ಕಾಳುಮೆಣಸಿನ ರಾಣಿ ಎಂದೇ ಪ್ರಖ್ಯಾತಿ ಗಳಿಸಿದ್ದ ಚೆನ್ನಭೈರಾದೇವಿಯ ಆಡಳಿತದಲ್ಲಿ ಸುವರ್ಣಯುಗ ಕಂಡಿದ್ದ ಗೇರಸೊಪ್ಪಾ ಸಂಸ್ಥಾನದ ಗತ ಕಾಲದ ಕಥೆ ಹೇಳುವ ಕೋಟೆ
ಹೊನ್ನಾವರ – ಪಶ್ಚಿಮಘಟದ ತಪ್ಪಲಿನ ಗೇರಸೊಪ್ಪಾದ ಗೊಂಡಾರಣ್ಯದಲ್ಲಿ ನಿರ್ಮಾಣವಾಗಿ ಪೋರ್ಚುಗೀಸರೊಂದಿಗಿನ ಯುದ್ಧದಲ್ಲಿ ರಾಣಿ ಚೆನ್ನಬೈರಾದೇವಿಯ ಪಾಲಿಗೆ ಗೆಲುವನ್ನು ತಂದುಕೊಡುವಲ್ಲಿ ಪ್ರಮುಖ ಪಾತ್ರವಹಿಸಿದ್ದ ಕಾನೂರು ಕೋಟೆ ಕಾಲದ ಹೊಡೆತದ ಜೊತೆ ಪುರಾತತ್ವ ಇಲಾಖೆಯಿಂದಲೂ ಅವಗಣನೆಗೊಳಗಾಗಿ ವಿನಾಶದ ಅಂಚನ್ನು ತಲುಪಿದೆ.

ಹೊನ್ನಾವರ ತಾಲೂಕಿಗೆ ಹತ್ತಿರದಲ್ಲಿದ್ದರೂ ಅಧಿಕೃತವಾಗಿ ಸಾಗರ ತಾಲೂಕು ಅರಣ್ಯ ವ್ಯಾಪ್ತಿಗೊಳಪಟ್ಟಿರುವ ಪ್ರದೇಶದಲ್ಲಿರುವ ಕೋಟೆಯನ್ನು ನಿರ್ಮಿಸಲಾಗಿದೆ. 1552 ರಿಂದ 1606 ವರೆಗೆ ಗೇರಸೊಪ್ಪಾ ಸಂಸ್ಥಾನವನ್ನಾಳಿದ ವೀರ ಮಹಿಳೆ ಚೆನ್ನಭೈರಾದೇವಿ ಎನ್ನುವ ಸಂಗತಿ ಇತಿಹಾಸದ ಪುಟಗಳಲ್ಲಿ ದಾಖಲಾಗಿದೆ. ಸಾಳ್ವ ವಶಂದ ದಿಟ್ಟೆ ಚೆನ್ನಭೈರಾದೇವಿ ಗೇರಸೊಪ್ಪಾವನ್ನು ರಾಜಧಾನಿಯನ್ನಾಗಿಸಿಕೊಂಡು ಹೈವ ತುಳುವ ಕೊಂಕಣ ಪ್ರದೇಶಗಳನ್ನು ಆಳುತ್ತಿದ್ದಳು.
