ಭೂಮಿಯೇ ಹಾಸಿಗೆ ಗಗನವೇ ಚಪ್ಪರ ಕಣ್ತುಂಬ ನಿದ್ದೆ ಬಡವನಿಗೆ.. ಮೆತ್ತನೆ ಹಾಸಿಗೆ ಸುಖದ ಸುಪತ್ತಿಗೆ ಬಾರದು ನಿದ್ದೆ ಧನಿಕನಿಗೆ…ಎನ್ನುವ ಕನ್ನಡ ಚಲನಚಿತ್ರ ಗೀತೆಯನ್ನು ಬಹಳಷ್ಟುಜನ ಕೇಳಿರುತ್ತೇವೆ. ಆದರೆ ಭೂಮಿಯನ್ನೇ ಹಾಸಿಗೆ ಮಾಡಿಕೊಂಡವರ ಕಡು ಕಷ್ಟದ ಬದುಕಿನ ಒಳ ನೋಟ ಹೊರ ಜಗತ್ತಿಗೆ ತೆರೆದುಕೊಳ್ಳುವುದಕ್ಕಿಂತ ಅನುಕಂಪದ ಮಾತುಗಳಲ್ಲಿ ಕಳೆದು ಹೋಗುವದೇ ಹೆಚ್ಚು. ತಾಲೂಕಿನ ಹಳದಿಪುರ ಮತ್ತು ಕರ್ಕಿಯ ನಡುವೆ ಹೆದ್ದಾರಿ ಪಕ್ಕದಲ್ಲಿ ಉಟ್ಟುಬಿಟ್ಟ ಹಳೆಯ ಸೀರೆಗಳನ್ನೇ ಬಳಸಿ ಜೋಪಡಿ ಕಟ್ಟಿಕೊಂಡು ಹತ್ತಾರು ಬಡ ಕುಟುಂಬಗಳು ವಾಸಿಸುತ್ತಿವೆ.

ಮುಂಡಗೋಡದಿಂದ ಅಲೆಮಾರಿಗಳಾಗಿ ಬಂದು ಇಲ್ಲಿನ ಸುಡು ಬಿಸಿಲಲ್ಲಿ ರಸ್ತೆ, ಕಟ್ಟಡ ನಿರ್ಮಾಣದಂತ ಅಪಾರ ದೈಹಿಕ ಶ್ರಮವನ್ನು ನಿರೀಕ್ಷಿಸುವ ಕೆಲಸ ಮಾಡುತ್ತಿರುವ ಇವರು ಕಳೆದ ಮಾರ್ಚ ತಿಂಗಳಲ್ಲಿ ಲಾಕ್ಡೌನ್ ಜಾರಿಯಾದಾಗ ಕೆಲಸವೂ ಇಲ್ಲದೆ ಊರಿಗೆ ಮರಳಲೂ ಸಾಧ್ಯವಾಗದೇ ಪರಿತಪಿಸುತ್ತಿದ್ದಾಗ ಸರ್ಕಾರ ತಾಲೂಕಿನ ವಸತಿನಿಲಯದಲ್ಲಿ ಇವರಿಗೆ ಊಟ ವಸತಿ ಕಲ್ಪಿಸಿ ಬಸ್ಗಳಲ್ಲಿ ಅವರವರ ಊರುಗಳಿಗೆ ತಲುಪಿಸುವ ಕೆಲಸ ಮಾಡಿತ್ತು.
ಇದೀಗ ಕೆಲಸ ಅರಸಿ ಮತ್ತೆ ತಾಲೂಕಿಗೆ ಮರಳಿರುವ ಇವರು ದಿನವಿಡೀ ದುಡಿದು ದೇಹದ ದಣಿವಾರಿಸಿಕೊಳ್ಳಲು ಹಳದಿಪುರ ಕರ್ಕಿ ಭಾಗದ ರಸ್ತೆ ಪಕ್ಕದ ಸ್ಥಳವನ್ನೇ ಆಯ್ಕೆಮಾಡಿಕೊಂಡಿದ್ದಾರೆ. ಬಟ್ಟೆ ಬರೆಗಳನ್ನಿಡಲು ಬೀರು ಇಲ್ಲ, ಸೆಕೆಯಾದರೆ ಪ್ಯಾನ್ ಗಾಳಿಯಿಲ್ಲ, ವಿದ್ಯುತ್ ಬೆಳಕಿಲ್ಲ. ಅದೇ ಹಳೆಯ ಪ್ಲಾಸ್ಟಿಕ್ ಕೊಡದ ಕುಡಿಯುವ ನೀರು, ಚೆಲ್ಲಿದ ಕೂಳನ್ನು ಹೆಕ್ಕಿ ತಿನ್ನುವ ಕೋಳಿ, ಅನ್ನದ ತಿಳಿ ಬೀಸಾಡಿದ ಆಹಾರವನ್ನು ಅರಸಿ ಬರುವ ಜಾನುವಾರುಗಳ ಜೊತೆಯೇ ಬದುಕಿನ ಬಂಡಿ ಎಳೆಯುತ್ತಿರುವವರ ಕಷ್ಟದ ಜೀವನ ಸಕಲ ಸವಲತ್ತುಗಳಿದ್ದು ಸಣ್ಣ ಪುಟ್ಟ ವಿಷಯಗಳಿಗೆ ಮನಸ್ಸಿನ ಸ್ಥಿಮಿತ ಕಳೆದುಕೊಂಡು ಬದುಕಿಗೇ ವಿದಾಯ ಹೇಳುವವರಿಗೆಲ್ಲಾ ಪಾಟದಂತಿದೆ.
Leave a Comment