ಸರ್ವೀಸ್ ರಸ್ತೆಗಳನ್ನಾದರೂ ಅಗತ್ಯವಿರುವಲ್ಲಿ ಪಡೆದುಕೊಳ್ಳಬೇಕು ಇಲ್ಲದಿದ್ದರೆ ಪಟ್ಟಣದಲ್ಲಿನ ವ್ಯಾಪಾರ ವಹಿವಾಟಿಗೆ ದೊಡ್ಡ ಪ್ರಮಾಣದಲ್ಲಿ ಹೊಡೆತ ಬೀಳಲಿದೆ ಎನ್ನಲಾಗುತ್ತಿದೆ. ೬೦ ಮೀಟರ್ ಅಗಲವಾಗಬೇಕು ಎನ್ನುವ ಪ್ರಸ್ಥಾವನೆಯನ್ನು ಕೈ ಬಿಟ್ಟು ೪೦ ಮೀಟರ್ಗೆ ಇಳಿಸಿ ಇದೀಗ ಮತ್ತಷ್ಟು ಕಡಿಮೆ ಮಾಡಿ ಕೇವಲ ೩೦ ಮೀಟರ್ ಅಗಲದಲ್ಲಿ ಚತುಷ್ಪಥ ನಿರ್ಮಾಣಕ್ಕೆ ಮುಂದಾಗಿರುವುದರಿAದ ಪಟ್ಟಣ ವ್ಯಾಪ್ತಿಯಲ್ಲಿ ವಾಹನಗಳ ಅಡಚಣೆ ಹೆಚ್ಚಿ ಅಪಘಾತ ಪ್ರಮಾಣವೂ ಹೆಚ್ಚುವ ಸಾಧ್ಯತೆಯಿದೆ. ರಸ್ತೆಯ ಎರಡೂ ಬದಿಯಲ್ಲೂ ವಾಹನ ನಿಲ್ಲಿಸುವುದಕ್ಕೆ ಸ್ಥಳಾವಕಾಶದ ಕೊರತೆಯ ಜೊತೆಗೆ ಪಾದಾಚಾರಿಗಳಿಗೂ ತೊಂದರೆಯಾಗಲಿದೆ ರಸ್ತೆ ಅಗಲೀಕರಣದ ಸಂದರ್ಭದಲ್ಲಿ ಮುಂದೆ ಎದುರಾಗಲಿರುವ ಸಮಸ್ಯೆಗಳನ್ನು ಗಮನದಲ್ಲಿಟ್ಟುಕೊಳ್ಳಬೇಕು ಎನ್ನುವ ಒತ್ತಾಯ ಸಾರ್ವಜನಿಕರಿಂದ ಕೇಳಿಬರುತ್ತಿದೆ. ಆದರೆ ಜನರ ಒತ್ತಾಯಗಳಿಗೆ ಖಾಸಗಿ ಕಂಪನಿ ಎಷ್ಟರಮಟ್ಟಿಗೆ ಸ್ಪಂದಿಸುತ್ತದೆ ಎನ್ನುವುದಕ್ಕೆ ಕಾಲವೇ ಉತ್ತರಿಸಬೇಕು.

Leave a Comment