ಪೇಡಾ ಅಂದರೆ ಸಾಕು ಧಾರವಾಡ ಪೇಡಾ ಎನ್ನುವವರು ಸಾಕಷ್ಟು ಜನರಿದ್ದಾರೆ ಆದರೆ ರುಚಿಯಲ್ಲಿ ಧಾರವಾಡ ಪೇಡಾವನ್ನೂ ಮೀರಿಸಬಲ್ಲ ಪ್ರಚಾರದಲ್ಲಿ ಮಾತ್ರ ಹಿಂದುಳಿದಿರುವ ಹೆಬ್ಬರ್ನಕೆರೆಯ ಸೂಪರ್ ಪೇಡಾಗಳು ಶುದ್ಧ ಹಾಲು ಮತ್ತು ಸಕ್ಕರೆಯಿಂದ ತಯಾರಾಗಿ ಹೊನ್ನಾವರ ಭಟ್ಕಳ ಕುಮಟಾ ತಾಲೂಕಿನ ಜನರ ಬಾಯಲ್ಲಿ ನೀರೂರಿಸುತ್ತಿದೆ.

ಬೇಕರಿ ತಿನಿಸುಗಳ ಭರಾಟೆಯಲ್ಲಿಯೂ ಮಾರುಕಟ್ಟೆಯಲ್ಲಿ ತನ್ನ ಅಸ್ಥಿತ್ವ ಉಳಿಸಿಕೊಂಡಿರುವ ಈ ಪೇಡಾ ಕೃತ್ರಿಮ ಬಣ್ಣಗಳ ಬಳಕೆಯಿಲ್ಲದೇ ಶುದ್ಧ ಹಾಲು, ಸಕ್ಕರೆ ಮತ್ತು ಏಲಕ್ಕಿಯ ಮಿಶ್ರಣದಿಂದ ಮನೆಯಲ್ಲಿಯೇ ಯಾವುದೇ ಯಂತ್ರಗಳ ಸಹಾಯವಿಲ್ಲದೇ ಗೃಹಿಣಿಯ ಕೈಯ್ಯಲ್ಲಿ ತಯಾರಾಗುತ್ತಿದೆ ಹಾಗಾಗಿ ಬೇಡಿಕೆ ಸಾಕಷ್ಟಿದ್ದರೂ ಮಾರುಕಟ್ಟೆಯ ಅಗತ್ಯಕ್ಕನುಗುಣವಾಗಿ ಉತ್ಪನ್ನವನ್ನು ಸಕಾಲದಲ್ಲಿ ತಯಾರಿಸಿ ಪೂರೈಸುವುದು ತುಸು ಸವಾಲಿನ ಕೆಲಸವಾಗಿದೆ. ಬಾಳ ಬಂಡಿಯ ಜೊತೆಗಾರನ ಅಗಲಿಕೆಯ ನೋವಲ್ಲೂ ಸಮಯ ಹೊಂದಿಸಿಕೊAಡು ಮನೆಯಲ್ಲಿಯೇ ಪೇಡಾ ತಯಾರಿಸಿ ಸಮೀಪದ ಮಾರುಕಟ್ಟೆಗಳಿಗೆ ಪೂರೈಸಿ ಅಷ್ಟೋ ಇಷ್ಟೋ ಸಂಪಾದಿಸಿಕೊಳ್ಳುತ್ತಿರುವ ದೀಪಾ ಭಟ್ಟ ಇವರಿಗೆ ಪೇಡಾ ತಯಾರಿಕೆ ಹಣ ಗಳಿಕೆಗೆ ಅನುಕೂಲಮಾಡಿಕೊಟ್ಟಿದೆ ಎನ್ನುವುದಕ್ಕಿಂತ ಸ್ವಾಭಿಮಾನದ ಬದುಕಿಗೆ ದಾರಿ ತೋರಿದೆ ಎನ್ನಬಹುದು.
ಸಕ್ಕರೆ ಹಾಲು ಮುಂತಾದ ವಸ್ತುಗಳ ಬೆಲೆಯಲ್ಲಿ ದಿನದಿಂದ ದಿನಕ್ಕೆ ವ್ಯತ್ಯಾಸವಾಗುತ್ತಿದ್ದರೂ ಹಲವಾರು ವರ್ಷಗಳಿಂದಲೂ ಸೂಪರ್ ಪೇಡಾ ಪ್ಯಾಕೇಟ್ ಬೆಲೆ ಮಾತ್ರ ೩೫ ರುಪಾಯಿ ಅಷ್ಟೇ ಇದೆ. ರುಚಿಯಲ್ಲಿ ರಾಜಿಯಾಗದೆ ಕೈಗೆಟುಕುವ ಬೆಲೆಯಲ್ಲಿ ಸವಿ ತಿನಿಸಿನ್ನ ಪೂರೈಸುತ್ತಿರುವ ದೀಪಾ ಭಟ್ಟ ಅವರ ಪೇಡಾ ಉದ್ಯಮ ಮತ್ತಷ್ಟು ವಿಸ್ತರಿಸಲಿ ಎನ್ನುವ ಹಾರೈಕೆ ಮುಂಜಾವಿನದು.


Leave a Comment