ಹೊನ್ನಾವರ – ಜಿಲ್ಲೆಯಲ್ಲಿ ಸೈಬರ್ ಅಪರಾಧ ಪ್ರಕರಣಗಳು ಹೆಚ್ಚುತ್ತಿದ್ದು ಸಾರ್ವಜನಿಕರು ಜಾಗೃತೆ ವಹಿಸಬೇಕು. ಕಾನೂನು ಸುರಕ್ಷತೆ ಕಾಪಾಡುವ ನಿಟ್ಟಿನಲ್ಲಿ ಸಾರ್ವಜನಿಕರು ಪೊಲೀಸ್ ಇಲಾಖೆಗೆ ಸಹಕಾರ ನೀಡುವಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶಿವಪ್ರಕಾಶ ದೇವರಾಜು ಮನವಿ ಮಾಡಿದರು.

ಅವರು ಪಟ್ಟಣದ ಶರಾವತಿ ಕಲಾಮಂದಿರದಲ್ಲಿ ಪೊಲೀಸ್ ಇಲಾಖೆಯ ಸಹಕಾರದಲ್ಲಿ ನಡೆದ ಜನಸಂಪರ್ಕ ಸಭೆಯಲ್ಲಿ ಮಾತನಾಡುತ್ತಿದ್ದರು. ಹೆದ್ದಾರಿ ಅಪಘಾತ ಸಂಖ್ಯೆಯಲ್ಲಿ ಹೆಚ್ಚಳವಾಗುತ್ತಿದ್ದು ಸಾವಿನ ಪ್ರಮಾಣವೂ ಹೆಚ್ಚಿದೆ. ಇಲಾಖೆಗೆ ಲಭ್ಯವಿರುವ ಮಾಹಿತಿ ಪ್ರಕಾರ ಹೆಚ್ಚುಕಡಿಮೆ ಜಿಲ್ಲೆಯಲ್ಲಿ ದಿನಕ್ಕೊಂದು ಸಾವು ರಸ್ತೆ ಅಪಘಾತದಲ್ಲಿ ಸಂಭವಿಸುತ್ತಿದೆ. ಹೀಗೆ ಸಂಭವಿಸುವ 60 ಪ್ರತಿಶತ: ಸಾವಿಗೆ ಸವಾರರು ಹೆಲ್ಮೆಟ್ ಧರಿಸದಿರುವುದೇ ಕಾರಣವಾಗುತ್ತಿದೆ. ರಸ್ತೆ ಅಪಘಾತವಾದಾಗ ಸಾವಿನ ಸಾಧ್ಯತೆಯನ್ನು ತಡೆಯಲು ಹೆಲ್ಮೆಟ್ ಮತ್ತು ಸೀಟ್ ಬೆಲ್ಟ್ ಧರಿಸುವುದನ್ನು ಎಲ್ಲರೂ ಪಾಲಿಸಬೇಕು ಎಂದು ಕರೆನೀಡಿದರು.
ಬೀಡಾಡಿ ದನಗಳಿಗೆ ದೊಡ್ಡಿ ನಿರ್ಮಿಸುವಂತೆ ಒತ್ತಾಯ
ಕರ್ನಾಟಕ ಕ್ರಾಂತಿ ರಂಗದ ಜಿಲ್ಲಾಧ್ಯಕ್ಷ ಮಂಗಲದಾಸ ನಾಯ್ಕ, ಹುಸೇನ್ ಖಾದ್ರಿ ಮುಂತಾದವರು ಹೆದ್ದಾರಿಯಲ್ಲಿ ಸಂಭವಿಸುತ್ತಿರುವ ಅಪಘಾತಗಳಿಗೆ ಬೀಡಾಡಿ ದನಗಳು ಕಾರಣವಾಗುತ್ತಿದೆ. ಬೀಡಾಡಿ ದನಗಳಿಗೆ ರಿಪ್ಲೆಕ್ಟರ್ ಬೆಲ್ಟ್ಗಳನ್ನು ಅಳವಡಿಸುವ ಜೊತೆಗೆ ಪುರಸಭೆ, ಗ್ರಾಮಪಂಚಾಯತಗಳಲ್ಲಿ ದನದ ದೊಡ್ಡಿಗಳನ್ನು ನಿರ್ಮಿಸಿ ಬೀಡಾಡಿ ದನಗಳನ್ನು ಅಲ್ಲಿ ಕಟ್ಟಿ ಮಾಲಕರಿಂದ ದಂಡ ವಸೂಲಿ ಮಾಡಿಕೊಂಡು ದನಕರುಗಳನ್ನು ಅವರಿಗೆ ನೀಡುವ ವ್ಯವಸ್ಥೆ ಜಾರಿಯಾಗಬೇಕು. ಈ ಬಗ್ಗೆ ಜಿಲ್ಲಾಧಿಕಾರಿಗಳ ಗಮನ ಸೆಳೆದು ಸ್ಥಳೀಯಾಡಳಿತಗಳಿಗೆ ನಿರ್ದೇಶನ ಮಾಡುವಂತೆ ಒತ್ತಾಯಿಸಿದರು.
