ಪಟ್ಟಣದ ಹೃಯಭಾಗದಲ್ಲಿ ಐದೂವರೆ ಕೋಟಿ ರುಪಾಯಿ ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ನೂತನ ಬಸ್ಟ್ಯಾಂಡ್ ಕಾಮಗಾರಿ ಭರದಿಂದ ಸಾಗಿದ್ದು ಒಂದು ವರ್ಷದೊಳಗೆ ನಿರ್ಮಾಣಕಾಮಗಾರಿ ಪೂರ್ಣಗೊಂಡು ತಾಲೂಕಿನ ಜನರ ಬಹುದಿನದ ಕನಸು ಸಾಕಾರಗೊಳ್ಳಬಹುದಾ ಎನ್ನುವ ನಿರೀಕ್ಷೆ ಮೂಡಿದೆ.

ಪೆಬ್ರವರಿ 29 ರಂದು ಸಾರಿಗೆ ಸಚಿವ ಲಕ್ಷ್ಮಣ ಸವದಿ ಅವರೇ ಸ್ವತ: ಶಿಲಾನ್ಯಾಸ ನೆರವೇರಿಸಿದ ನಂತರ ಕೊರೊನಾ ಲಾಕ್ಡೌನ್ ಜಾರಿಯಾಗಿ ಎಲ್ಲಾ ಕೆಲಸ ಕಾರ್ಯಗಳೂ ಸ್ಥಗಿತವಾಗಿದ್ದವು. ಲಾಕ್ಡೌನ್ ತೆರವಾದ ನಂತರ ಕೆಲಸ ಆರಂಭಿಸಿದ ಗುತ್ತಿಗೆದಾರರು ಕೆಲಸಕ್ಕೆ ವೇಗ ನೀಡಿದ್ದಾರೆ. ಕೆಲಸ ಆರಂಭಿಸಿದ ಒಂದೇ ತಿಂಗಳಲ್ಲಿ ಪಿಲ್ಲರ್ಗಳು ಎದ್ದುನಿಲ್ಲುತ್ತಿದೆ. ಬಸ್ಟ್ಯಾಂಡ್ ಮೊದಲಿದ್ದ ಜಾಗದಲ್ಲಿಯೇ ನೂತನ ಬಸ್ ನಿಲ್ದಾಣ ನಿರ್ಮಾಣವಾಗುತ್ತಿರುವ ಹಿನ್ನಲೆಯಲ್ಲಿ ಪ್ರಸ್ಥುತ ಬಸ್ಟ್ಯಾಂಡ್ ಪಕ್ಕದ ರಸ್ತೆಯ್ನೇ ಬಳಸಿಕೊಂಡು ಸಾರಿಗೆ ವ್ಯವಸ್ಥೆಯನ್ನು ನಿರ್ವಹಿಸುತ್ತಿದ್ದಾರೆ. ಕುಡಿಯುವ ನೀರು, ಶೌಚಾಲಯದಂತ ಮೂಲಭುತ ಸೌಲಭ್ಯಗಳೂ ಇಲ್ಲದೆ ಪ್ರಯಾಣಿಕರು ಚಾಲಕರು ನಿರ್ವಾಹಕರಾದಿಯಾಗಿ ಎಲ್ಲರೂ ಪ್ರತಿ ದಿನ ಅನುಭವಿಸುತ್ತಿರುವ ಕಷ್ಟ ಶಾಸಕ ದಿನಕರ ಶೆಟ್ಟಿ ಅವರ ಅರಿವಿಗೂ ಬಂದಂತಿದ್ದು ಆದಷ್ಟುಬೇಗ ಕೆಲಸಮುಗಿಸಲು ಮುತುವರ್ಜಿ ವಹಿಸುತ್ತಿದ್ದಾರೆನ್ನಲಾಗಿದೆ.
ನವೆಂಬರ್ನಿಂದ ಮೇ ಕೊನೆಯವರೆಗೂ ಕೆಲಸ ನಡೆಯುತ್ತಿರುವ ವೇಗವನ್ನು ಕಾಯ್ದುಕೊಂಡರೆ ಮೊದಲ ಹಂತ ಪೂರ್ಣಗೊಳ್ಳಬಹುದು. ಅದು ಸಾಧ್ಯವಾದರೆ ಮುಂದಿನ ಮಳೆಗಾಲ ಬರುವಷ್ಟರಲ್ಲಿ ಬಸ್ಟ್ಯಾಂಡ್ ಬಳಕೆಗೆ ಸಿಗಬಹುದು ಇಲ್ಲವಾದರೆ ಪ್ರಯಾಣಿಕರು ಮಳೆಯಲ್ಲಿಯೇ ಬಸ್ಗಾಗಿ ಕಾಯುವ ದುಸ್ಥಿತಿ ಎದುರಾಗಲಿದೆ. ಶಾಲಾ ಕಾಲೇಜುಗಳ ತರಗತಿ ಆರಂಭವಾಗದಿರುವುದೂ ಸಾರಿಗೆ ಇಲಾಖೆಯ ಪಾಲಿಗೆ ವರವಾಗಿ ಪರಿಣಮಿಸಿದೆ. ಸಮಸ್ಯೆಗಳು ಬಿಗಡಾಯಿಸುವ ಮೊದಲೇ ವ್ಯವಸ್ಥೆಗಳನ್ನು ನಿರ್ಮಿಸಿಕೊಳ್ಳುವುದು ಒಳ್ಳೆಯದು ಎನ್ನುವ ಅಭಿಪ್ರಾಯವಿದೆ.
Leave a Comment