ಅದಾಗಲೇ ದೇಶದಲ್ಲಿ ಬೇರೂರಿದ್ದ ಪೋರ್ಚುಗೀಸರು ತಮ್ಮ ಬಲವನ್ನು ವೃದ್ಧಿಸಿಕೊಂಡು ಇಲ್ಲಿನ ಆಳರಸರಮೇಲೆ ದಾಳಿಮಾಡಲು ಪ್ರಾರಂಭಿಸಿದ್ದರು. ಗೇರಸೊಪ್ಪಾ ನಗರವೂ ಒಂದಲ್ಲ ಒಂದು ದಿನ ಇಂತಹ ದಾಳಿಗೆ ಒಳಗಾಗಲಿದೆ ಎನ್ನುವ ಮುಂದಾಲೋಚನೆಯಿಂದಲೇ ದುರ್ಗಮವಾದ ಕಡಿದಾದ ಬೆಟ್ಟದ ತುದಿ ಕಾನೂರಿನಲ್ಲಿ ಕೋಟೆ ನಿರ್ಮಿಸಲು ರಾಣಿ ಮುಂದಾಗಿದ್ದಳು ಎಂದು ಇತಿಹಾಸಕಾರರು ಅರ್ಥೈಸಿದ್ದಾರೆ.
ಆಪತ್ಕಾಲದಲ್ಲಿ ನೆರವಾಗಲೆಂದು ದವಸ ಧಾನ್ಯ, ಧನ ಕನಕಗಳ ಜೊತೆ ಮದ್ದು ಗುಂಡುಗಳನ್ನೂ ಈ ಕೋಟೆಯಲ್ಲಿ ಸಂಗ್ರಹಿಸಿಡಲಾಗಿತ್ತು ಎನ್ನುವುದಕ್ಕೆ ಸಾಕಷ್ಟು ಸಾಕ್ಷಿಗಳು ಇಂದಿಗೂ ಲಭ್ಯವಿದೆ. 1559ರಲ್ಲಿ ಪೊರ್ಚುಗೀಸ್ ಕ್ಯಾಪ್ಟನ್ ಲೂಯಿಸ್ ಅಟಾಯ್ದೆ ಎಂಬಾತ ಗೇರಸೊಪ್ಪಾದಮೇಲೆ ದಾಳಿಮಾಡಿದಾಗ ಇಡೀ ನಗರ ನಿರ್ಜನವಾಗಿ ಪ್ರದೇಶವಾಗಿತ್ತು. ರಾಣಿಸಮೇತ ಎಲ್ಲರೂ ಕಾನೂರು ಕೋಟೆಯಲ್ಲಿ ರಕ್ಷಣೆ ಪಡೆದಿದ್ದಾರೆನ್ನುವುದನ್ನು ತಿಳಿದ ಲೂಯಿಸ್ ಮತ್ತು ಆತನ ಸೈನಿಕರು ಕಡಿದಾದ ಬೆಟ್ಟವನ್ನು ಏರತೊಡಗಿದಾಗ ದೊಡ್ಡ ದೊಡ್ಡ ಬಂಡೆಗಲ್ಲುಗಳನ್ನು ಬೆಟ್ಟದಮೇಲಿಂದ ಉರುಳಿಸಿ ಪೊರ್ಚುಗೀಸ್ ಸೈನ್ಯವನ್ನು ಹಿಮ್ಮೆಟ್ಟಿಸಲಾಯಿತು. ಇದೇ ಕಾರಣಕ್ಕೆ ಕಾನೂರು ಕೋಟೆಗೆ ಉರುಳುಗಲ್ಲು ಕೋಟೆ ಎಂದೂ ಕರೆಯುತ್ತಾರೆ.