ಮಾದಕ ಲೋಕದ ವಿರುದ್ಧದ ಹೋರಾಟ ನಿರಂತರ.. ಆತ್ಮೀಯರೆಂದು ಮಾಹಿತಿ ಮುಚ್ಚಿಡದಿರಿ
ರಾಜ್ಯದಲ್ಲಿ ದೊಡ್ಡಮಟ್ಟದಲ್ಲಿ ಸುದ್ದಿಯಾಗಿರುವ ಮಾದಕ ದ್ರವ್ಯ ಸೇವನೆ, ಸಾಗಾಟ ಮತ್ತು ಮಾರಾಟವನ್ನು ತಡೆಯುವ ನಿಟ್ಟಿನಲ್ಲಿ ಜಿಲ್ಲೆಯಲ್ಲಿಯೂ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗಿದೆ. ಕಳೆದ ನಾಲ್ಕು ತಿಂಗಳ ಅವಧಿಯಲ್ಲಿ ಮೂವತ್ತಕ್ಕೂ ಹೆಚ್ಚು ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಮಾದಕ ಲೋಕದ ವಿರುದ್ಧದ ಪೊಲೀಸರ ಹೋರಾಟ ಒಂದೆರಡು ದಿನಕ್ಕೆ ಸೀಮಿತವಾಗಲಾರದು ಅದು ನಿರಂತರ ಪ್ರಕ್ರಿಯೆಯಾಗಲಿದೆ. ಮಾದಕ ದ್ರವ್ಯ ಸಮಾಜದ ದೊಡ್ಡ ಪಿಡುಗಾಗಿದ್ದು ಇದರಲ್ಲಿ ಭಾಗಿಯಾದವರು ಎಷ್ಟೇ ಆತ್ಮೀಯರಾಗಿರಲಿ, ಹತ್ತಿರದ ಸಂಬಂಧಿಕರಾಗಿರಲಿ ಮಾಹಿತಿಯನ್ನು ಮುಚ್ಚಿಡುವ ಕೆಲಸವನ್ನು ಯಾರೂ ಮಾಡಬಾರದು. ಇಂದು ಬೇರೆಯವರ ಮನೆಯ ಮಕ್ಕಳು ಹಾಳಾದರೆ ನಾಳೆ ನಮ್ಮ ಮನೆ ಮಕ್ಕಳು ಇದಕ್ಕೆ ಬಲಿಯಾಗುತ್ತಾರೆನ್ನುವುದನ್ನು ಅರ್ಥಮಾಡಿಕೊಳ್ಳಬೇಕು ಎಂದು ಎಸ್ಪಿ ಬುದ್ಧಿಮಾತು ಹೇಳಿದರು.
ಸಭೆಯಲ್ಲಿ ಭಟ್ಕಳ ಉಪ ವಿಭಾಗದ ಎ.ಎಸ್ಪಿ ನಿಖಿಲ್ ಬಿ, ಹೊನ್ನಾವರ ವೃತ್ತ ನಿರೀಕ್ಷಕ ಶ್ರೀಧರ ಎಸ್.ಆರ್, ಪಿ.ಎಸ್.ಐ ಶಶಿಕುಮಾರ್ ಸಿ.ಆರ್, ಹೊನ್ನಾವರ ಠಾಣೆಯ ಪೊಲೀಸ್ ಅಧಿಕಾರಿಗಳು, ಸಿಬ್ಬಂದಿಗಳು ಹಾಗೂ ನೂರಾರು ಸಂಖ್ಯೆಯ ಸಾರ್ವಜನಿಕರು ಪಾಲ್ಗೊಂಡಿದ್ದರು.