ಸುವರ್ಣಕ್ಷರಗಳಲ್ಲಿ ಬರೆದಿಡಬಹುದಾದ ಐತಿಹಾಸಿಕ ಸಂಗತಿಗಳ ಜೊತೆ ಎಂತವರನ್ನೂ ಅಚ್ಛರಿಯ ಮಡುವಿನಲ್ಲಿ ಕೆಡವುವ ಅಭೇದ್ಯ ಕೋಟೆಯನ್ನು ಕಾಳಜಿಯಿಂದ ಕಾಪಾಡಿಕೊಳ್ಳಬೇಕಾದುದು ಜವಾಬ್ಧಾರಿಯುತ ಇಲಾಖೆಯ ಕರ್ತವ್ಯವಾಗಿತ್ತು. ಆದರೆ ನಾಗರೀಕ ಸಮಾಜದಿಂದ ದೂರದಲ್ಲಿ ದಟ್ಟಡವಿಯಲ್ಲಿರುವ ಕಾರಣಕ್ಕೋ ಎನೋ ಕಾನೂರು ಕೋಟೆ ಇನ್ನಿಲ್ಲದಂತ ದಿವ್ಯ ನಿರ್ಲಕ್ಷ್ಯಕ್ಕೊಳಗಾಗಿದೆ. ಕೊಟೆಯೊಳಗಿನ ದೇವಾಲಯಗಳು ದ್ವಜ ಸ್ಥಂಭ ಮುಂತಾದವು ನಿಧಿಯಾಸೆಗೆ ನುಜ್ಜುಗುಜ್ಜಾಗಿವೆ. ಸುರಂಗಮಾರ್ಗ, ರಾಣಿವಾಸ, ಬಾವಿ, ಕೋಟೆಯ ಗೋಡೆಗಳು ಸಂಪೂರ್ಣ ಶಿಥಿಲವಾಗಿ ನಾಮಾವಶೇಷವಾಗುವ ದಿನವನ್ನು ಎದುರು ನೋಡುತ್ತಿರುವಂತೆ ಭಾಸವಾಗುತ್ತಿದೆ.
ಆಧುನಿಕ ಪ್ರವಾಸೋದ್ಯಮಕ್ಕೆ ಕೋಟಿ ಕೋಟಿ ವ್ಯಯಿಸುತ್ತಿರುವ ಸರ್ಕಾರಗಳು ಕಾನೂರು ಕೋಟೆಯಂತ ಐತಿಹಾಸಿಕ ಮಹತ್ವದ ತಾಣಗಳನ್ನು ಅಭಿವೃದ್ಧಿಪಡಿಸಿ ಪ್ರವಾಸೋದ್ಯಮಕ್ಕೆ ಅಣಿಗೊಳಿಸಿದ್ದೇ ಆದರೆ ಇಂದಿನ ಜನಾಂಗಕ್ಕೆ ಈ ನೆಲದ ಭವ್ಯ ಇತಿಹಾಸವನ್ನು ಪರಿಚಯಿಸುವ ಜೊತೆಗೆ ಪ್ರವಾಸಿಗರನ್ನು ಸೆಳೆಯುವುದಕ್ಕೂ ಸಾಧ್ಯವಾಗುತ್ತಿತ್ತು. ಕೋಟೆಯನ್ನು ಪ್ರವೇಶಿಸುವುದಕ್ಕೆ ಪರವಾನಿಗೆ ಪಡೆದುಕೊಳ್ಳಬೇಕು ಎನ್ನುವ ಅರಣ್ಯ ಇಲಾಖೆ ಅದೇ ಕಾಳಜಿಯನ್ನು ಕೋಟೆಯ ರಕ್ಷಣೆಗೂ ತೋರಬೇಕು ಎನ್ನುವ ಒತ್ತಾಯವಿದೆ.

ವಿಶಾಲವಾದ ಕೋಟೆಯ ಒಳಗೆ ಎತ್ತರದ ಪ್ರದೇಶದಲ್ಲಿ ಹಲವಾರು ಕೆರೆಗಳನ್ನು ನಿರ್ಮಿಸಿದ್ದು ಕಾಲುವೆಗಳ ಮೂಲಕ ಕೆರೆಯ ನೀರನ್ನು ಅಗತ್ಯವಿದ್ದಲ್ಲಿಗೆ ಸರಬರಾಜು ಮಾಡಲಾಗುತ್ತಿತ್ತು ಎನ್ನುವದನ್ನು ಋಜುವಾತುಪಡಿಸುವ ರಚನೆಗಳು ಇಂದಿಗೂ ಅಸ್ಥಿತ್ವದಲ್ಲಿದೆ.
ಗೇರಸೊಪ್ಪಾ-ಖಂಡೋಡಿ-ಬ್ಯಾಗೋಡಿ ಮೂಲಕ ಕಾಲ್ನಡಿಗೆಯಲ್ಲಿ ಸಾಗಿದರೂ ಕಾನೂರು ಕೋಟೆ ತಲುಪಬಹುದು. ಆದರೆ ಸುಮಾರು 10 ಕಿಲೋಮೀಟರ್ ದೂರದ ಈ ಕಾಡಿನ ಹಾದಿ ದುರ್ಗಮವಾದುದ್ದು ಮತ್ತು ಸವಾಲುಗಳಿಂದ ಕೂಡಿರುತ್ತದೆ. ಸಾಗರ ತಾಲೂಕಿನ ಕಾರ್ಗಲ್ ಮೂಲಕ ತೆರಳಿದರೆ ಕೋಟೆ ಇರುವ ಸ್ಥಳದವರೆಗೂ ವಾಹನದಲ್ಲಿ ಸಾಗಬಹುದಾಗಿದೆ.

1552 ರಿಂದ 1606 ವರೆಗೆ ಗೇರಸೊಪ್ಪಾವನ್ನು ಆಳಿದ ರಾಣಿ ಚೆನ್ನಭೈರಾದೇವಿಯನ್ನು ಕೆಳದಿಯ ಅರಸ ಹಿರಿಯ ವೆಂಕಟ್ಟಪ ನಾಯಕ ಮತ್ತು ಬಿಳಗಿಯ ಅರಸರು ಸೇರಿ ಒಪ್ಪಂದಮಾಡಿಕೊಂಡು ದಳವಾಯಿ ಲಿಂಗಣ್ಣ ಎನ್ನುವ ಸರದಾರನ ಸಹಾಯ ಪಡೆದು ಬಂಧಿಸಿ ಇಕ್ಕೇರಿ ಕೋಟೆಯಲ್ಲಿ ಸೆರೆಯಲ್ಲಿಟ್ಟಿದ್ದು ಅಲ್ಲಿಯೇ ಆಕೆ ಕೊನೆಯುಸಿರೆಳದಳು ಎನ್ನುತ್ತದೆ ಇತಿಹಾಸದ ಸಾಲುಗಳು.
ಕ್ರಿ.ಶ 1552 ರಿಂದ 1606 ಅವಧಿಯಲ್ಲಿ ನಿರ್ಮಾಣವಾದ ಕೋಟೆ
ಶತ್ರುಗಳ ದಾಳಿಯನ್ನು ಸುಲಭವಾಗಿ ಹಿಮ್ಮೆಟ್ಟಿಸಲು ಅನುಕೂಲವಾಗುವಂತೆ ಮೂರು ದಿಕ್ಕಿನಲ್ಲಿ ಆಳವಾದ ಕಣಿವೆಯುಳ್ಳ ಪರ್ವತದ ಶಿಖರದಲ್ಲಿ ಕೋಟೆ ಇದೆ.
ರಾತ್ರಿ ಸಮಯದಲ್ಲಿ ಕೋಟೆಯಮೇಲೆ ನಿಂತು ನೋಡಿದರೆ ಹೊನ್ನಾವರ ಮತ್ತು ಭಟ್ಕಳ ಬಂದರಿನಲ್ಲಿರುವ ಲೈಟ್ ಹೌಸ್ ಕಾಣಿಸುತ್ತದೆ.
ಜಿನ ದೇವಾಲಯ, ಶಿವ ದೇವಾಲಯ, ಬಾವಿ, ಕಲ್ಲಿನ ದ್ವಜಸ್ಥಂಭ, ರಾಣಿವಾಸ, ಸುರಂಗ ಮಾರ್ಗ, ಬಾವಿ ಕೋಟೆಯಲ್ಲಿನ ಕುರುಹುಗಳಾಗಿ ಉಳಿದಿವೆ.






Leave a Comment