ಘಟನೆ ಸಂಭವಿಸುವ ಮೊದಲೇ ಮಾಹಿತಿ ನೀಡಿ – ಎರಡು ಮೂರು ವರ್ಷಗಳಿಗೊಮ್ಮೆ ವರ್ಗಾವಣೆಯಾಗುವ ಪೊಲೀಸ್ ಅಧಿಕಾರಿಗಳಿಗಿಂತಲೂ ಹೆಚ್ಚಿನ ಮಾಹಿತಿ ಮತ್ತು ಸಂಪರ್ಕ ಇಲ್ಲಿಯೇ ಹುಟ್ಟಿ ಬೆಳೆದಿರುವ ಬದುಕು ಕಟ್ಟಿಕೊಂಡಿರುವ ಸ್ಥಳೀಯರಿಗಿರುತ್ತದೆ. ಹೆಚ್ಚಿನ ಘಟನೆಗಳು ನಡೆಯುವ ಪೂರ್ವದಲ್ಲಿ ಸಾರ್ವಜನಿಕರಿಗೆ ಮಾಹಿತಿ ಇರುತ್ತದೆ. ಆ ಘಟನೆ ನಡೆಯವ ಮೊದಲೇ ಅದನ್ನು ಪೊಲೀಸರೊಂದಿಗೆ ಹಂಚಿಕೊಂಡಾಗ ಮಾತ್ರ ಮಾಹಿತಿ ಪ್ರಯೋಜನಕ್ಕೆ ಬರುತ್ತದೆ. ಇಲ್ಲವಾದರೆ ಏನೂ ಉಪಯೋಗವಿಲ್ಲ. ಕಾನೂನು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಸಹಾಯವಾಗಬಲ್ಲ ಮಾಹಿತಿಗಳಿದ್ದರೆ ಪೊಲೀಸರೊಂದಿಗೆ ಹಂಚಿಕೊಳ್ಳಲು ಸಾರ್ವಜನಿಕರು ಮುಂದಾಗಬೇಕು. – ಶಿವಪ್ರಕಾಶ ದೇವರಾಜು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಉ.ಕ
ಯುವಕರು ಮಾತು ಕೇಳುತ್ತಿಲ್ಲ..! – ಡ್ರಗ್ಸ್ ಬಗ್ಗೆ ಯುವ ಜನತೆಯಲ್ಲಿ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಹಳ್ಳಿ ಹಳ್ಳಿಯ ಯುವಕರನ್ನು ಒಟ್ಟು ಸೇರಿಸಿ ಸಂಪರ್ಕ ಸಭೆ ನಡೆಸಬೇಕು ಎನ್ನುವ ಸಾರ್ವಜನಿಕರ ಬೇಡಿಕೆಗೆ ಪ್ರತಿಕ್ರಿಯಿಸಿದ ಎಸ್ಪಿ ಶಿವಪ್ರಕಾಶ ದೇವರಾಜು “ ನಮ್ಮ ಉದ್ದೇಶವೂ ಯುವ ಜನಾಂಗವನ್ನು ಮಾದಕ ಲೋಕದ ಕಬಂಧ ಬಾಹುಗಳಿಂದ ರಕ್ಷಿಸುವುದೇ ಆಗಿದೆ ಆದರೆ ಎಷ್ಟೇ ಶಿಬಿರಗಳನ್ನು ಮಾಡಿ ಕಿವಿಮಾತು ಹೇಳಿದರೂ ಯುವಕರು ಮಾತೇ ಕೇಳುತ್ತಿಲ್ಲ ಎಂದು ವಿಷಾದ ವ್ಯಕ್ತಪಡಿಸಿದರು.”
Leave a Comment